ಕುಮಾರಸ್ವಾಮಿ–ಬಿಎಸ್‌ವೈ ಜಟಾಪಟಿ

7
ತನಿಖಾ ಸಂಸ್ಥೆ ಬಳಸಿ ಸರ್ಕಾರ ಅಸ್ಥಿರಕ್ಕೆ ಯತ್ನ: ಆರೋಪ

ಕುಮಾರಸ್ವಾಮಿ–ಬಿಎಸ್‌ವೈ ಜಟಾಪಟಿ

Published:
Updated:

ಬೆಂಗಳೂರು: ಬಿಜೆ‍ಪಿಯು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪವು ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಡುವೆ ಜಟಾಪಟಿಗೆ ಕಾರಣವಾಗಿದೆ.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ‘ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿರೋದು ಸತ್ಯ. ವಿಜಯೇಂದ್ರ ಭೇಟಿ ಮಾಡಿದ್ದಕ್ಕೆ ದಾಖಲೆ ನೀಡಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ಇಲ್ಲದೆ ಮಾತನಾಡುವುದಿಲ್ಲ’ ಎಂದು ಹೇಳಿದರು.

‘ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿರುವುದನ್ನು ಸ್ವತಃ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಎಲ್ಲದಕ್ಕೂ ಶ್ವೇತಪತ್ರ ಹೊರಡಿಸಿ ಎನ್ನುತ್ತಾರೆ. ಇವರಿಗೆ ಶ್ವೇತಪತ್ರ ಹೊರಡಿಸಿದರೆ ಸಮಾಧಾನವಾಗುವುದಿಲ್ಲ. ಎಲ್ಲವನ್ನೂ ಕೇಸರಿಪತ್ರದಲ್ಲೇ ಬಿಡುಗಡೆ ಮಾಡುತ್ತೇನೆ. ಇದರಿಂದ ಅವರಿಗೆ ತೃಪ್ತಿ ಆಗಬಹುದು’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ಇದಕ್ಕೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಾಕ್ಷಿ ಇದ್ದರೆ ನೀಡಲಿ. ಸರ್ಕಾರವನ್ನು ನಾವ್ಯಾಕೆ ಅಸ್ಥಿರಗೊಳಿಸಲಿ. ನಮಗೆ ಬೇರೆ ಕೆಲಸ ಇಲ್ಲವೇ’ ಎಂದು ಪ್ರಶ್ನಿಸಿದರು. ‘ನಾನು ಐಟಿ ಅಧಿಕಾರಿಗಳನ್ನು ಭೇಟಿ ಮಾಡಿಲ್ಲ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು. ‘ಈ ಹೇಳಿಕೆ ಅವರ ಅಸ್ಥಿರ ಮನಸ್ಸಿನ ಕನ್ನಡಿ’ ಎಂದೂ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !