ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಚಿಂತನೆಯ ಕುವೆಂಪು ಕಲಾಕೇಂದ್ರ

ಬೆಂಗಳೂರಿಗೆ ಮತ್ತೊಂದು ಕಲಾಕ್ಷೇತ್ರ
Last Updated 12 ಮೇ 2019, 20:01 IST
ಅಕ್ಷರ ಗಾತ್ರ

ವಿಶ್ವಮಾನವ ಸಂದೇಶ ಸಾರಿದ ಕವಿವರ್ಯ ಕುವೆಂಪು ಅವರು ಕನ್ನಡ ನಾಡಿನ ಸಾಕ್ಷಿಪ್ರಜ್ಞೆ. ಕುವೆಂ‍ಪು ಅವರ ಸಾಹಿತ್ಯದಂತೆಯೇ ಅವರ ಜೀವನದೃಷ್ಟಿಯೂ ಅನನ್ಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹತ್ತಾರು. ಕುವೆಂಪು ಅವರ ಕುಪ್ಪಳ್ಳಿ ನಿವಾಸವು ಮಲೆನಾಡಿನ ಸುಂದರ ಪರಿಸರಕ್ಕೆ ನಿದರ್ಶನವೇ ಆಗಿದೆ. ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನವು ರಾಷ್ಟ್ರಕವಿಯ ಸಂದೇಶಗಳನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದೆ. ಪ್ರತಿಷ್ಠಾನದ ಕಾರ್ಯ ಬೆಂಗಳೂರಿನಗೂ ವಿಸ್ತರಣೆಯಾಗಿದ್ದು, ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಲಾಕೇಂದ್ರವೊಂದು ಶೀಘ್ರದಲ್ಲೇ ತಲೆ ಎತ್ತಲಿದೆ.

ನಾಗರಬಾವಿ ಸಮೀಪದ ವಿಶ್ವೇಶ್ವರಯ್ಯ ಲೌಔಟ್‌ನಲ್ಲಿ ಸುಮಾರು 30 ಸಾವಿರ ಚದರ ಅಡಿ ಜಾಗವನ್ನು ಬಿಡಿಎನಿಂದ ಪ್ರತಿಷ್ಠಾನ ಭೋಗ್ಯಕ್ಕೆ ಪಡೆದಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ, ಬರುವ ಜೂನ್ ತಿಂಗಳಲ್ಲಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವಿದೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ. ಬೆಂಗಳೂರಿನ ಹೃದಯಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರವು ಸಾಂಸ್ಕೃತಿಕ ಹೆಗ್ಗುರುತು ಎನಿಸಿಕೊಂಡಿದೆ. ಬೆಂಗಳೂರು ಸಾಕಷ್ಟು ವಿಸ್ತರಣೆಯಾಗಿದ್ದು, ವಿವಿಧ ಪ್ರದೇಶಗಳಲ್ಲೂ ಇಂತಹ ಕಲಾಕೇಂದ್ರಗಳ ಅಗತ್ಯವಿದೆ. ಯುವಜನರಿಗೆ ಸಂಸ್ಕೃತಿ, ಜಾನಪದ, ನಾಟಕ ಮೊದಲಾದ ಕಲೆಗಳ ಬಗ್ಗೆ ಆಸಕ್ತಿಯಿದ್ದು, ನೂತನವಾಗಿ ನಿರ್ಮಾಣವಾಗಲಿರುವ ಕೇಂದ್ರವು ಅವರ ಎಲ್ಲ ಆಶೋತ್ತರಗಳಿಗೆ ವೇದಿಕೆ ಒದಗಿಸಲಿದೆ ಎನ್ನುತ್ತಾರೆ ಅವರು.

ಕುವೆಂಪು ವಿಚಾರಗಳಿಗೆ ವೇದಿಕೆ
ರಾಷ್ಟ್ರಕವಿಯ ಸಾಹಿತ್ಯವನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವುದು ನೂತನ ಕೇಂದ್ರದ ಉದ್ದೇಶಗಳಲ್ಲಿ ಒಂದು ಎನ್ನುತ್ತಾರೆ ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್.ಪುಸ್ತಕ ಬಿಡುಗಡೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರ, ನೃತ್ಯ, ನಾಟಕ ಪ್ರದರ್ಶನದ ಜೊತೆ ಪುಸ್ತಕ ಮಾರಾಟ ಮಳಿಗೆಯೂ ಇರಲಿದೆ. ಕುವೆಂಪು ಅವರ ಹೆಸರಿನಲ್ಲಿ ಸಾಂಸ್ಕೃತಿಕ ವೇದಿಕೆ ಕಟ್ಟಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಅವರು. ಐದಾರು ವರ್ಷಗಳ ಪ್ರಯತ್ನದ ಬಳಿಕ ನಿವೇಶನ ಲಭ್ಯವಾಗಿದೆ. ಮೂರು ತಿಂಗಳ ಒಳಗೆ ಕೇಂದ್ರ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ. ಸುಮಾರು ₹10 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಸಮಿತಿಯ ಇತರ ಸದಸ್ಯರ ಜತೆ ಸಭೆ ನಡೆಸಿ, ಕಟ್ಟಡದ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಹಂಪನಾ ತಿಳಿಸಿದರು.

*
ಕಡಿಮೆ ದರದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಕಲಾಕೇಂದ್ರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಎಲ್ಲ ರೀತಿಯ ಸಾಂಸ್ಕೃತಿಕ ಸಮಾರಂಭಗಳಿಗೂ ಇದು ಮೀಸಲು. ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಾರ್ವಜನಿಕರಿಂದ ನೆರವು ಅಗತ್ಯವಿದೆ.
-ಹಂಪನಾ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT