ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ ಸವಾಲು

7

ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ ಸವಾಲು

Published:
Updated:

ಧರ್ಮಸ್ಥಳ: 'ಶಾಸಕರಿಗೆ ಆಮಿಷ ಒಡ್ಡುತ್ತಿರುವುದಕ್ಕೆ ಸಂಬಂಧಿಸಿದಂತೆ ನಾನು ಬಿಡುಗಡೆ ಮಾಡಿದ್ದ ಆಡಿಯೊ ತುಣುಕಿನಲ್ಲಿರುವ ಧ್ವನಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರದ್ದು ಎಂಬ ನನ್ನ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಕೆರೆ ಸಂಜೀವಿನಿ ಯೋಜನೆಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ಆಡಿಯೊ ತುಣುಕಿನಲ್ಲಿ ಇರುವುದು ತಮ್ಮ ಧ್ವನಿ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆ ಧ್ವನಿ ಅವರದ್ದಲ್ಲ ಎಂದು ಅವರು ಸಾಬೀತು ಮಾಡಲಿ. ಆಗ ಅವರ ಬದಲಿಗೆ ನಾನೇ ರಾಜಕೀಯ ನಿವೃತ್ತಿ ಪಡೆಯುವೆ' ಎಂದರು.

ತಾವು ಸಿನಿಮಾ ನಿರ್ಮಾಪಕ ಆಗಿದ್ದುದು ನಿಜ. ಆದರೆ, ಇಂತ ಆಡಿಯೊ ಸೃಷ್ಟಿಸುವ ಅವಶ್ಯಕತೆ ತಮಗಿಲ್ಲ. ತಾವು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ₹ 150  ಕೋಟಿ ಲಂಚದ ಆರೋಪ ಮಾಡಿದ್ದರು. ಆ ಬಳಿಕ ಹೈದರಾಬಾದ್ ನಲ್ಲಿ ಸಿಡಿ ತಯಾರಿಸಲು ಯತ್ನಿಸಿ ಸೋತಿದ್ದರು. ತಾವು ಅಂತಹ ಪ್ರಯತ್ನ ಮಾಡುವುದಿಲ್ಲ. ಸ್ವಲ್ಪ ತಿಳಿವಳಿಕೆ ಇರುವವರಿಗೂ ಅದರಲ್ಲಿರುವ ಧ್ವನಿ ಯಾರದ್ದು ಎಂಬುದು ಗೊತ್ತಾಗುತ್ತದೆ ಎಂದರು.

ಶರಣಗೌಡ ಪಾಟೀಲ ಅವರಿಗೆ ಆಮಿಷ ಒಡ್ಡಲು ಐದು ಕಿಲೋಮೀಟರ್ ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಅವರಿಗೆ ₹50 ಕೋಟಿ ಕೊಟ್ಟು ಬುಕ್ ಮಾಡಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ ಎಂದು ತಾವು ಹೇಳಿಲ್ಲ.ಅಲ್ಲಿ ಮಧ್ಯಸ್ಥಿಕೆ ಮಾಡುತ್ತಿದ್ದ ದೇವದುರ್ಗ ಶಾಸಕ ಶಿನಗೌಡ ನಾಯಕ್ ಆ ರೀತಿ ಪ್ರಸ್ತಾಪಿಸಿದ್ದಾರೆ. ಅದನ್ನೇ ರಮೇಶ್ ಕುಮಾರ್ ಕೂಡ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಆಡಿಯೊ ರೆಕಾರ್ಡಿಂಗ್ ಮಾಡಿಸಿದ್ದು ನಾನಲ್ಲ. ಅಂತಹ ಅವಶ್ಯಕತೆ ನನಗೆ ಇಲ್ಲ. ಯಡಿಯೂರಪ್ಪ ಅದನ್ನು ಮಾಡಿಸಿಕೊಂಡಿದ್ದಾರೆ. ಅರ್ಧ ರಾತ್ರಿಯಲ್ಲಿ ಕರೆದು ಚರ್ಚಿಸುವ ಅಗತ್ಯ ಏನಿತ್ತು ಅವರಿಗೆ? ಅವರೇ ಕರೆದು ಆಮಿಷ ಒಡ್ಡಿದ್ದಾರೆ. ಐದು ಕಿಲೋಮೀಟರ್ ದೂರದಲ್ಲಿ ಕಾರು ನಿಲ್ಲಿಸಿ, ಅಂಗರಕ್ಷಕರನ್ನೂ ಇಳಿಸಿ ಕರೆದುಕೊಂಡು ಹೋಗಿದ್ದಾರೆ. ಸರ್ಕ್ಯೂಟ್ ಹೌಸ್ ನಲ್ಲಿ ಎಲ್ಲ ಕೊಠಡಿಗಳ ದೀಪ ಆರಿಸಿ ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು' ಎಂದು ಪ್ರಶ್ನಿಸಿದರು.

'ನಾನ್ಯಾಕೆ ಆಡಿಯೊ ರೆಕಾರ್ಡ್ ಮಾಡಿಸಲಿ. ಅದನ್ನು ಮಾಡಿಸಿದ್ದು ನಮ್ಮ ಪಕ್ಷದ ಕಾರ್ಯಕರ್ತರೆ. ಅವರೇ ಅದನ್ನು ಹೇಳಿದ್ದಾರೆ. ನಿತ್ಯವೂ ಅವರನ್ನು ಸಂಪರ್ಕಿಸಿ ಹಿಂಸೆ ಕೊಡುತ್ತಿದ್ದರು. ಅದಕ್ಕೆ ಹಾಗೆ ಮಾಡಿದ್ದಾರೆ' ಎಂದು ಹೇಳಿದರು.

ಪ್ರಯತ್ನ ನಿಲ್ಲಿಸಿಲ್ಲ: ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಆಮಿಷ ಒಡ್ಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಯಡಿಯೂರಪ್ಪ ಇನ್ನೂ ನಿಲ್ಲಿಸಿಲ್ಲ. ಆಡಿಯೊ ತುಣುಕು ಹೊರಬಂದ ಬಳಿಕವೂ ಅದೇ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಕೆಲವು ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

'ಸರ್ಕಾರ ಪತನಗೊಳಿಸಲು ಅಗತ್ಯವಾದ ಶಾಸಕರು ತಮ್ಮ ಬಳಿ ಇದ್ದಾರೆ ಎಂದು ಬಿಂಬಿಸುತ್ತಾ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಶುಕ್ರವಾರ ರಾತ್ರಿ ಒಬ್ಬರನ್ನು ಸಂಪರ್ಕ ಮಾಡಿದ್ದರು. ಶನಿವಾರ ಬೆಳಿಗ್ಗೆ ಒಬ್ಬ ಶಾಸಕರನ್ನು ಸಂಪರ್ಕಿಸಿದ್ದಾರೆ. ಹಣ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಆ ಶಾಸಕರು ದೂರವಾಣಿ ಕರೆಮಾಡಿ ನನಗೆ ವಿಷಯ ತಿಳಿಸಿದ್ದಾರೆ' ಎಂದರು.

'ನಾನು ಮುಖ್ಯಮಂತ್ರಿ ಆಗಿರುವವನು. ನನ್ನ ಪಕ್ಷದ ಶಾಸಕರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಮೊನ್ನೆ ಒಂದು ಬಾರಿ ಅನುಭವಿಸಿದ್ದಾರೆ. ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತಿತರರು ಈ ಕೆಲಸದ ಸೂತ್ರದಾರರು' ಎಂದು ಆರೋಪಿಸಿದರು. ಆಡಿಯೊ ಕುರಿತಂತೆ ಸಭಾಧ್ಯಕ್ಷರು ಸೋಮವಾರ ತಮ್ಮ ತೀರ್ಪು ಪ್ರಕಟಿಸಲಿದ್ದಾರೆ. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾವು ಪಲಾಯನವಾದಿಯಲ್ಲ: ವಿಧಾನ ಪರಿಷತ್ ಸ್ಥಾನ ನೀಡಲು ಕುಮಾರಸ್ವಾಮಿ ₹ 30 ಕೋಟಿ ಕೇಳಿದ್ದರು ಎಂಬ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಹಿಂದೆ ನಮ್ಮ ಪಕ್ಷದಲ್ಲಿದ್ದು, ಈಗ ಬಿಜೆಪಿಯಲ್ಲಿರುವ ವಿಜಯ್ ಗೌಡ ಎಂಬುವವರ ಜೊತೆ ನಾನು ಮಾತನಾಡಿರುವ ವಿಡಿಯೊ ಅದು. ಕದ್ದುಮುಚ್ಚಿ ಮಾತನಾಡಿಲ್ಲ. ಎಲ್ಲರ ಎದುರೇ ವಾಸ್ತವ ಪರಿಸ್ಥಿತಿ ಹೇಳಿದ್ದೇನೆ. ಒಮ್ಮೆ ಆ ವಿಡಿಯೊ ಪ್ರಸಾರ ಆಗಿತ್ತು ಆಗಲೇ ಎಲ್ಲವನ್ನು ಮಾತನಾಡಿದ್ದೇನೆ' ಎಂದರು.

ತಾವು ಪಲಾಯನವಾದಿ ಅಲ್ಲ. ಯಡಿಯೂರಪ್ಪ ಮತ್ತು ಬಿಜೆಪಿಯ ಕೇಂದ್ರದ ಮುಖಂಡರು ಯಾವುದೇ ರೀತಿಯ ಪರಿಶೀಲನೆ ಬೇಕಾದರೂ ನಡೆಸಲಿ. ಹಣಕ್ಕೆ ಬೇಡಿಕೆ ಇಟ್ಟಿರುವ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !