ಶುಕ್ರವಾರ, ಜುಲೈ 30, 2021
28 °C
ಕೋವಿಡ್ -19: ಅಂತ್ಯಸಂಸ್ಕಾರ ಬಗ್ಗೆ ವಿವಿಧ ಧಾರ್ಮಿಕ ಮುಖಂಡರೊಂದಿಗೆ ಸಭೆ

ಶವ ಸಂಸ್ಕಾರಕ್ಕೆ ಪ್ರತಿ ತಾಲ್ಲೂಕಿನಲ್ಲೂ ಜಾಗ: ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೋವಿಡ್–19 ಸೋಂಕಿನಿಂದ ಮೃತಪಟ್ಟಲ್ಲಿ ಅವರ ಶವವನ್ನು ‘ಕಾರ್ಯಾಚರಣಾ ವಿಧಾನ’ದಂತೆ ನಿಯಮ ಬದ್ಧವಾಗಿ ಅಂತ್ಯಸಂಸ್ಕಾರ ಮಾಡಬೇಕಿದೆ. ವಿವಿಧ ಸಮಾಜಗಳ ಮತ್ತು ಧಾರ್ಮಿಕ ಮುಖಂಡರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದರು. 

ನಗರದ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಸಮಾಜದ ಹಾಗೂ ಧಾರ್ಮಿಕ ಮುಖಂಡರೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಇಡೀ ರಾಜ್ಯ ಹಾಗೂ ದೇಶದಲ್ಲಿ ಕೋವಿಡ್-19 ಸೋಂಕು ಹರಡುತ್ತಿದೆ. ಆದ್ದರಿಂದ, ಆಕಸ್ಮಿಕವಾಗಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟರೆ ಎಸ್‍ಒಪಿಯಂತೆ ಅಂತ್ಯಸಂಸ್ಕಾರ ಮಾಡಬೇಕಿದ್ದು, ಮೃತಪಟ್ಟ ಕುಟುಂಬದವರು ಹಾಗೂ ಅವರ ಬಂಧುಗಳು ಸಹಕರಿಸಬೇಕಿದೆ’ ಎಂದು ಮನವಿ ಮಾಡಿದರು.

ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತವು 3 ತಾಲ್ಲೂಕಿನಲ್ಲಿ ತಲಾ 1 ಎಕರೆ ಜಾಗವನ್ನು ಗುರುತಿಸಿದೆ ಎಂದು ತಿಳಿಸಿದರು.

ಶವ ಸಂಸ್ಕಾರ ಸಂದರ್ಭದಲ್ಲಿ ಕಾರ್ಯಾಚರಣಾ ವಿಧಾನ ಮಾಡಬೇಕಿರುವುದರಿಂದ ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ತರಬೇತಿ ನೀಡಲಾಗುವುದು. ಜೊತೆಗೆ, ವಿವಿಧ ಧಾರ್ಮಿಕ ಹಾಗೂ ಸಮಾಜದ ಕಡೆಯಿಂದ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೆ ಅವರಿಗೂ ತರಬೇತಿ ನೀಡಲಾಗುವುದು. ಈ ಸಂಬಂಧ ಆಯಾ ತಾಲ್ಲೂಕಿನ ಡಿವೈಎಸ್‍ಪಿಗಳಿಗೆ ಜುಲೈ 6ರ ಸಂಜೆಯೊಳಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ನ್ಯಾಯವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಬಾಬು ಮಾತನಾಡಿ, ಎಸ್‍ಒಪಿ ಮಾರ್ಗಸೂಚಿಯಂತೆ ಆಂಬುಲೆನ್ಸ್ ಮೂಲಕ ದೇಹವನ್ನು ಜಿಲ್ಲಾಡಳಿತ ಗುರುತಿಸಿರುವ ನಿಗದಿತ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮೃತದೇಹದ ಸುತ್ತ 3 ಸುತ್ತು ಪ್ಯಾಕ್ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು 4 ಮಂದಿ ಸಿಬ್ಬಂದಿ ನೆರವೇರಿಸುತ್ತಾರೆ. ಮೃತದೇಹವನ್ನು ಕುಟುಂಬದ 5 ಮಂದಿ ಮಾತ್ರ ನೋಡಲು ಅವಕಾಶವಿದೆ. ಮೃತದೇಹವನ್ನು ಮುಟ್ಟಲು ಅವಕಾಶವಿರುವುದಿಲ್ಲ. ವಿವಿಧ ಧಾರ್ಮಿಕ ಪದ್ಧತಿಯ ಅಡಿ ಶವ ಸಂಸ್ಕಾರಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಮೃತದೇಹವನ್ನು ಸರ್ಕಾರದ ನಿರ್ದೇಶನದಂತೆ ನಿಯಮಬದ್ಧವಾಗಿ ಅಂತ್ಯಸಂಸ್ಕಾರ ಮಾಡಲಾಗುವುದು. ಇದಕ್ಕೆ ಕುಟುಂಬದವರು, ಧಾರ್ಮಿಕ ಮುಖಂಡರು ಸಹಕರಿಸಬೇಕಿದೆ ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಅವರು, ಜಿಲ್ಲಾಡಳಿತ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮಿಸಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ವಿವಿಧ ಧಾರ್ಮಿಕ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು.

ನಗರಸಭೆ ಮಾಜಿ ಸದಸ್ಯ ಅಮೀನ್ ಮೊಹಿಸಿನ್ ಅವರು ಮಾತನಾಡಿ, ಈಗಾಗಲೇ ಶವ ಸಂಸ್ಕಾರದಲ್ಲಿ ತೊಡಗಿಸಿಕೊಳ್ಳಲು 30 ಜನರ ತಂಡ ಸಿದ್ಧವಿದೆ. ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಮೃತಪಟ್ಟವರಿಗೆ ನೀರು ಕುಡಿಸುವ ಪದ್ಧತಿಯಿದ್ದು, 4 ಮೀಟರ್ ದೂರದಲ್ಲಾದರೂ ಬಾಯಿಗೆ ನೀರು ಹಾಕಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಶವ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಿಎಸ್‍ಐ ಚರ್ಚ್‍ನ ಅಮೃತ್ ರಾಜ್ ಮಾತನಾಡಿ, ಕ್ರಿಶ್ಚಿಯನ್ ಧರ್ಮದಲ್ಲಿ ಮೃತದೇಹವನ್ನು ಪೆಟ್ಟಿಗೆಯಲ್ಲಿಟ್ಟು ಹೂಳುವ ಪದ್ಧತಿಯಿದೆ. ಅದಕ್ಕೆ ಅವಕಾಶವಿದೆಯೇ ಎಂದರು. ಇದಕ್ಕೆ ಡಾ.ಉಮೇಶ್ ಅವರು ವಿವಿಧ ಧಾರ್ಮಿಕ ಪದ್ಧತಿಯಲ್ಲಿ ಶವ ಸಂಸ್ಕಾರ ಮಾಡಬಹುದಾಗಿದೆ ಎಂದರು.

ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಬೇಕು ಎಂದು ಕೋರಿದರು.

ಕ್ರಿಶ್ಚಿಯನ್ ಸಮುದಾಯದಲ್ಲಿ ಯಾವುದಾದರೂ ಸ್ಥಳವಿದ್ದಲ್ಲಿ ಧರ್ಮಗುರುಗಳೊಂದಿಗೆ ಚರ್ಚಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನಿಡಲಾಗುವುದು ಎಂದರು.

ಬಜರಂಗದಳದ ವಿನಯ್‍ಕುಮಾರ್ ಮಾತನಾಡಿ, ಸೇವಾ ಭಾರತಿಯೊಂದಿಗೆ ಸೇರಿ ಶವ ಸಂಸ್ಕಾರದ ಸಂಬಂಧ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧಿಕ್ಷಕರಾದ ಡಾ.ಎ.ಜೆ.ಲೋಕೇಶ್ ಹಾಜರಿದ್ದರು. 

ಒಂದು ಎಕರೆ ಜಾಗ ನೀಡಲು ನಿರ್ಧಾರ 

‘ಮಡಿಕೇರಿ ನಗರದಲ್ಲಿ ಜಮಾತ್‍ಗೆ ಸೇರಿದ 22 ಎಕರೆ ಜಾಗವಿದ್ದು, ಕೋವಿಂಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟರೆ ಶವ ಸಂಸ್ಕಾರಕ್ಕೆ 1 ಎಕರೆ ಜಾಗ ನೀಡಲಾಗುವುದು. ಆದ್ದರಿಂದ, ಕೋವಿಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಬೇಕು’ ಎಂದು ಮಡಿಕೇರಿ ಮುಸ್ಲಿಂ ಜಮಾತ್ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಅಲಿ ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು