ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವು ನೀಡಿದ ಮಳೆ: ಬಿತ್ತನೆ ಕುಂಠಿತ

ಸಿಗದ ಕೂಲಿ ಕಾರ್ಮಿಕರು: ರೈತರ ಪರದಾಟ
Last Updated 2 ಜೂನ್ 2018, 9:24 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಮೇ ತಿಂಗಳಿನ ಮೊದಲ ವಾರದಿಂದಲೇ ಮಳೆ ಆರಂಭವಾಗಿದ್ದರೂ, ತಿಂಗಳಾಂತ್ಯದಲ್ಲಿ ಮಳೆರಾಯ ಬಿಡುವು ನೀಡಿರುವುದು ಬಿತ್ತನೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ ಎಂದು ಬಿ. ದುರ್ಗ ಹೋಬಳಿಯ ಬಹುತೇಕ ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಅಶ್ವಿನಿ ಹಾಗೂ ಭರಣಿ ಮಳೆ ಬಂದ ನಂತರ ಹೋಬಳಿಯ ಅನೇಕ ಕಡೆಗಳಲ್ಲಿ ಮುಂಗಾರು ಅಲ್ಪಾವಧಿ ಬೆಳೆಗಳಾದ ಹೆಸರು, ಅಲಸಂದೆ, ಎಳ್ಳು ಮೊದಲಾದವುಗಳನ್ನು ಬಿತ್ತನೆ ಮಾಡುವುದು ವಾಡಿಕೆಯಾಗಿದ್ದು, ಈ ಮಳೆಗಳು ಸಮಯಕ್ಕೆ ಬಾರದೆ, ರೈತರು ಬಿತ್ತನೆಗೆ ಮುಂದಾಗಿಲ್ಲ.

ಮೇ ತಿಂಗಳಿನಲ್ಲಿ ಕೃತ್ತಿಕಾ ಮಳೆ ರೈತರ ಮೊಗದಲ್ಲಿ ಹರ್ಷವನ್ನು ತಂದಿದ್ದರೂ, ಈ ಮಳೆಯಿಂದ ಹೋಬಳಿಯ ಕೆಲವೇ ಗ್ರಾಮಗಳಲ್ಲಿ ರೈತರು ಹತ್ತಿಯನ್ನು ಬಿತ್ತನೆ ಮಾಡಿದ್ದಾರೆ.

‘ರೋಹಿಣಿ ಮಳೆ ಆರಂಭವಾಗಿದ್ದರೂ, ಇದುವರೆಗೂ ಹೋಬಳಿಯಲ್ಲಿ ಅದರ ಪ್ರವೇಶ ಆಗಿಲ್ಲ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳು ಬಂದಿದ್ದರೂ, ಮಳೆ ಸರಿಯಾಗಿ ಬಾರದಿರುವುದರಿಂದ ರೈತರು ಅಲ್ಪಾವಧಿ ಬಿತ್ತನೆ ಬೀಜಗಳನ್ನು ಕೊಳ್ಳುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ’ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಬಿತ್ತನೆ ಕುಂಠಿತ: ಚಿತ್ರದುರ್ಗ, ಹೊಸದುರ್ಗ ತಾಲ್ಲೂಕುಗಳಲ್ಲಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿದ್ದು, ಬಿ. ದುರ್ಗ ಹೋಬಳಿಯಲ್ಲಿ ಮಳೆರಾಯ ಕಣ್ಣಾ ಮುಚ್ಚಾಲೆ ಆಡುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಹದಿನೈದು ದಿನಗಳಿಂದ ಹೋಬಳಿಯ ಬಹುತೇಕ ಕಡೆಗಳಲ್ಲಿ ಸರಿಯಾದ ಮಳೆ ಆಗಿಲ್ಲ. ಹೀಗಾಗಿ ರೈತರು ಬಿತ್ತನೆಗೆ ಸಿದ್ಧರಾಗಿಲ್ಲ. ಅಲ್ಲದೆ, ಹೋಬಳಿಯ ಹಲವೆಡೆ ಈಗಾಗಲೇ ಬಿತ್ತನೆ ಮಾಡಿರುವ ಹತ್ತಿ ಗಿಡಗಳಿಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

ಬೆಲೆ ಏರಿಕೆ ಬಿಸಿ:‌ ‘ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ಬೆಲೆಯೂ ದುಪ್ಪಟ್ಟಾಗಿ ಪರಿಣಮಿಸಿದೆ. ಕಳೆದ ಬಾರಿ ₹ 650, ₹700 ನೀಡುತ್ತಿದ್ದೆವು. ಆದರೆ, ಈ ಬಾರಿ ಡೀಸೆಲ್ ಬೆಲೆ ಏರಿಕೆಯಿಂದಾಗಿ ಗಂಟೆಗೆ ಕ್ರಮವಾಗಿ ₹ 800 ಕೇಳುತ್ತಿದ್ದಾರೆ. ಎತ್ತುಗಳು ಇಲ್ಲದಿರುವುದರಿಂದ, ಅಷ್ಟು ಹಣವನ್ನು ನೀಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ರೈತರಾದ ಈಶ್ವರಪ್ಪ, ಶಂಕ್ರಪ್ಪ, ನಿಸಾರ್.

–ಜೆ. ತಿಮ್ಮಪ್ಪ ಚಿಕ್ಕಜಾಜೂರು

ಮೆಕ್ಕೆಜೋಳಕ್ಕೆ ಆದ್ಯತೆ

ಹೋಬಳಿಯ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಮೆಕ್ಕೆಜೋಳ ಬಿತ್ತನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ಹತ್ತಿ, ರಾಗಿ ಬಿತ್ತನೆಗೆ ರೈತರು ಒಲವು ತೋರುತ್ತಿಲ್ಲ. ಅಲ್ಲದೆ, ದಿನಗೂಲಿ ಬೆಲೆ ದುಪ್ಪಟ್ಟಾಗಿದೆ. ಅಲ್ಲದೆ, ಜಮೀನುಗಳಲ್ಲಿ ಕೂಲಿಗೆ ಬರುವವರ ಸಂಖ್ಯೆಇಳಿಕೆ ಕಂಡಿದೆ. ಇದರಿಂದಾಗಿ ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ಆಸಕ್ತಿ ತೋರಿದ್ದು, ಉಳಿದ ಬೆಳೆಗಳ ಬಗ್ಗೆ ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂದು ಆಂಜಿನಪ್ಪ, ಮುದ್ದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT