ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡಕ್ಕೆ ಲಲಿತಕಲಾ ಅಕಾಡೆಮಿ ಕಚೇರಿ?

ಹುಬ್ಬಳ್ಳಿ–ಧಾರವಾಡದಲ್ಲಿ ಆರಂಭಿಸಲು ಕೇಂದ್ರದೊಂದಿಗೆ ಪತ್ರ ವ್ಯವಹಾರ
Last Updated 13 ಅಕ್ಟೋಬರ್ 2018, 20:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿಯು ಧಾರವಾಡದಲ್ಲಿ ಆರಂಭವಾಗುವ ಕಾಲ ಸನ್ನಿಹಿತವಾಗಿದೆ. ಕೊನೆಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಒಪ್ಪಿಗೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾ ಗ್ರಾಮದಲ್ಲಿ ಆರಂಭಿಸುವ ಪ್ರಯತ್ನ ನಡೆದಿತ್ತು. ಆದರೆ, ಆ ಜಾಗದ ಒಡೆತನ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದರಿಂದ ಕಚೇರಿ ಸ್ಥಾಪನೆ ನನೆಗುದಿಗೆ ಬಿದ್ದಿತ್ತು.

ಹೀಗಾಗಿ, ಪ್ರಾದೇಶಿಕ ಕೇಂದ್ರವನ್ನು ಧಾರವಾಡಕ್ಕೆ ಮಂಜೂರು ಮಾಡುವಂತೆ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

‘ಸಂಗೀತ ದಿಗ್ಗಜರಾದ ಪಂಡಿತ್ ಭೀಮಸೇನ್‌ ಜೋಶಿ, ಡಾ.ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ ಹಾಗೂ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಡಾ.ಗಿರೀಶ ಕಾರ್ನಾಡ್ ಅವರಂತಹ ಸಾಹಿತಿಗಳು ಇದೇ ನೆಲದವರು. ಹಾಗಾಗಿ, ವಿವಿಧ ಕಲಾಪ್ರಕಾರಗಳ ಬೆಳವಣಿಗೆ ದೃಷ್ಟಿಯಿಂದ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವನ್ನು ಧಾರವಾಡಕ್ಕೆ ಮಂಜೂರು ಮಾಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಪತ್ರಗಳನ್ನು ಬರೆದಿದ್ದ ಜೋಶಿ, ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಕೇಂದ್ರಕ್ಕೆ ತಿಳಿಸುವಂತೆಯೂ ಒತ್ತಾಯಿಸಿದ್ದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಸಂಸದರು ಹಾಗೂ ಇಲ್ಲಿನ ಅನೇಕ ಕಲಾವಿದರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.

ಈ ಒತ್ತಡದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌, ಸೆ.4ರಂದು ಕೇಂದ್ರ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಉತ್ತಮ್‌ ಪಚಾರ್ನೆ ಅವರಿಗೆ ಪತ್ರ ಬರೆದು, ಹುಬ್ಬಳ್ಳಿ–ಧಾರವಾಡದಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಲು ರಾಜ್ಯದ ಒಪ್ಪಿಗೆಯನ್ನು ತಿಳಿಸಿದ್ದಾರೆ. ಇನ್ನು, ಇದಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಕೊಡುವುದು ಮಾತ್ರ ಬಾಕಿ ಉಳಿದಿದೆ.

ಕರ್ನಾಟಕ ವಿ.ವಿ.ಯಲ್ಲಿ ಜಾಗ: ’ಧಾರವಾಡದಲ್ಲಿ ಅಕಾಡೆಮಿ ಕಚೇರಿ ಆರಂಭಿಸಲು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 5 ಎಕರೆ ಜಾಗ ಮಂಜೂರು ಮಾಡಿಸಿ ಕೊಡುವುದಾಗಿ ಸಂಸದ ಜೋಶಿ ತಿಳಿಸಿದ್ದಾರೆ. ವಿ.ವಿಯಿಂದಲೂ ಮೌಖಿಕ ಒಪ್ಪಿಗೆ ಸಿಕ್ಕಿದೆ’ ಎಂದು ಅಕಾಡೆಮಿ ಸ್ಥಾಪನೆಗಾಗಿ ಮನವಿ ಸಲ್ಲಿಸಿದ್ದ ಜಾಗೃತಿ ಭಾರತಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಶಾಸ್ತ್ರಿ ಹೇಳಿದರು.

ಏನು ಅನುಕೂಲ?

ಪ್ರಸ್ತುತ ದೇಶದಲ್ಲಿ ಭುವನೇಶ್ವರ, ಚೆನ್ನೈ, ರಾಜಸ್ಥಾನದ ಗಡಿ, ಕೊಲ್ಕತ್ತ, ಲಖನೌನಲ್ಲಿ ಪ್ರಾದೇಶಿಕ ಕೇಂದ್ರಗಳಿವೆ. ರಾಜ್ಯದಲ್ಲಿಯೂ ಕೇಂದ್ರ ಆರಂಭವಾದರೆ ಲಲಿತ ಕಲೆಗಳು ಹಾಗೂ ಕಲಾವಿದರಿಗೆ ಪ್ರೋತ್ಸಾಹ ದೊರೆಯಲಿದೆ. ಕಾರ್ಯಾಗಾರಗಳು, ಶಿಬಿರಗಳು, ವಿವಿಧ ಕೋರ್ಸ್‌ಗಳನ್ನು ಆರಂಭಿಸಬಹುದಾಗಿದೆ. ಅತ್ಯುತ್ತಮ ಗ್ಯಾಲರಿ ವ್ಯವಸ್ಥೆ ಮಾಡಿಕೊಡಬಹುದು. ನಿರಂತರವಾಗಿ ಕಲಾ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT