ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ತಾಪಕ್ಕೆ ನಲುಗಿದ ಮತದಾರ

Last Updated 13 ಮೇ 2018, 10:51 IST
ಅಕ್ಷರ ಗಾತ್ರ

ಗಜೇಂದ್ರಗಡ: ನೆತ್ತಿ ಸುಡುವ ಕೆಂಡದಂತಹ ಬಿಸಿಲು, ಇತ್ತ ಮತದಾರರನ್ನು ತನ್ನತ್ತ ಸೆಳೆಯುವ ಪಕ್ಷದ ಕಾರ್ಯಕರ್ತರು, ಇದೆಲ್ಲದರ ಮಧ್ಯೆ ಕೆಲವೆಡೆ ಬಿಸಿಲಿನ ತಾಪಕ್ಕೆ ಮತದಾನ ಮಾಡಲು ಮತದಾರರರು ನಿರುತ್ಸಾಹ ತೋರುತ್ತಿರುವುದು ಕಂಡು ಬರುತ್ತಿತ್ತು.

ರಾಜ್ಯ ವಿಧಾನಸಭಾ ಚುನಾವಣೆ ಮತದಾನ ದಿನವಾದ ಶನಿವಾರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಂಡು ಬಂದ ದೃಶ್ಯಗಳಿವು. ಶುಕ್ರವಾರ ಸುರಿದ ಅಲ್ಪ ಮಳೆಯಿಂದ ನೆಲದ ಝಳ, ಮೇಲೆ ನೆತ್ತಿ ಸುಡುವ ಬಿಸಿಲಿನಿಂದ ಮತದಾರರು ಬಸವಳಿದ ಕಾರಣ ಅನೇಕ ಕಡೆ ಮತಗಟ್ಟೆಗಳು ಮತದಾರರಿಲ್ಲದೆ ಬಿಕೋ ಎನ್ನುತ್ತಿದ್ದವು.

ಆರಂಭದಲ್ಲಿ ಮತದಾನ ನೀರಸವಾಗಿದ್ದರೂ ಬಿಸಿಲು ಏರುತ್ತಿದ್ದಂತೆ ಪ್ರಚಾರದಲ್ಲಿ ತೊಡಗಿದವರ ಮತ್ತು ಮತದಾರರ ಸಂಖ್ಯೆ ಕ್ಷೀಣಿಸುತ್ತಾ ಬಂತು. ಕೆಲವು ಕಡೆಗಳಲ್ಲಿ ಜನರು ಬಿಸಿಲನ್ನು ಲೆಕ್ಕಿಸದೇ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬರುತ್ತಿತ್ತು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ನಂ.18 ರ ಮತಗಟ್ಟೆಯಲ್ಲಿ ಜನ ಬಿಸಿಲಿನಲ್ಲಿಯೂ ಸಾಲುಗಟ್ಟಿ ನಿಂತಿದ್ದರೆ. ಅದರ ಎದುರಿನ ನಂ.16 ಮತಗಟ್ಟೆಯಲ್ಲಿ ಬೆರಳೆಣಿಕೆಯಷ್ಷು ಮತದಾರರು ಕಂಡು ಬಂದರು. ಎ.ಪಿ.ಎಂ.ಸಿ ಯಲ್ಲಿನ ಮತಗಟ್ಟೆಯಲ್ಲಿ ಹೊರಗೆ ಜನಜಂಗುಳಿ ಇತ್ತು. ಆದರೆ ಒಳಗೆ ಮತದಾರರು ಇಲ್ಲದೇ ಮತಗಟ್ಟೆಯ ಅಧಿಕಾರಿಗಳು ಸುಮ್ಮನೆ ಕುಳಿತಿದ್ದರು. ಸಾಯಂಕಾಲ ಬಿಸಿಲಿನ ಧಗೆ ಕಡಿಮೆಯಾದಂತೆ ಮತದಾರರು ಬಂದು ತಮ್ಮ ಮತ ಚಲಾಯಿಸಿದರು.

ಆಗಾಗ ನಿಯಂತ್ರಣ ರೇಖೆ ದಾಟಿ ಮತದಾರರಿಗೆ ತಮ್ಮ ಪರವಾಗಿ ಮತ ಹಾಕುವಂತೆ ಪರಸ್ಪರರು ಹೇಳುತ್ತಿರುವುದು. ವಾಹನಗಳಲ್ಲಿ ಮತದಾರರನ್ನು ಕರೆ ತರುವುದು, ಅಶಕ್ತರನ್ನು ಗಾಲಿ ಕುರ್ಚಿಗಳಲ್ಲಿ ಮತಗಟ್ಟೆ ಕರೆದೊಯ್ಯುತ್ತಿರುವುದು ಕಂಡು ಬಂತು. ಕೆಲವೆಡೆ ಅಧಿಕಾರಿಗಳ, ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದವು.

ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೇ ಮತದಾನ ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT