ಬಡ್ಡಿ ಮನ್ನಾ ಚಿಂತನೆ: ಕಾಶೆಂಪೂರ

7
ಭೂ ಅಭಿವೃದ್ಧಿ ಬ್ಯಾಂಕ್‌ನಿಂದ ಪಡೆದ ಮಧ್ಯಮಾವಧಿ, ದೀರ್ಘಾವಧಿ ಸಾಲ

ಬಡ್ಡಿ ಮನ್ನಾ ಚಿಂತನೆ: ಕಾಶೆಂಪೂರ

Published:
Updated:

ಬೆಳಗಾವಿ: ರೈತರು ಭೂ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಭೂ ಅಭಿವೃದ್ಧಿ ಬ್ಯಾಂಕ್‌ಗಳ ಅಧ್ಯಕ್ಷರು ಹಾಗೂ ನಿರ್ದೇಶಕರು ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರೇ ಉತ್ತರ ನೀಡಲಿದ್ದಾರೆ’ ಎಂದರು.

‘ಈ ಬ್ಯಾಂಕ್‌ಗಳಿಂದ ಸಾಲ ಪಡೆದವರೂ ಕೃಷಿಗೆ ಅದನ್ನು ಬಳಸಿಕೊಂಡಿದ್ದಾರೆ. ಟ್ರ್ಯಾಕ್ಟರ್‌ ಖರೀದಿ, ಕೊಳವೆಬಾವಿ ಕೊರೆಸುವುದು, ಹಸು ಖರೀದಿ, ಭೂಮಿಯನ್ನು ಸಮತಟ್ಟು ಮಾಡುವುದು, ತೆಂಗು, ದ್ರಾಕ್ಷಿ ಬೆಳೆಗಳ ಸಲುವಾಗಿ ಪಡೆದಿರುವ ಈ ಸಾಲವನ್ನೂ ಮನ್ನಾ ಮಾಡಬೇಕು. ಈ ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲದ ಮೊತ್ತ ₹ 2500 ಕೋಟಿ ಮೀರದು’ ಎಂದು ಮರಿತಿಬ್ಬೇಗೌಡ ಒತ್ತಾಯಿಸಿದರು.

‘ಈ ಬ್ಯಾಂಕ್‌ಗಳಿಂದ ಸಾಲ ಪಡೆದವರ ಪೈಕಿ ಬಹುಪಾಲು ರೈತರು ಸಾಲಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಿಂದಾಗಿ ಮರುಪಾವತಿ ಮಾಡಿಲ್ಲ. ಹಾಗಾಗಿ, ಬ್ಯಾಂಕ್‌ಗಳ ಬಳಿ ಸಾಲ ನೀಡುವುದಕ್ಕೂ ಹಣ ಇಲ್ಲದ ಪರಿಸ್ಥಿತಿ ಇದೆ’ ಎಂದರು.

ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಸಹಕಾರಿ ಸಂಘಗಳಿಂದ ಪಡೆದ ಸಾಲಕ್ಕೂ ಸರ್ಕಾರ ಕೇವಲ ₹ 50 ಕೋಟಿಯಷ್ಟು ಮೊತ್ತಕ್ಕೆ ಮಾತ್ರ ಋಣಮುಕ್ತ ‍ಪತ್ರ ನೀಡಿದೆ. ಇನ್ನುಳಿದದ್ದು ಯಾವಾಗ ನೀಡುತ್ತೀರಿ’ ಎಂದು ಪ್ರಶ್ನಿಸಿದರು.

‘ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಪೈಕಿ ಹಿಂದಿನ ಸರ್ಕಾರ ₹ 5 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಸಮ್ಮಿಶ್ರ ಸರ್ಕಾರ ₹ 1,322 ಕೋಟಿ ಮಂಜೂರು ಮಾಡಿದೆ. ₹ 800 ಕೋಟಿಯನ್ನು ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಿ
ದ್ದೇವೆ. ಇನ್ನುಳಿದ ಮೊತ್ತವನ್ನೂ ವರ್ಷದ ಒಳಗೆ ಬಿಡುಗಡೆ ಮಾಡುತ್ತೇವೆ. ಋಣಮುಕ್ತ ಪತ್ರನೀಡುತ್ತೇವೆ’ ಎಂದು ಕಾಶೆಂಪೂರ ವಿವರಿಸಿದರು.

‘377 ಆತ್ಮಹತ್ಯೆ 227 ಅರ್ಹ’

ಬೆಳಗಾವಿ: ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಟ್ಟು 377 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 227 ಅರ್ಹವಾಗಿದ್ದು, 78 ಪ್ರಕರಣಗಳು ಎಫ್‌ಎಸ್‌ಎಲ್‌ ವರದಿ ಹಾಗೂ ದಾಖಲಾತಿಗಳ ಸಂಗ್ರಹ ಹಿನ್ನೆಲೆಯಲ್ಲಿ ಬಾಕಿ ಉಳಿದಿವೆ.

ಶುಕ್ರವಾರ ವಿಧಾನ ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಶ್ನೆಗೆ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಉತ್ತರ ನೀಡಿದರು.

ಉಳಿದ 72 ಪ್ರಕರಣಗಳು ತಿರಸ್ಕೃತಗೊಂಡಿದ್ದು, 192 ಪ್ರಕರಣಗಳಲ್ಲಿ ಮೃತ ರೈತ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಉಳಿದ 35 ಪ್ರಕರಣಗಳಿಗೆ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರ ಸಾಲಕ್ಕೆ ಅಸಲಿಗಿಂತ ಹೆಚ್ಚು ಬಡ್ಡಿ ವಸೂಲಿ ತಡೆಗೆ ಮಸೂದೆ

ಕೃಷಿಕರ ಸಾಲಕ್ಕೆ ಅಸಲಿಗಿಂತ ಹೆಚ್ಚು ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಖಾಸಗಿ ಮಸೂದೆಯನ್ನು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಅವರು ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಮಂಡಿಸಿದರು.

‘1978ರ ಋಣ ಪರಿಹಾರ ಕಾಯ್ದೆ ಹಾಗೂ 1961ರ ಲೇವಾದೇವಿ ಕಾಯ್ದೆ ಕೃಷಿಕರಿಗೆ ಸಾಲಗಾರರ ಕಿರುಕುಳದಿಂದ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ. ಹಾಗಾಗಿ ಇಂತಹ ಮಸೂದೆಯ ಅಗತ್ಯ ಇದೆ. ನಾನು ಮಂಡಿಸಿರುವ ‘ಕರ್ನಾಟಕ ಅಸಲು ಹಣಕ್ಕಿಂತ ಬಡ್ಡಿ ವಿಧಿಸುವಿಕೆ ನಿಷೇಧ ಮಸೂದೆ–2018’ ರೈತರಿಗೆ ದುಬಾರಿ ಬಡ್ಡಿ ವಿಧಿಸುವುದನ್ನು ನಿರ್ಬಂಧಿಸಲಿದೆ. ಈಗ ಜಾರಿಯಲ್ಲಿರುವ ಕಾನೂನುಗಳ ನ್ಯೂನತೆಗಳನ್ನು ಸರಿಪಡಿಸಲಿದೆ’ ಎಂದು ಮಟ್ಟೂರ ವಿವರಿಸಿದರು.

ಸಚಿವ ಬಂಡೆಪ್ಪ ಕಾಶೆಂಪೂರ, ‘ಅಸಲಿಗಿಂತ ಹೆಚ್ಚು ಬಡ್ಡಿ ವಸೂಲಿ ಮಾಡುವುದಕ್ಕೆ ಈಗಿನ ಲೇವಾದೇವಿ ಕಾಯ್ದೆಯಲ್ಲೇ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ರೈತರಿಗೆ ರಕ್ಷಣೆ ನೀಡಲು ಹೊಸ ಕಾಯ್ದೆಯ ಅಗತ್ಯ ಇಲ್ಲ’ ಎಂದರು.

ಕೆಲವು ಸದಸ್ಯರು ಈ ಮಸೂದೆಯನ್ನು ಸ್ವಾಗತಿಸಿದರು. ಈ ಖಾಸಗಿ ಮಸೂದೆ ಬಗ್ಗೆ ಇದೇ 21ರಂದು (ಶುಕ್ರವಾರ) ಚರ್ಚೆ  ಕೈಗೆತ್ತಿಕೊಳ್ಳುವುದಾಗಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ತಿಳಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !