ಶುಕ್ರವಾರ, ನವೆಂಬರ್ 15, 2019
23 °C
ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರನ್ನು ಪ್ರಶ್ನಿಸಿದ ಇ.ಡಿ

ಲಕ್ಷ್ಮಿ ಹೆಬ್ಬಾಳಕರ ವ್ಯವಹಾರದ ತನಿಖೆ

Published:
Updated:

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಡಿ.ಕೆ ಶಿವಕುಮಾರ್‌ ಅವರ ಅಕ್ರಮ ಹಣಕಾಸು ವ್ಯವಹಾರ ಹಾಗೂ ಬೇನಾಮಿ ಆಸ್ತಿ ಕುರಿತು ತನಿಖೆ ನಡೆಸುತ್ತಿರುವ ಇ.ಡಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ‘ವ್ಯವಹಾರ’ದ ಬಗ್ಗೆಯೂ ಪರಿಶೀಲಿಸುತ್ತಿದೆ.

ಸವದತ್ತಿ ಬಳಿ ಹೆಬ್ಬಾಳಕರ ಸ್ಥಾಪಿಸಿರುವ ಹ‌ರ್ಷ ಸಕ್ಕರೆ ಕಾರ್ಖಾನೆಗೆ ಹೂಡಿರುವ ಸುಮಾರು ₹ 60 ಕೋಟಿ ಮೂಲ ಬಂಡವಾಳ ಯಾರದ್ದು? ಅದರಲ್ಲಿ ಶಿವಕುಮಾರ್‌ ಪಾತ್ರವಿದೆಯೇ? ಎಂದು ಹುಡುಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇ.ಡಿ ಅಧಿಕಾರಿಗಳು ಲಕ್ಷ್ಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಈ ಸಕ್ಕರೆ ಕಾರ್ಖಾನೆಗೆ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಒಳಗೊಂಡಂತೆ ವಿವಿಧ ಡಿಸಿಸಿ ಬ್ಯಾಂಕ್‌ಗಳು ಸಾಲ ನೀಡಿವೆ. ಈ ಕಾರಣಕ್ಕೆ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಅವರನ್ನು ಇ.ಡಿ ಅಧಿಕಾರಿಗಳು ಈಚೆಗೆ ಪ್ರಶ್ನಿಸಿದರು.

ಕಾಂಗ್ರೆಸ್‌ ಶಾಸಕಿಗೆ ನೀಡಿರುವ ಸಾಲ ಹಾಗೂ ಅದಕ್ಕಾಗಿ ಪಡೆದಿರುವ ಭದ್ರತೆ ಕುರಿತು ರಾಜಣ್ಣ ಅಧಿಕಾರಿಗಳಿಗೆ ವಿವರಿಸಿದರು. ಇದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಒದಗಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಲ್ಲದೆ, ₹ 1 ಕೋಟಿಗಿಂತಲೂ ಹೆಚ್ಚು ಹಣವನ್ನು ತಮ್ಮ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವವರ ಹೆಸರಿನ ಪಟ್ಟಿಯನ್ನು ಇ.ಡಿ ಗೆ ರಾಜಣ್ಣ ಸಲ್ಲಿಸಿದರು. ಲಕ್ಷ್ಮಿ ಹೆಬ್ಬಾಳಕರ ₹ 300 ಕೋಟಿ ಬಂಡವಾಳದಿಂದ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರ ಆಪ್ತ ವಲಯದಲ್ಲಿ ಇವರು ಗುರುತಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)