ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ವಲಸೆ: ಮಾಲೀಕರ ಚಿಂತೆ

ಕೊಡಗು ಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ತೆರಳಿದ ಹೊರ ರಾಜ್ಯದ ಕಾರ್ಮಿಕರು
Last Updated 25 ಮೇ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ವಲಸೆ ಕಾರ್ಮಿಕರಿಗೂ, ಕೊಡಗಿನ ಕಾಫಿ ತೋಟಕ್ಕೂ ಬಹಳ ವರ್ಷಗಳ ನಂಟು. ಆದರೆ, ಇದೀಗ ಕಾಫಿ ತೋಟಗಳಲ್ಲಿ ನೀರವ ಮೌನ ಆವರಿಸಿದೆ. ಜಿಲ್ಲೆಯ ಬಹುತೇಕ ಕಾಫಿ ಎಸ್ಟೇಟ್‌ಗಳ ಲೈನ್‌ಮನೆಗಳು ಈಗ ವಲಸೆ ಕಾರ್ಮಿಕರಿಲ್ಲದೆ ಭಣಗುಡುತ್ತಿವೆ. ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟದ್ದಲ್ಲಿದ್ದ ಕಾರ್ಮಿಕರಿಗೆ ಹೊರ ರಾಜ್ಯಕ್ಕೆ ತೆರಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದೇ ತಡ, ಜಿಲ್ಲೆಯಿಂದಲೂ ಮಹಾ ವಲಸೆ ಆರಂಭವಾಗಿದ್ದು ಇನ್ನೂ ಮುಂದುವರಿದಿದೆ.

ತಮ್ಮೂರಿನ ಸೆಳೆತದಿಂದ ವಲಸೆ ಕಾರ್ಮಿಕರು ಜಿಲ್ಲೆಯಿಂದ ಕಾಲ್ಕಿಳುತ್ತಿದ್ದಾರೆ. ಈ ಮಹಾವಲಸೆಯು ಜಿಲ್ಲೆ ಕಾಫಿ ತೋಟದ ಮಾಲೀಕರು, ರೆಸಾರ್ಟ್‌ ಹೋಂ ಸ್ಟೇ ಹಾಗೂ ಹೋಟೆಲ್‌ ಮಾಲೀಕರನ್ನು ಚಿಂತೆಗೀಡು ಮಾಡಿದೆ.

‘ಬೇಕಿದ್ದರೆ ನಮ್ಮೂರಲ್ಲೇ ಜೀವ ಬಿಡುತ್ತೇವೆ. ಊರಲ್ಲಿರುವ ಹಿರಿಯ ಜೀವಗಳನ್ನು ಮೊದಲು ನೋಡಬೇಕು. ಅವರ ಆರೈಕೆ ಮಾಡಬೇಕು’ ಎಂಬ ಮಹಾದಾಸೆಯಿಂದ ಎಲ್ಲರೂ ತಮ್ಮೂರಿನತ್ತ ತೆರಳುತ್ತಿದ್ದಾರೆ. ಕೊರೊನಾ ಹಾವಳಿ, ಲಾಕ್‌ಡೌನ್‌ ಪರಿಣಾಮದಿಂದ ಕಾರ್ಮಿಕರು ಊರು ಸೇರುತ್ತಿದ್ದಾರೆ.

ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶ. ಇಲ್ಲಿನ ಕಾಫಿ ತೋಟ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊರ ರಾಜ್ಯದ ಕಾರ್ಮಿಕರೂ ದುಡಿಯುತ್ತಿದ್ದರು. ಸ್ಥಳೀಯ ಕಾರ್ಮಿಕರ ಕೊರತೆ ಎದುರಾದ ವೇಳೆ ಮಾಲೀಕರ ನೆರವಿಗೆ ಬಂದಿದ್ದೇ ಈ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಕಾರ್ಮಿಕರು ಎನ್ನುತ್ತಾರೆ ಹಲವರು.

ಕೊಡಗಿನಲ್ಲಿ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಛತ್ತೀಸಗಢ, ಒಡಿಶಾ, ರಾಜಸ್ತಾನ, ಮೇಘಾಲಯ, ಬಿಹಾರ, ಮಧ್ಯಪ್ರದೇಶ, ಉತ್ತರ ‍ಪ್ರದೇಶ, ಆಂಧ್ರಪ್ರದೇಶ, ಜಾರ್ಖಂಡ್‌, ಗುಜರಾತ್‌, ಮಹಾರಾಷ್ಟ್ರ... ಹೀಗೆ ನಾನಾ ರಾಜ್ಯದ ಕಾರ್ಮಿಕರು ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅವರ ಬದುಕಿಗೂ ದಾರಿ ಸಿಕ್ಕಿತ್ತು. ಅದೇ ರೀತಿ ನಮ್ಮ ರಾಜ್ಯದ ಗದಗ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಕಲುಬರ್ಗಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಯ ಕಾರ್ಮಿಕರು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರು.

ಕಳೆದ ಒಂದು ತಿಂಗಳ ಅವಧಿಯಲ್ಲಿ ಹೊರ ರಾಜ್ಯದ 5 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜಿಲ್ಲೆಯಿಂದ ತೆರಳಿದ್ದಾರೆ. ಇನ್ನೂ 2ರಿಂದ 3 ಸಾವಿರ ಹೊರ ಜಿಲ್ಲೆಗಳ ಕಾರ್ಮಿಕರು ಕಾಫಿ ನಾಡು ಬಿಟ್ಟು ತೆರಳಿದ್ದಾರೆ. ಅವರನ್ನೇ ನಂಬಿ ತಮ್ಮ ಉದ್ಯಮ ನಡೆಸುತ್ತಿದ್ದ ಮಾಲೀಕರು ಕಾರ್ಮಿಕರ ಮಹಾವಲಸೆಯಿಂದ ಚಿಂತೆಗೆ ಒಳಗಾಗಿದ್ದಾರೆ.

ಹೊರ ರಾಜ್ಯದಿಂದ ವಲಸೆ ಬಂದಿದ್ದ ಕಾರ್ಮಿಕರಿಗೆ ಕಾಫಿ ತೋಟದ ಲೈನ್‌ಮನೆಗಳಲ್ಲಿ ಮಾಲೀಕರು ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿದ್ದರು. ಅಲ್ಲೇ ಹಲವು ವರ್ಷಗಳಿಂದ ಕೆಲವು ಕುಟುಂಬಗಳು ವಾಸ್ತವ್ಯ ಮಾಡಿದ್ದವು. ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಲೇ ಬದುಕು ಕಟ್ಟಿಕೊಂಡಿದ್ದವು ಆ ಕುಟುಂಬಗಳು.

ಹೊರ ರಾಜ್ಯದ ಕಾರ್ಮಿಕರ ಸಂಖ್ಯೆ ಹೆಚ್ಚಾದಂತೆ ಸ್ಥಳೀಯ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಅವರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಬೇಕು ಎಂದು ಸ್ಥಳೀಯ ಕಾರ್ಮಿಕ ಸಂಘಟನೆಗಳು ಕಳೆದ ವರ್ಷ ಆಗ್ರಹಿಸಿದ್ದವು.

ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ:ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಲಾಕ್‌ಡೌನ್‌ ಅವಧಿಯಲ್ಲಿ ವಾಪಾಸ್ಸಾಗಿದ್ದು, ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ ಬರಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಲಾಕ್‌ಡೌನ್‌ ಪೂರ್ಣ ಪ್ರಮಾಣದಲ್ಲಿ ತೆರವಾದ ಬಳಿಕ ಕಾರ್ಮಿಕರ ಸಮಸ್ಯೆಗಳು ಅರಿವಿಗೆ ಬರಲಿವೆ ಎಂದು ಮಾಲೀಕರು ಹೇಳುತ್ತಾರೆ.

ಎಲ್ಲ ಕೆಲಸಕ್ಕೂ ಸೈ:ಜಿಲ್ಲೆಯಲ್ಲಿ ಕಾಫಿ ಕೊಯ್ಲು, ಕಾಳುಮೆಣಸು ಕೊಯ್ಲು, ಮರ ಕಪಾತು, ಗೊಬ್ಬರದ ಕೆಲಸ, ಚರಂಡಿ ಶುಚಿ, ಮಣ್ಣು ಕೆಲಸ, ಮನೆಗಳ ನಿರ್ಮಾಣ, ಲೈನ್‌ಮನೆಗಳ ದುರಸ್ತಿ, ಹೋಟೆಲ್‌ಗಳಲ್ಲಿ ಸಪ್ಲೆ, ರೆಸಾರ್ಟ್‌ನಲ್ಲಿ ಕೆಲಸ, ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ಮಾಲೀಕರೊಂದಿಗೆ ದುಡಿಮೆಗೆ ಇಳಿಯುತ್ತಿದ್ದ ಪರ ಊರಿನ ಕಾರ್ಮಿಕರು, ಊರಿಗೆ ತೆರಳಿದ್ದಾರೆ. ಜಿಲ್ಲಾಡಳಿತದಿಂದ ನಡೆಯುತ್ತಿದ್ದ ರಸ್ತೆ ನಿರ್ಮಾಣ, ಸೇತುವೆ ಕಟ್ಟುವಿಕೆ, 2018ರ ನೆರೆ ಸಂತ್ರಸ್ತರ ಮನೆ ನಿರ್ಮಾಣದಲ್ಲೂ ಈ ಕಾರ್ಮಿಕರು ತೊಡಗಿಸಿಕೊಂಡಿದ್ದರು. ಅವರಲ್ಲಿ ಬಹುತೇಕ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಎಲ್ಲ ಕೆಲಸಕ್ಕೂ ಸೈ ಎನಿಸಿಕೊಂಡಿದ್ದ ಕಾರ್ಮಿಕರು ಊರಿಗೆ ತೆರಳಿದ್ದು ಅಬಿವೃದ್ಧಿ ಹಾಗೂ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಲಾಕ್‌‌ಡೌನ್ ನಂತರ ಕಾರ್ಮಿಕರ ಸಮಸ್ಯೆ:ಕೊಡಗಿನಲ್ಲಿ ಹೋಟೆಲ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಿಲ್ಲ. ಲಾಕ್‌ಡೌನ್‌ ಪೂರ್ಣ ತೆರವಾದ ಬಳಿಕ ಕಾರ್ಮಿಕರ ಸಮಸ್ಯೆ ಅರಿವಿಗೆ ಬರಲಿದೆ ಎಂದು ಕಾರ್ಮಿಕ ಅಧಿಕಾರಿರಾಮಕೃಷ್ಣ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT