ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸೂಧಾರಣೆ | ಕೈಗಾರಿಕೆಗೆ ಭೂಸ್ವಾಧೀನ: ಕೆಲವು ವಾಸ್ತವ ಚಿತ್ರಗಳು

ಅನುಭವ ಮಂಟಪ
Last Updated 25 ಜೂನ್ 2020, 2:52 IST
ಅಕ್ಷರ ಗಾತ್ರ

ಕೈಗಾರಿಕೆಗಳಿಗೆ ಭೂಮಿ ಪಡೆಯುವುದು ತೀರ ಕಠಿಣವಾದ ಕೆಲಸ. ಕೈಗಾರಿಕೆ ಈ ಪ್ರದೇಶದಲ್ಲಿ ಬರುತ್ತದೆ ಎಂದು ಗೊತಾಗುತ್ತಲೇ ಅಲ್ಲಿ ಏಜೆಂಟರು, ಸಮಯ ಸಾಧಕರು, ಹೋರಾಟಗಾರರು, ಮೋಜು ನೋಡುವವರು ಸಹಜವಾಗಿ ಹುಟ್ಟಿಕೊಳ್ಳುತ್ತಾರೆ.

ಭೂಮಿಯನ್ನು ಮಾರಾಟ ಮಾಡಲು ಭೂಮಾಲೀಕರ ಬಳಿ ಸರಿಯಾದ ದಾಖಲೆಗಳಿರುವುದಿಲ್ಲ. 3-4 ತಲೆಮಾರುಗಳಿಂದ ವಾರಸಾ ಆಗಿರುವುದಿಲ್ಲ. ಸಹೋದರರ ನಡುವೆ ಮೌಖಿಕ ಭೂಮಿ ಹಂಚಿಕೆಯಾಗಿರುತ್ತದೆ. ಆದರೆ, ಅದನ್ನು ಭೂಮಿ ಕೇಂದ್ರದಲ್ಲಿ ದಾಖಲಿಸಿರುವುದಿಲ್ಲ. ಬಹಳಷ್ಟು ರೈತರು ಭೂಮಿಯ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರಿಗೆ ತಿಳಿದಿರುವುದಿಲ್ಲ. ಭೂಮಿಯ ಕ್ಷೇತ್ರ ಮಾಹಿತಿ ಸರಿಯಾಗಿರುವುದಿಲ್ಲ. ಕೋರ್ಟ್‌ನಲ್ಲಿ ವ್ಯಾಜ್ಯಗಳಿರುತ್ತವೆ. ಇವುಗಳನ್ನೆಲ್ಲ ಸರಿಪಡಿಸಿದ ನಂತರವೇ ಭೂಮಿ ಖರೀದಿಗೆ ಒಪ್ಪಿಗೆ ದೊರೆಯುತ್ತದೆ. ಇದನ್ನೆಲ್ಲ ನಿಭಾಯಿಸುವಲ್ಲಿ ಉದ್ದಿಮೆ ಸ್ಥಾಪಿಸುವವರ ಉತ್ಸಾಹ ಕುಗ್ಗಿ ಹೋಗುತ್ತದೆ. ಬಹಳ ಸಮಯವೂ ವ್ಯರ್ಥವಾಗುತ್ತದೆ.

ಮಲ್ಲಿಕಾರ್ಜುನ ಹೆಗ್ಗಳಗಿ

ನನ್ನ ಅನುಭವದ ಉದಾಹರಣೆಯನ್ನೇ ಹೇಳುವುದಾದರೆ, ಒಂದು ಕಾರ್ಖಾನೆ ಸ್ಥಾಪನೆಗೆ ರಾಜ್ಯ ಕೈಗಾರಿಕಾ ಉನ್ನತ ಸಮಿತಿ 160 ಎಕರೆ ಭೂಮಿಯನ್ನು ಖರೀದಿಸಲು ಅನುಮತಿ ನೀಡಿತ್ತು. ಇದರಲ್ಲಿ ಕಾರ್ಖಾನೆ ಆಡಳಿತ ಮಂಡಳಿಯವರು ನೇರವಾಗಿ ರೈತರ ಮನ ಒಲಿಸಿ 140 ಎಕರೆ ಭೂಮಿ ಖರೀದಿಸಿದರು. ಆದರೆ, ಮಧ್ಯದಲ್ಲಿದ್ದ ಇಬ್ಬರು ರೈತರು 20 ಎಕರೆ ಭೂಮಿ ಕೊಡಲು ಒಪ್ಪದಿದ್ದರಿಂದ ಆ ಕಾರ್ಖಾನೆ ಕಟ್ಟುವ ಕೆಲಸ ನಿಂತು ಹೋಯಿತು. 20 ಎಕರೆ ಭೂಮಿ ಪಡೆಯುವುದಕ್ಕೆ ಕೆಐಎಡಿಬಿ ಮೂಲಕ ಆಡಳಿತ ಮಂಡಳಿ ಇನ್ನೂ ಪ್ರಯತ್ನಿಸುತ್ತಿದೆ. ಈ ನಡುವೆ ಭೂಮಾಲೀಕರು ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಇದು ಇತ್ಯರ್ಥವಾಗುವುದಕ್ಕೆ ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.

ತಾವು ರೈತರ ಪರ ಎಂದು ತೋರಿಸಿಕೊಳ್ಳುವ ಆತುರದಲ್ಲಿ ಹಲವರು, ‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ಆಕಾಶವೇ ಕಡಿದು ಬೀಳುತ್ತದೆ. ಇನ್ನು ರೈತರು ಬದುಕುವುದೇ ಸಾಧ್ಯವಿಲ್ಲ. ಆಹಾರ ಭದ್ರತೆಗೂ ಧಕ್ಕೆಯಾಗುತ್ತದೆ’ ಎಂದೆಲ್ಲ ತರ್ಕ ಮಾಡಿ, ಕಾಲ್ಪನಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ.

ಕೈಗಾರಿಕೆಗೆ ಭೂಮಿ ಒದಗಿಸುವ ಕಾನೂನಿನ ಸಂಕ್ಷಿಪ್ತ ವಿವರ ಹೀಗಿದೆ: ಮುಖ್ಯಮಂತ್ರಿಯವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡುತ್ತದೆ. ಅದಕ್ಕೆ ಬೇಕಾಗುವ ಭೂಮಿಯನ್ನು ಖರೀದಿಸಲು ಕೂಡ ಅನುಮತಿಯನ್ನೂ ಆ ಪತ್ರದಲ್ಲಿ ದಾಖಲಿಸಲಾಗುತ್ತದೆ.

ಉದಾಹರಣೆಗೆ ಸಕ್ಕರೆ ಕಾರ್ಖಾನೆಯೊಂದನ್ನು ಕಟ್ಟಲು 200 ಎಕರೆ ಭೂಮಿ ಬೇಕು ಎಂದಿಟ್ಟುಕೊಳ್ಳಿ. ಕಾರ್ಖಾನೆಯ ಆಡಳಿತ ಮಂಡಳಿಯವರು ತಿಳಿಸಿದ ಪ್ರದೇಶದಲ್ಲಿ ಭೂಮಿ ಖರೀದಿಸಲು ಸರ್ಕಾರ ಅನುಮತಿ ನೀಡುತ್ತದೆ. ಈ 200 ಎಕರೆ ಭೂಮಿಯಲ್ಲಿ 160 ಎಕರೆ ಭೂಮಿ, ಅಂದರೆ ಶೇ 80 ಭೂಮಿಯನ್ನು, ಕಾರ್ಖಾನೆಯ ಆಡಳಿತ ಮಂಡಳಿಯವರೇ ರೈತರ ಮನ ಒಲಿಸಿ ಖರೀದಿಸಬೇಕು. ಉಳಿದ ಶೇ 20 ಭೂಮಿಯನ್ನು ಮಾತ್ರ ಕೆಐಎಡಿಬಿಯು ನಿಯಮಾನುಸಾರ ವಶಪಡಿಸಿಕೊಳ್ಳುತ್ತದೆ. ಇದು ಅತ್ಯಂತ ದೀರ್ಘ ಪ್ರಕ್ರಿಯೆ. ಮುಂದೆ ಕೈಗಾರಿಕೆಗಾಗಿ ಭೂಮಿ ಪರಿವರ್ತನೆ ಪ್ರಕ್ರಿಯೆ ನಡೆಯುತ್ತದೆ. ಕೈಗಾರಿಕೆ ಉದ್ದೇಶಕ್ಕೆ ನಿಯಮ 109ರ ಪ್ರಕಾರ ಭೂಪರಿವರ್ತನೆಗೆ ಕೂಡ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇಂದಿನ ನಾಗರಿಕರ ಅವಶ್ಯಕತೆಗಳನ್ನು ತ್ವರಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಪೂರೈಸುವುದು ಬೃಹತ್ ಉದ್ದಿಮೆಗಳಿಂದ ಮಾತ್ರ ಸಾಧ್ಯ. ನಮಗೆ ಸಿಮೆಂಟ್, ಸ್ಟೀಲ್, ವಿದ್ಯುತ್, ಔಷಧ, ವಾಹನ, ತೈಲ, ಸಂಪರ್ಕ ಸಾಧನ ನಿತ್ಯದ ಅಗತ್ಯಗಳಾಗಿವೆ. ಇವುಗಳಿಗಾಗಿ ನಾವು ಕೈಗಾರಿಕೆಗಳನ್ನೇ ಆಶ್ರಯಿಸಬೇಕು.

ದೇಶದಲ್ಲಿ ಈಗ ಸ್ಥಾಪಿಸಲು ಉದ್ದೇಶಿಸಿರುವ ಎಲ್ಲ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳು ಸೇರಿ ಬೇಕಾಗುವ ಒಟ್ಟು ಸಾಗುವಳಿ ಜಮೀನಿನ ಪ್ರಮಾಣ ಶೇ 0.02ರಷ್ಟು ಮಾತ್ರ. ದೇಶದ ಒಟ್ಟು ಸಾಗುವಳಿ ಕ್ಷೇತ್ರಕ್ಕೆ ಹೋಲಿಸಿದರೆ ಇದು ತೀರ ಅಲ್ಪ. ಆಹಾರ ಭದ್ರತೆಗೆ ಯಾವುದೇ ತೊಂದರೆ ಇಲ್ಲ. ಮಾತ್ರವಲ್ಲ; ಕೃಷಿಗೂ ಅನೇಕ ರೀತಿಯಲ್ಲಿ ಉದ್ದಿಮೆಗಳು ನೆರವಾಗುತ್ತವೆ. ಕೃಷಿ ಆಧರಿತ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ.

ಒಂದು ಸಕ್ಕರೆ ಘಟಕಕ್ಕೆ ಅಂದರೆ ಸಕ್ಕರೆ, ವಿದ್ಯುತ್‌, ಡಿಸ್ಟಿಲರಿ ಘಟಕಗಳನ್ನು ಕಟ್ಟಲು ಹೆಚ್ಚೆಂದರೆ 200 ಎಕರೆ ಭೂಮಿ ಸಾಕು. ಆದರೆ, ಒಂದು ಕಾರ್ಖಾನೆ ಒಂದು ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆದ ಕಬ್ಬನ್ನು ಖರೀದಿಸಿ ಸಕ್ಕರೆ ಮಾಡುತ್ತದೆ. ರೈತ ಬೆಳೆದ ಕಬ್ಬು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆ ಅವಶ್ಯವಾಗಿ ಬೇಕು. ಹಾಗೆಯೇ ಕಾರ್ಖಾನೆಗೆ ಅವಶ್ಯವಿರುವ ಭೂಮಿಯನ್ನು ರೈತರು ಒದಗಿಸಲೇಬೇಕು. ರಾಜಕೀಯದಿಂದ ಒಂದಿಷ್ಟು ದೂರನಿಂತು ಪೂರ್ವನಿರ್ಧರಿತ ಮನಃಸ್ಥಿತಿ ಬಿಟ್ಟು, ತರ್ಕಬದ್ಧವಾಗಿ ಆಲೋಚಿಸಿದರೆ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಸರಳಗೊಳಿಸುವುದು ಅವಶ್ಯವೆಂಬುದು ಸ್ಪಷ್ಟವಾಗುತ್ತದೆ.

ಲೇಖಕ: ಕಾರ್ಖಾನೆ ನಿವೇಶನಗಳ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT