ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಬೆಟ್ಟದ ವಾಸಿಗಳಲ್ಲಿ ಮತ್ತೆ ಆತಂಕ

ಅಪಾಯದಲ್ಲಿ ಚಾಮುಂಡೇಶ್ವರಿ ನಗರ, ಜಂಬೂರಿನಲ್ಲಿ ಪೂರ್ಣಗೊಳ್ಳದ ಕಾಮಗಾರಿ, ಸ್ಥಳಾಂತರಕ್ಕೆ ಸಮಸ್ಯೆ
Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮಳೆ ತೀವ್ರಗೊಂಡಂತೆ ಕೊಡಗಿನ ಬೆಟ್ಟದ ವಾಸಿಗಳಲ್ಲಿ ಆತಂಕ ಮನೆಮಾಡಿದೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ, ಚಾಮುಂಡೇಶ್ವರಿ ನಗರದಲ್ಲಿ ಆತಂಕ ಎದುರಾಗಿತ್ತು. ದಿಢೀರ್ ಸುರಿದ ಧಾರಾಕಾರ ಮಳೆಯಿಂದ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿ ಆತಂಕ ತಂದೊಡ್ಡಿತ್ತು.

ರಾತ್ರಿಯೇ ಮಾಹಿತಿ ತಿಳಿದ ವಿಪತ್ತು ನಿರ್ವಹಣೆ ವಿಭಾಗ ಅಧಿಕಾರಿಗಳು ಹಾಗೂ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಾಯದಲ್ಲಿದ್ದ ಐದು ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿ, ಆಶ್ರಯ ಕಲ್ಪಿಸಿದ್ದಾರೆ.

2018ರಲ್ಲಿ ಅಪಾಯ ಸಂಭವಿಸಿದ್ದ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಹಾಗೂ ಮಂಗಳಾದೇವಿ ನಗರದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿದಿದೆ. ಬುಧವಾರ ಅಬ್ಬರಿಸಿದ್ದ ಮಳೆಗೆ ಗುಡ್ಡ ಕುಸಿಯಲು ಆರಂಭಿಸಿದೆ. ಇನ್ನೂ ಮಳೆಗಾಲ ದೀರ್ಘವಿದ್ದು ಭವಿಷ್ಯ ಹೇಗೋ ಎಂಬ ಆತಂಕವಿದೆ.

ರಾತ್ರೋರಾತ್ರಿ ಕಾರ್ಯಾಚರಣೆ: ಬುಧವಾರ ಸಂಜೆ 5 ಗಂಟೆಯಿಂದ ಮಡಿಕೇರಿಯಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿತು. ಶ್ಯಾಂ ಅವರ ಮನೆಯ ಹಿಂದಿನ ಗುಡ್ಡದಿಂದ ಮಣ್ಣು ಕುಸಿಯಲು ಆರಂಭಿಸಿತ್ತು. ನಂತರ, ರಾತ್ರಿ ಮತ್ತೊಮ್ಮೆ ಮಣ್ಣು ಜರಿದಿರುವುದು ಆತಂಕಕ್ಕೆ ಕಾರಣವಾಗಿ ಸಹಾಯವಾಣಿಗೆ ಕರೆ ಮಾಡಿದ್ದರು.

ಗುಡ್ಡದ ಕೆಳಗೂ ಮನೆಗಳಿದ್ದು ಆತಂಕಕ್ಕೆ ಕಾರಣವಾಗಿತ್ತು. ಆ ಮನೆಯಲ್ಲಿ ವೃದ್ಧ ದಂಪತಿ ನೆಲೆಸಿದ್ದರು. ಜಾಫರ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಯಿತು.

ಇನ್ನು ಕೆಲವರು ಆತಂಕದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಮಳೆ ಹೆಚ್ಚಾದರೂ ನಮಗೂ ಸಮಸ್ಯೆಯಿದೆ ಎಂದು ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಹಲವರು ಅಳಲು ತೋಡಿಕೊಂಡರು. ನಾವು ಸ್ಥಳಾಂತರಕ್ಕೆ ಒಪ್ಪಿ ಮನೆ ನೀಡುವಂತೆ ಕೋರಿದ್ದೆವು. ಆದರೆ, ನಮ್ಮನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ನಿವಾಸಿಗಳು ಕಣ್ಣೀರು ಹಾಕಿದರು.
2018ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ಈಗ ಹಸಿರು ಬೆಳೆದಿದೆ. ಆದರೆ, ಮನೆಯ ಎದುರೇ ಬರೆ (ಗುಡ್ಡ) ಕುಸಿದಿದ್ದರೂ ಆ ಸ್ಥಳದ ಮೇಲೆ ಪ್ಲಾಸ್ಟಿಕ್‌ ಹೊದಿಸಿಕೊಂಡು ಜೀವನ ನಡೆಸುತ್ತಿರುವುದು ಕಂಡುಬಂತು. ಹೀಗೆ ಬೆಟ್ಟದ ಮೇಲಿನ ವಾಸಿಗಳು ಮುಂಗಾರಿನಲ್ಲಿ ಆತಂಕ ಎದುರಿಸುತ್ತಿದ್ದಾರೆ.

ಮನೆ ಪೂರ್ಣಗೊಂಡಿಲ್ಲ:ಸಮಸ್ಯೆಯ ಸುಳಿಯಲ್ಲಿರುವ ಇಂದಿರಾ ನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರದ 123 ಕುಟುಂಬಕ್ಕೆ ಪುನರ್ವಸತಿ ಸ್ಥಳದಲ್ಲಿ ಮನೆ ನೀಡಲಾಗಿದೆ. ಆದರೆ, ಜಂಬೂರು ಬಾಣೆಯಲ್ಲಿ ಮನೆ ಸಿಕ್ಕವರಿಗೆ ಸ್ಥಳಾಂತರ ಸಾಧ್ಯವಾಗಿಲ್ಲ. ಜಂಬೂರಿನಲ್ಲಿ ಇನ್ನೂ ಮನೆಗಳ ಸಣ್ಣಪುಟ್ಟ ಕೆಲಸವಿದ್ದು, ಮನೆ ಸೇರಲು ಸಂತ್ರಸ್ತರಿಗೆ ಸಾಧ್ಯವಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ಕುಸಿದಿದ್ದ ಸ್ಥಳದಲ್ಲೇ ಕೆಲವರು ವಾಸ ಮಾಡುತ್ತಿರುವುದು ಕಂಡುಬಂತು. ಮನೆ ಕೆಲಸ ಪೂರ್ಣಗೊಳಿಸಿದರೆ ಅಲ್ಲಿಗೆ ತೆರಳುತ್ತೇವೆ ಎಂದು ಚಾಮುಂಡೇಶ್ವರಿ ನಗರದ ನಿವಾಸಿಗಳು ಹೇಳಿದರು.

ಸ್ಥಳಕ್ಕೆ ಎ.ಸಿ ಭೇಟಿ: ಭೂಕುಸಿತ ಸ್ಥಳ ವೀಕ್ಷಣೆ
‘2018–19ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಸಂಪೂರ್ಣ ಮನೆ ಕುಸಿದವರಿಗೆ ಪುನರ್ಸವತಿ ಕಲ್ಪಿಸಲಾಗಿದೆ. 2ನೇ ಪಟ್ಟಿಯಲ್ಲಿ ಅಪಾಯದಂಚಿನಲ್ಲಿ ವಾಸ ಮಾಡುತ್ತಿರುವ 420 ಮನೆ ಗುರುತಿಸಲಾಗಿತ್ತು. ನೋಡಲ್‌ ಅಧಿಕಾರಿಗಳೂ ಖುದ್ದು ಪರಿಶೀಲಿಸಿ ವರದಿ ನೀಡಿದ್ದು ಅದರಲ್ಲಿ 163 ಮನೆಗಳಿಗೆ ಪುನರ್ವಸತಿ ಅಗತ್ಯವಿಲ್ಲ ಎಂದು ವರದಿ ಸಲ್ಲಿಸಿದ್ದರು. ಅಂತಹ ಮನೆಗಳ ಸ್ಥಳಕ್ಕೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಅಗತ್ಯವಿದ್ದರೆ ಅವರಿಗೂ ‍ಪುನರ್ವಸತಿ ಕಲ್ಪಿಸಲಾಗುವುದು. ಚಾಮುಂಡೇಶ್ವರಿ ನಗರದ ಎರಡು ಮನೆಗಳು ಪಟ್ಟಿಯಿಂದ ಕೈಬಿಡಲಾಗಿತ್ತು. ನಾನೇ ಖುದ್ದು ಪರಿಶೀಲಿಸಿದ್ದು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಉಪ ವಿಭಾಗಾಧಿಕಾರಿ ಜವರೇಗೌಡ ಮಾಹಿತಿ ನೀಡಿದರು.

ಚಾಮುಂಡೇಶ್ವರಿ ನಗರಲ್ಲಿದ್ದ 5 ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಕಾರ್ಯಾಚರಣೆ ತಂಡವು ಹತ್ತಿರದಲ್ಲೇ ಬೀಡು ಬಿಟ್ಟಿದ್ದು, ಆತಂಕ ಪಡುವ ಅಗತ್ಯವಿಲ್ಲ.
– ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT