ಗುರುವಾರ , ಜುಲೈ 29, 2021
21 °C
ಕೆರೆಗಳ ಮಾಹಿತಿ ಕ್ರೋಡೀಕರಣ ಸಪ್ತಾಹ ಆರಂಭ

357 ಕೆರೆಗಳ ಸಮೀಕ್ಷೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಮಾಹಿತಿ ಕ್ರೋಡೀಕರಣ ಸಪ್ತಾಹ ಆರಂಭಗೊಂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಮೇರೆಗೆ ಜೂನ್ 15ರಿಂದ ಆರಂಭವಾಗಿರುವ ಸಪ್ತಾಹ ಇದೇ 22ರವರೆಗೆ ಮುಂದುವರಿಯಲಿದೆ. ಕೆರೆಗಳ ಸಮಗ್ರ ಮಾಹಿತಿಯನ್ನು ಕೆ-ಜಿಐಸ್ ತಂತ್ರಾಂಶದಲ್ಲಿ ನಮೂದಿಸಲು ನ್ಯಾಯಮಂಡಳಿ ಸೂಚನೆ ನೀಡಿತ್ತು.

16 ಹೋಬಳಿ ವ್ಯಾಪ್ತಿಯ ಸುಮಾರು 357 ಕೆರೆಗಳು ಸಮೀಕ್ಷೆಗೆ ಒಳಪಡಲಿದೆ. ಕೆರೆಗಳ ನೀರಿನ ಮೂಲ, ಕೆರೆಗಳ ನೀರಿನ ಮಟ್ಟ, ಜಲಚರಗಳು, ಮೀನುಗಾರಿಕೆ ವಿವರ, ಕೆರೆ ಆಶ್ರಿತ ಕೃಷಿ ಭೂಮಿ, ಕೆರೆ ಬದಿಯ ಮಣ್ಣಿನ ಗುಣ ಲಕ್ಷಣಗಳು, ಹೂಳು, ಒತ್ತುವರಿ ವಿವರ ಹಾಗೂ ಒತ್ತುವರಿದಾರರ ಸಮಗ್ರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗುವುದು. ಸ್ಥಳ ಪರಿವೀಕ್ಷಣೆ, ಸ್ಥಳೀಯರ ಮಾಹಿತಿ ಹಾಗೂ ಮೂಲ ದಾಖಲೆಗಳ ಆಧಾರದಲ್ಲಿ ಮಾಹಿತಿ ಕ್ರೋಡೀಕರಣ ಕಾರ್ಯ ನಡೆಯಲಿದೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಪ್ತಾಹ ವಿವಿಧ ಹಂತಗಳಲ್ಲಿ ರಾಜ್ಯ ವ್ಯಾಪಿ ನಡೆಯಲಿದೆ.

ಸಪ್ತಾಹಕ್ಕೆ ಚಾಲನೆ ನೀಡಿದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ, ‘ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ನಗರದ ಏಕೈಕ ನದಿ ವೃಷಭಾವತಿಯು ಜನರ ನಿರ್ಲಕ್ಷ್ಯದಿಂದ ಸಂಪೂರ್ಣ ಮಲಿನವಾಗಿದೆ. ಕೆರೆಗಳಿಗೂ ಇದೇ ಗತಿ ಬಂದೊದಗಿದರೆ ಅಂತರ್ಜಲದ ಗುಣಮಟ್ಟ ಕೆಟ್ಟು ಮತ್ತಷ್ಟು ವಿಕೋಪಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು