ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳದಲ್ಲಿ ಮಿಂದೆದ್ದ ಭಕ್ತಸಾಗರ

ದೀಪಾರತಿ, ಸಾರ್ವಜನಿಕ ಗಂಗಾಪೂಜೆ, ಸಾಧುಸಂತರ ಪುರಪ್ರವೇಶ
Last Updated 18 ಫೆಬ್ರುವರಿ 2019, 19:26 IST
ಅಕ್ಷರ ಗಾತ್ರ

ತಿ.ನರಸೀಪುರ: ಒಂದು ಕಡೆ ನೆತ್ತಿ ಚುರುಗುಡುವಷ್ಟು ಬಿಸಿಲು, ಅಂಗಾಲಿಗೆ ಚುರುಕು ಮುಟ್ಟಿಸುತ್ತಿದ್ದ ಕಾದ ಮರಳು; ಇವೆರಡನ್ನೂ ತಣಿಸುವಂತಿತ್ತು ಮಹಾ ಮಾಘಸ್ನಾನ. ಈ ಸ್ನಾನಕ್ಕೆ ಭಕ್ತರ ನಂಬುಗೆಯೂ ಸೇರಿ ಎಲ್ಲದರ ಸಂಗಮದಂತೆ ಕಂಡಿತು ಇಲ್ಲಿನ ಮೂರು ನದಿಗಳ ಸಂಗಮ ಕ್ಷೇತ್ರ.

11ನೇ ಮಹಾ ಕುಂಭಮೇಳದ ಎರಡನೇ ದಿನವೂ ಭಕ್ತರು ಪವಿತ್ರ ಸಂಗಮ ಸ್ಥಳದಲ್ಲಿ ಮಿಂದೇಳುತ್ತಿದ್ದರು. ಕಳೆದ ಬಾರಿಯ ಮೇಳಕ್ಕೆ ಬಂದಷ್ಟು ಜನರು ಬಂದಿರಲಿಲ್ಲ. ಇತ್ತೀಚೆಗೆ ಪ್ರಯಾಗದಲ್ಲಿ ಕುಂಭಮೇಳ ಜರುಗಿದ್ದು, ಸಂಖ್ಯೆ ತಗ್ಗಲು ಕಾರಣ ಎನ್ನಲಾಗುತ್ತಿದೆ. ಸಿದ್ಧತೆ ಜೋರಾಗಿದ್ದರೂ, ಹೆಚ್ಚಿನ ಸಂಖ್ಯೆಯ ಭಕ್ತರು ಮಾತ್ರ ಇತ್ತ ಮುಖ ಮಾಡಿಲ್ಲ.

ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಿಂದ ಬಂದವರು ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರಗಳ ಸಂಗಮ ಕ್ಷೇತ್ರದಲ್ಲಿ ಮಿಂದೇಳುತ್ತಿದ್ದರು.‌ ಯಾವುದೇ ಜಾತಿ, ಧರ್ಮ, ಪಂಥಗಳ ಭೇದಭಾವ ಇಲ್ಲದೆ ನೀರಿನಲ್ಲಿ ಮುಳುಗಿ ದೇಹದ ಕೊಳೆಯನ್ನಷ್ಟೇ ಅಲ್ಲ ಮನಸ್ಸಿನ ಕೊಳೆಯನ್ನೂ ತೊಳೆದುಕೊಂಡು ಧನ್ಯತಾ ಭಾವದಿಂದ ಹೆಜ್ಜೆ ಹಾಕಿದರು.

ಒಂದು ತೀರದಲ್ಲಿ ಅಗಸ್ತ್ಯೇಶ್ವರ, ಮತ್ತೊಂದು ತೀರದಲ್ಲಿ ಗುಂಜಾ ನರಸಿಂಹಸ್ವಾಮಿ. ಹರಿ ಮತ್ತು ಹರ ಎರಡೂ ದೇವರು ನೆಲೆಸಿರುವ ಅಪರೂಪದ ಸ್ಥಳವನ್ನು ಭಕ್ತ ಸಮೂಹ ಕಣ್ತುಂಬಿಕೊಳ್ಳುತ್ತಿದೆ.

ನಸುಕಿನಿಂದಲೇ ಇಲ್ಲಿನ ಯಾಗಶಾಲೆಯಲ್ಲಿ ವಿವಿಧ ಪೂಜಾಕೈಂಕರ್ಯಗಳು ಆರಂಭವಾದವು. ಮಾಘಶುದ್ಧ ಚತುದರ್ಶಿ ಆಶ್ಲೇಷ ನಕ್ಷತ್ರದಲ್ಲಿ ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪೂರ್ಣಾಹುತಿಗಳು ನಡೆದವು. ಮಧ್ಯಾಹ್ನ ಸುದರ್ಶನ ಪೂಜೆ, ಹೋಮ, ಪೂರ್ಣಾಹುತಿಗಳು ನೆರವೇರಿದವು.ಆದಿಚುಂಚನಗಿರಿ ಮಠದ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಪೀಠದ ಶಿವಾನಂದಪುರಿ ಸ್ವಾಮೀಜಿ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಿರ್ಮಿಸಿರುವ ಕಾವೇರಿ ವೇದಿಕೆ, ತ್ರಿವೇಣಿ ಸಂಗಮ ವೇದಿಕೆ ಹಾಗೂ ಕಪಿಲಾ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ಜರುಗಿದವು

ಹೆಚ್ಚಾದ ನೀರಿನ ಮಟ್ಟ: ಜನರು ಏಕಕಾಲದಲ್ಲಿ ಸ್ನಾನ ಮಾಡುತ್ತಿರುವುದರಿಂದ ಸ್ವಚ್ಛತೆ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಯಿತು. ಇದರಿಂದ ನದಿ ನೀರಿನ ಮಟ್ಟ ಸ್ವಲ್ಪ ಹೆಚ್ಚಾಯಿತು. ಮರಳಿನ ಮೂಟೆ ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯಲಾರಂಭಿಸಿತು.

ಸಂಗಮ ಸೇತುವೆ ಬಳಿ ಕಾಲ್ತುಳಿತ:

ಮಹಾಕುಂಭಮೇಳದ ಪ್ರಯುಕ್ತ ಸೋಮವಾರ ಸಂಜೆ ಬಾಣಬಿರುಸು ಸಿಡಿಸುವಾಗ ಕಾಲ್ತುಳಿತ ಉಂಟಾಗಿ ಇಬ್ಬರು ಗಾಯಗೊಂಡಿದ್ದಾರೆ.

ಸಂತರ ಪುರಪ್ರವೇಶ

ನೂರಾರು ಮಂದಿ ಸಾಧುಸಂತರು ಸೋಮವಾರ ಸಂಜೆ ಪುರಪ್ರವೇಶ ಮಾಡಿದರು. ಉತ್ತರ ಭಾರತ ಸೇರಿದಂತೆ ವಿವಿಧೆಡಗಳಿಂದ ಬಂದಿದ್ದ ವಿವಿಧ ಪಂಥಗಳಿಗೆ ಸೇರಿದ ಸಾಧುಸಂತರು ತಮ್ಮದೇ ಆದ ವಿಶಿಷ್ಟ ಭಂಗಿಗಳಲ್ಲಿ ತಿ.ನರಸೀಪುರ ಪ್ರವೇಶಿಸಿದರು.

**
*ಭಕ್ತಿಭಾವದಿಂದ ನೆರವೇರಿದ ಸಾರ್ವಜನಿಕ ಗಂಗಾಪೂಜೆ

*ಬೆಳಿಗ್ಗೆ ನೀರಸ, ಮಧ್ಯಾಹ್ನದ ನಂತರ ಭಕ್ತರ ಭೇಟಿ

*ಸಾಧು ಸಂತರ ಪುರಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT