ಸಂಕಷ್ಟದಲ್ಲಿ ಪದವಿ ವಿದ್ಯಾರ್ಥಿಗಳು

7
ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಕೊರತೆ

ಸಂಕಷ್ಟದಲ್ಲಿ ಪದವಿ ವಿದ್ಯಾರ್ಥಿಗಳು

Published:
Updated:
ಪಾಠ ಪ್ರವಚನಗಳು ನಡೆಯದ ಹಿನ್ನೆಲೆಯಲ್ಲಿ ತರಗತಿಯ ಹೊರಗಡೆ ಇರುವ ವಿದ್ಯಾರ್ಥಿಗಳು

ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಹಲವು ದಿನಗಳು ಕಳೆದರೂ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿಲ್ಲ. ಈ ವಿಳಂಬ ನೀತಿ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ.

ರಾಜ್ಯದ ಬಹುತೇಕ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ. ಬೋಧನೆ ಮಾತ್ರವಲ್ಲದೆ ವಿದ್ಯಾರ್ಥಿಗಳ ನೋಂದಣಿ, ಮೌಲ್ಯಮಾಪನ, ಪರೀಕ್ಷಾ ಕಾರ್ಯಗಳು ಸೇರಿ ಪಠ್ಯೇತರ ಚಟುವಟಿಕೆಯಲ್ಲೂ ಅತಿಥಿ ಉಪನ್ಯಾಸಕರು ತೊಡಗಿಸಿಕೊಳ್ಳುತ್ತಿದ್ದಾರೆ.

ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ 2016–17ನೇ ಸಾಲಿ
ನಲ್ಲಿ 13,500 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರು. 2017ರಲ್ಲಿ ಸರ್ಕಾರ 4,500 ಹೊಸ ನೇಮಕಾತಿ ಮಾಡಿಕೊಂಡ ನಂತರ ಅವರ ಸಂಖ್ಯೆ 9,500 ಕ್ಕೆ ಇಳಿಯಿತು.

ಜೂನ್‌ 4ರಿಂದಲೇ ಕಾಲೇಜು ಆರಂಭ: ರಾಜ್ಯದ ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ತಿಂಗಳಾಗುತ್ತಾ ಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್‌ 4ರಿಂದಲೇ ಕಾಲೇಜುಗಳು ಆರಂಭವಾಗಿವೆ. ಕೆಲವೆಡೆ ಜೂನ್‌ 18ರಂದು, ಮತ್ತೆ ಕೆಲವೆಡೆ ಜೂನ್‌ 22ರಂದು ಆರಂಭವಾಗಿವೆ. ಆದರೆ, ಅತಿಥಿ ಉಪನ್ಯಾಸಕರಿಲ್ಲದೆ ಬಹುತೇಕ ಕಾಲೇಜುಗಳಲ್ಲಿ ಪಾಠ ಆರಂಭವಾಗಿಲ್ಲ. ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಓಡಾಡುವಂತಾಗಿದೆ.

ವಿದ್ಯಾರ್ಥಿಗಳಲ್ಲಿ ಆತಂಕ: ಸೆಮಿಸ್ಟರ್‌ ಪದ್ಧತಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು. ನಿಗದಿತ ಸಮಯದಲ್ಲೇ ಶಿಕ್ಷಕರೂ ಪಾಠ, ಪ್ರವಚನಗಳನ್ನು ಮುಗಿಸುವ ಪರಿಸ್ಥಿತಿಯಿದೆ. ಬಾಕಿ ಇರುವ ಮೂರು ತಿಂಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಯೇ ಎನ್ನುವ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.

ಜಿಲ್ಲಾ ಮಟ್ಟದ ಕಾಲೇಜುಗಳತ್ತ ವಿದ್ಯಾರ್ಥಿಗಳು: ಹೋಬಳಿ, ತಾಲ್ಲೂಕು ಮಟ್ಟದ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ಕೊರತೆಯಿದೆ. ಇಂತಹ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ. ಹಾಗಾಗಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಅಲ್ಲಿಂದ ವರ್ಗಾವಣೆ ಪತ್ರ ಪಡೆದು ಜಿಲ್ಲಾ ಮಟ್ಟದ ಕಾಲೇಜಿಗೆ ಸೇರುತ್ತಿದ್ದಾರೆ.

ಏಕೆ ಈ ಸಮಸ್ಯೆ?: ಹಿಂದೆ ಪ್ರತಿವರ್ಷ ಸಂದರ್ಶನ ಮಾಡುವ ಬದಲಾಗಿ ಹಾಲಿ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಸರ್ಕಾರ ಆನ್‌ಲೈನ್‌ ಪದ್ಧತಿ ಜಾರಿಗೆ ತಂದಿತ್ತು. ಈ ವರ್ಷ ಹೊಸ ಸರ್ಕಾರ, ಸಚಿವರ ನೇಮಕ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗಿದೆ.

*****

ಹತ್ತಾರು ಕನಸುಗಳನ್ನು ಹೊತ್ತು ಕಾಲೇಜು ಸೇರಿಕೊಂಡಿದ್ದೇನೆ. ಆದರೆ ಕಾಲೇಜಿನಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಇದರಿಂದ ಹಣ, ಸಮಯ ವ್ಯರ್ಥವಾಗುತ್ತಿದೆ</p>
-ವಿದ್ಯಾ, ವಿದ್ಯಾರ್ಥಿನಿ

2016–17ರಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ಭದ್ರತೆ ಕಲ್ಪಿಸಬೇಕು. ಶೀಘ್ರವೇ ಅವರನ್ನು ಸೇವೆಗೆ ಪರಿಗಣಿಸಬೇಕು.
-ಡಾ.ಸೋಮಶೇಖರ ಶಿಮೊಗ್ಗಿ, ಅಧ್ಯಕ್ಷರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ

 

ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಸರ್ಕಾರಕ್ಕೆ ವರದಿ ಕಳಿಸಿದ್ದೇವೆ. ಬಹುಶಃ ಇನ್ನೆರಡು ದಿನಗಳಲ್ಲಿ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಯಿದೆ. <br/>ಡಾ.ಸಿ. --ಮಂಜುಳಾ, ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

–ಅನಿಲ್‌ ಸಾಗರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !