ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂನ್ಯಾಯಾಲಯಕ್ಕೆ ಅಂಕುಶ

ಮುಖ್ಯಮಂತ್ರಿ ಮೇಲೆ ಮಲೆನಾಡಿನ ಬಿಜೆಪಿ ಶಾಸಕರ ಒತ್ತಡ
Last Updated 24 ಸೆಪ್ಟೆಂಬರ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು:ಭೂಗಳ್ಳರನ್ನು ಜೈಲಿಗೆ ಅಟ್ಟಿ, ಭೂ ಅಕ್ರಮಗಳಿಗೆ ಇತಿಶ್ರೀ ಹಾಡುವ ಆಶಯದಿಂದ ರಾಜ್ಯದಲ್ಲಿ ಸ್ಥಾ‍ಪಿಸಲಾಗಿರುವ ‘ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ’ಕ್ಕೆ ಇನ್ನೂ ಮೂರು ವರ್ಷ ತುಂಬಿಲ್ಲ. ಅಷ್ಟರಲ್ಲೇ, ನ್ಯಾಯಾಲಯದ ಬುಡವನ್ನೇ ಅಲ್ಲಾಡಿಸುವ ಪ್ರಯತ್ನ ಸದ್ದಿಲ್ಲದೆ ಆರಂಭವಾಗಿದೆ.

ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುವಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದಾರೆ. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹಲವು ಶಾಸಕರು ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಬೆಂಗಳೂರಿನಲ್ಲಷ್ಟೇ ನ್ಯಾಯಾಲಯದ ಕಚೇರಿ ಇದೆ. ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಡ ರೈತರ ಮೇಲೆ ನ್ಯಾಯಾಲಯ ಪ್ರಕರಣಗಳನ್ನು ದಾಖಲಿಸಿದೆ. ಮಲೆನಾಡಿನ ಸಾವಿರಾರು ರೈತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಸಣ್ಣಪುಟ್ಟ ಒತ್ತುವರಿ ಪ್ರಕರಣಗಳಿಗೂ ಶಿಕ್ಷೆ ಅನುಭ
ವಿಸುವಂತಾಗಿದೆ’ ಎಂದು ಶಾಸಕರೊಬ್ಬರು ಅಳಲು ಹೇಳಿಕೊಂಡರು.

‘ನ್ಯಾಯಾಲಯದ ವ್ಯಾಪ್ತಿಗೆ ಕಡಿವಾಣ ಹಾಕಬೇಕು. ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ನಗರ ಪ್ರದೇಶಗಳ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ಸೀಮಿತಗೊಳಿಸಬೇಕು. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಮತ್ತೊಬ್ಬ ಶಾಸಕರು ಪ್ರಸ್ತಾಪಿಸಿದರು. ಅದಕ್ಕೆ ಮುಖ್ಯಮಂತ್ರಿ ‘ಹೌದೇ’ ಎಂದಷ್ಟೇ ಪ್ರತಿಕ್ರಿಯಿಸಿದರು. ಎಂದು ಸಭೆಯಲ್ಲಿ ಪಾಲ್ಗೊಂಡವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲೆನಾಡಿನಲ್ಲಿ ಹೊಸದಾಗಿ ಸಾವಿರಾರು ಎಕರೆ ಅರಣ್ಯ ಒತ್ತುವರಿಯಾಗಿದೆ. ಇದನ್ನು ಮಾಡಿದ್ದು ಬಡ ರೈತರಲ್ಲ. ಪ್ರಭಾವಿಗಳು. ಭೂಗಳ್ಳರ ಹಿತ ಕಾಯುವ ಉದ್ದೇಶದಿಂದ ಕೆಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಿ.ಎಂ ಸಮ್ಮತಿ’

ನಗರದಲ್ಲಿ ಭೂ ಒತ್ತುವರಿಯನ್ನು ತಡೆಯುವ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿತ್ತು. ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸುವಾಗ ಅಧಿಕಾರಿಗಳು ಲೋಪ ಎಸಗಿದರು. ಇದರಿಂದಾಗಿ, ಇಡೀ ರಾಜ್ಯದ ಜನರು ನ್ಯಾಯಾಲಯಕ್ಕೆ ನಿತ್ಯ ಅಲೆದಾಡುವಂತಾಗಿದೆ. ಕಾಯ್ದೆಗೆ ತಿದ್ದುಪಡಿ ತರುವಂತೆ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಮನವಿ ಸಲ್ಲಿಸಿದ್ದೇವೆ. ಮೊನ್ನೆ ಅವರಿಬ್ಬರು ಶಿವಮೊಗ್ಗಕ್ಕೆ ಬಂದಿದ್ದಾಗ ನಾನು ಹಾಗೂ ಹರತಾಳು ಹಾಲಪ್ಪ ಮನವರಿಕೆ ಮಾಡಿಕೊಟ್ಟಿದ್ದೇವೆ. ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಒಪ್ಪಿದ್ದಾರೆ.

ಆರಗ ಜ್ಞಾನೇಂದ್ರ,ತೀರ್ಥಹಳ್ಳಿಯ ಬಿಜೆಪಿ ಶಾಸಕ

***

ಭೂಕಬಳಿಕೆ ತಡೆ ನ್ಯಾಯಾಲಯದ ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾಪ ಸದ್ಯ ಕಂದಾಯ ಇಲಾಖೆಯ ಮುಂದೆ ಇಲ್ಲ.
-ಎನ್‌.ಮಂಜುನಾಥ ಪ್ರಸಾದ್‌, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ

***
ಪ್ರಕರಣಗಳ ವಿಚಾರಣೆಯ ಅಧಿಕಾರವನ್ನು ಜೆಎಂಎಫ್‌ಸಿಗಳಿಗೆ ವಹಿಸುವ ಪ್ರಸ್ತಾವ ಕಾನೂನು ಇಲಾಖೆ ಮುಂದಿದೆ. ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ.
-ಬಿ.ಎಸ್‌.ಪಾಟೀಲ, ಭೂಕಬಳಿಕೆ ತಡೆ ನ್ಯಾಯಾಲಯದ ಸರ್ಕಾರಿ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT