ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಸಲಾಂ: ಸಾವಯವದಲ್ಲಿ ಸಾರ್ಥಕತೆ ಕಂಡ ಲಕ್ಷ್ಮಿ ಲೋಕೂರ

Last Updated 15 ಅಕ್ಟೋಬರ್ 2018, 1:50 IST
ಅಕ್ಷರ ಗಾತ್ರ

ಧಾರವಾಡ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯ ಸಾವಯವ ಕೃಷಿ ತಜ್ಞೆ ಲಕ್ಷ್ಮಿ ಲೋಕೂರ ಸಾಧನೆಗೆ ಕೃಷಿಕರು ಮಾತ್ರವಲ್ಲ ಐಟಿ ಮಂದಿಯೂ ಮರುಳಾಗಿದ್ದಾರೆ.

ಕೃಷಿ ಬೆಳಗಾವಿ ಜಿಲ್ಲೆಯಲ್ಲಿ, ಅದರ ಮಾರುಕಟ್ಟೆ ಧಾರವಾಡದಲ್ಲಿ ಹೀಗೆ ಎರಡು ಜಿಲ್ಲೆಗಳೊಂದಿಗೆ ಲಕ್ಷ್ಮಿ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾವಯವ ಪದ್ಧತಿ ಅಳವಡಿಕೆಯಿಂದ ತಮ್ಮ ಹೊಲ ಮತ್ತು ಗ್ರಾಹಕರ ಆರೋಗ್ಯವನ್ನು ಕಾಪಾಡಿದ ಸಾರ್ಥಕತೆ ಅವರದ್ದು.

‘ಕೃಷಿಯಿಂದ ಮಹಿಳೆಯರು ವಿಮುಖರಾಗಿದ್ದರಿಂದಲೇ ಏಕ ಬೆಳೆ ಪದ್ಧತಿ ಹೆಚ್ಚಾಗಿದೆ. ಧಾನ್ಯಗಳು ಕಡಿಮೆಯಾಗಿವೆ. ಹಿಂದಿನಂತೆ ಮಹಿಳೆಯರು ಕ್ರಿಯಾಶೀಲವಾಗಿ ಮುಂದುವರಿದಿದ್ದರೆ ಈ ಅನಾರೋಗ್ಯಕರ ಬದುಕು ಇರುತ್ತಿರಲಿಲ್ಲ.ಕೂಡು ಕುಟುಂಬದ ನನಗೆ ಕೃಷಿ ಹೊಸತಲ್ಲ. ಅಜ್ಜಿ, ಅಮ್ಮನೀಡುತ್ತಿದ್ದ ಸಲಹೆ, ಬಿತ್ತನೆ ಸಂದರ್ಭದಲ್ಲಿ ಖುದ್ದು ಹೋಗಿ ಬೀಜಗಳನ್ನು ಬಿತ್ತುತ್ತಿದ್ದ ರೀತಿಯನ್ನು ನೋಡುತ್ತಿದ್ದೆ. ಹೀಗಾಗಿ ಬಾಲ್ಯದಿಂದಲೇ ಕೃಷಿಯತ್ತ ಆಸಕ್ತಿ ಮೂಡಿತು’ ಎನ್ನುತ್ತಾರೆ ಲಕ್ಷ್ಮಿ.

‘ಬಿ.ಎ. ಪದವಿ ನಂತರ ಕೃಷಿ ತಂತ್ರಜ್ಞಾನ ಕೋರ್ಸ್‌ಗೆ ಸೇರುವ ಹಂಬಲವಿತ್ತು. ಪ್ರಯಾಸದ ನಂತರ ಆ ಶಿಕ್ಷಣ ಪಡೆದೆ. ಬಿತ್ತನೆ ಕಾರ್ಯ, ಮಿಶ್ರ ಬೆಳೆ ಪದ್ಧತಿ ಇತ್ಯಾದಿಗಳ ಪ್ರಯೋಜನ ಅರಿತೆ.ಸಾವಯವ ಕೃಷಿಯಲ್ಲೇ ನನ್ನ ಕೃಷಿ ಬದುಕು ಮುಂದುವರಿಸಬೇಕು ಎಂಬ ನಿಲುವಿಗೆ ಬದ್ಧಳಾದೆ. ನಿರಂತರ ಪ್ರಯೋಗ, ಪ್ರಯತ್ನಗಳಿಂದ ಸಫಲಳಾದೆ. ಹಾಗೆಯೇ ಗೊಬ್ಬರ ತಯಾರಿಕೆಯಲ್ಲೂ ಹಲವು ಚಮತ್ಕಾರಗಳು ಹೊಸ ಪಾಠಗಳನ್ನು ಕಲಿಸಿದವು’ ಎಂದು ಕೃಷಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರು.

‘ಕುಟುಂಬದ 7.32 ಎಕರೆಜಮೀನಿನಲ್ಲಿ ನನ್ನ ಪ್ರಯೋಗಕ್ಕೆ ಸಿಕ್ಕಿದ್ದು ಅರ್ಧ ಎಕರೆ. ಜತೆಗೆ ಕೃಷಿ ಆರಂಭಿಸಲು ಒಂದಷ್ಟು ಇಡುಗಂಟು. ಆರಂಭದಲ್ಲಿ ಧಾನ್ಯಗಳನ್ನು ಬೆಳೆಯುತ್ತಿದ್ದೆ. ಈಗ ನೀರಾವರಿ ಹೆಚ್ಚಾಗಿದ್ದರಿಂದ ತೋಟಗಾರಿಕೆ ಕಡೆ ಮುಖ ಮಾಡಿದ್ದೇನೆ. ಲಿಂಬೆ, ಸೀತಾಫಲ, ರಾಂಫಲ, ನೆಲ್ಲಿ, ಪೇರಲೆ, ಪಪ್ಪಾಯ, ಚಿಕ್ಕು, ಮಾವು, ಕಾಳುಮೆಣಸು ಬೆಳೆಯುತ್ತಿದ್ದೇನೆ. ಇವುಗಳ ನಡುವೆ ತರಕಾರಿಯನ್ನೂ ಬೆಳೆಯಲಾಗುತ್ತಿದೆ’ ಎಂದರು.

‘ಪಟ್ಟ ಪದ್ಧತಿಯಲ್ಲಿ ಅಂತರ ಹೆಚ್ಚಿಸಿ ಕಬ್ಬು ಬೆಳೆದಿದ್ದೇನೆ. ನಡುವಿನ ಅಂತರದಲ್ಲಿ ಸೊಪ್ಪು, ಇತ್ಯಾದಿ ತರಕಾರಿ ಬೆಳೆಯಲಾಗಿದೆ. ಅಷ್ಟೂ ಕೃಷಿ ಪದ್ಧತಿಯನ್ನು ಸಾವಯವದಲ್ಲೇ ನಡೆಸಿಕೊಂಡು ಬರುತ್ತಿದ್ದೇನೆ. ಆರಂಭದಲ್ಲಿ ನಾನೇ ಮಾರುಕಟ್ಟೆ ಮಾಡುತ್ತಿದ್ದೆ. ಈಗ ಒತ್ತಡ ಹೆಚ್ಚಾಗಿದ್ದರಿಂದ ಬೇರೆಯವರ ಮೇಲೆ ಅವಲಂಬಿಸಿದ್ದೇನೆ. ಹೀಗಿದ್ದರೂ ನಾನು ಬೆಳೆದ ಬೆಳೆಗೆ ಸಿಗಬೇಕಾದ ದರ ಸಿಗುತ್ತಿದೆ. ಇದರಿಂದ ಪ್ರಯೋಗಗಳೂ ಮುಂದುವರಿದಿವೆ’ ಎಂದು ಕೃಷಿ ಚಟುವಟಿಕೆಯನ್ನು ವಿವರಿಸಿದರು.

‘ನನ್ನೊಂದಿಗೆ ಕೆಲಸ ಮಾಡಿ ಕೃಷಿ ಅರ್ಥ ಮಾಡಿಕೊಳ್ಳಲು ಹಲವು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬಂದರು. ಆದರೆ ಯಾರೂ ಕೃಷಿಯಲ್ಲಿ ನೆಲೆಯೂರಲಿಲ್ಲ. ಬದಲಿಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಸಹಕರಿಸಿದ್ದಾರೆ. ಇಬ್ಬರು ಯುವಕರು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಪ್ರೇರಣಾ ನ್ಯಾಚುರಲ್‌ ಎಂಬ ಆ್ಯಪ್ ಮೂಲಕ ಗ್ರಾಹಕರು ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಕಳುಹಿಸುತ್ತಾರೆ. ಇದು ನನ್ನ ಕೃಷಿ ಮತ್ತು ಅದರ ಮಾರುಕಟ್ಟೆಗೆ ನೆರವಾಗುತ್ತಿದೆ’ ಎಂದು ಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT