ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸುಧಾರಣೆ ಕಾಯ್ದೆ: ನೀರಾವರಿ ಭೂಮಿ ಹೊರಗಿಟ್ಟಿದ್ದು ಏಕೆ?

Last Updated 2 ಜುಲೈ 2020, 14:59 IST
ಅಕ್ಷರ ಗಾತ್ರ

ಬೆಂಗಳೂರು: ಅಚ್ಚುಕಟ್ಟು ಪ್ರದೇಶದ ನೀರಾವರಿ ಭೂಮಿಯನ್ನು ‘ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ’ ವ್ಯಾಪ್ತಿಯಿಂದ ಹೊರಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಫಲವತ್ತಾದ ಭೂಮಿ ಅನ್ಯರ ಪಾಲಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬುವುದು ಸರ್ಕಾರದ ವಾದ.

ರೈತರು, ಸಚಿವ ಸಂಪುಟದ ಸಹೋದ್ಯೋಗಿಗಳ ಒತ್ತಡದ ಜತೆಗೆ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ ಹಲವು ವರ್ಷಗಳಿಂದ ಸರ್ಕಾರ ಹೂಡಿದ ಬಂಡವಾಳದ ಫಲ ‘ಕಂಡವರ’ ಪಾಲಾಗಬಾರದು ಎಂಬ ಆಶಯ ಇದರ ಹಿಂದೆ ಇದೆ ಸರ್ಕಾರದ ಪ್ರತಿಪಾದನೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ನೀರಾವರಿ ಕ್ಷೇತ್ರದ ಮೇಲೆ ರಾಜ್ಯ ಸರ್ಕಾರ ಹಲವು ದಶಕಗಳಿಂದ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ಅಣೆಕಟ್ಟುಗಳನ್ನು ನಿರ್ಮಿಸಿದೆ. ರೈತರಿಗೆ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಅಂತಹ ಜಮೀನುಗಳನ್ನು ಹಣವಂತರು ಖರೀದಿ ಮಾಡಿ ಬೇರೆ ಉದ್ದೇಶಗಳಿಗೆ ಬಳಸಿದರೆ ಅದರಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತದೆ. ನೀರಾವರಿಗಾಗಿ ಹಣ ಹೂಡಿದ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ನೀರಾವರಿ ಜಮೀನುಗಳನ್ನು ಉದ್ದೇಶಿತ ತಿದ್ದುಪಡಿ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಿದ್ದೇವೆ. ಇದನ್ನು ಬಿಟ್ಟು ಬೇರೆ ಉದ್ದೇಶವಿಲ್ಲ. ತಿದ್ದುಪಡಿಗೆ ಎರಡು– ಮೂರು ಮಾರ್ಪಾಡುಗಳನ್ನು ಮಾಡಿ, ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದು ಸುಗ್ರೀವಾಜ್ಞೆಯನ್ನು ಹೊರಡಿಸಲಾಗುವುದು’ ಎಂದು ಮಾಧುಸ್ವಾಮಿ ತಿಳಿಸಿದರು.

‘ನೀರಾವರಿ ಜಮೀನು ಎಂದರೆ ಯಾವುದು ಎಂಬುದನ್ನು ವರ್ಗೀಕರಿಸಬೇಕಾಗುತ್ತದೆ. ಕೆಲವರು ಬೋರ್‌ ಹಾಕಿಸಿ ಕೃಷಿ ಮಾಡುತ್ತಾರೆ, ಇನ್ನು ಕೆಲವರು ಕೆರೆಯ ನೀರು ಬಳಸಿ ಕೃಷಿ ಮಾಡುತ್ತಾರೆ. ಅಚ್ಚುಕಟ್ಟು ಪ್ರದೇಶದಲ್ಲೂ ವ್ಯವಸಾಯ ಮಾಡುತ್ತಾರೆ. ಅಚ್ಚುಕಟ್ಟು ಪ್ರದೇಶದ ಜಮೀನನ್ನು ನೀರಾವರಿ ಜಮೀನು ಎಂದು ಪರಿಗಣಿಸಿ ಅದಕ್ಕೆ ಮಾತ್ರ ವಿನಾಯ್ತಿ ನೀಡಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಕಾಯ್ದೆಗೆ ತಿದ್ದುಪಡಿ ಮಾಡುವಾಗ ಈ ಅಂಶ ಹೊಳೆದಿರಲಿಲ್ಲವೆ, ಇದಕ್ಕಿದ್ದಂತೆ ನೀರಾವರಿ ಭೂಮಿಯ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದ್ದು ಏಕೆ’ ಎಂಬ ಪ್ರಶ್ನೆಗೆ, ಆರಂಭದಲ್ಲೇ ಇದು ಚರ್ಚೆಗೆ ಬಂದಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುವುದರ ಜತೆಗೆ, ಸಂಪುಟದ ಸದಸ್ಯರೂ ಯಾವುದೇ ಕಾರಣಕ್ಕೂ ನೀರಾವರಿ ಭೂಮಿಯನ್ನು ತಿದ್ದುಪಡಿ ವ್ಯಾಪ್ತಿಗೆ ತರಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕೃಷಿ ಭೂಮಿ

ಬೇಸಾಯಕ್ಕೆ ಯೋಗ್ಯ ಭೂಮಿ-1,40,598 ಚ.ಕಿ.ಮೀ,ಬೇಸಾಯವಾಗುತ್ತಿರುವ ಭೂಮಿ-1,07,000 ಚ.ಕಿ.ಮೀ,ನೀರಾವರಿ ಪ್ರದೇಶದಲ್ಲಿ ಕೃಷಿ ಸಾಮರ್ಥ್ಯ-61 ಲಕ್ಷ ಹೆಕ್ಟೇರ್‌,ಬೃಹತ್‌ ಮತ್ತು ಮಧ್ಯಮ ನೀರಾವರಿ ಯೋಜನೆಯಡಿ ಕೃಷಿ- 40.66 ಲಕ್ಷ ಹೆಕ್ಟೇರ್‌,ಅಚ್ಚುಕಟ್ಟು ಪ್ರದೇಶದಲ್ಲಿ ವ್ಯವಸಾಯ- 29.19 ಲಕ್ಷ ಹೆಕ್ಟೇರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT