ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯೂರು ಬಳಿ ಭೂ ಕುಸಿತ ; ರೈಲು ಸ್ಥಗಿತ: ಪ್ರಯಾಣಿಕರ ಪರದಾಟ

Last Updated 28 ಡಿಸೆಂಬರ್ 2018, 18:14 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕಿನ ಹಳಿಯೂರು ಬಳಿ ಭೂಮಿ ಕುಸಿತದಿಂದಾಗಿ ಶುಕ್ರವಾರ ಬೆಂಗಳೂರು– ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪ್ರಯಾಣ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಪರದಾಡಿದರು.

ಶಿವಮೊಗ್ಗ ಮಾರ್ಗದಿಂದ ಬೆಂಗಳೂರಿಗೆ ಹೋಗುವ ರೈಲು ಮಧ್ಯಾಹ್ನ 3.30ಕ್ಕೆ ತರೀಕೆರೆ ರೈಲ್ವೆ ನಿಲ್ದಾಣದಲ್ಲಿ, ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹೋಗುವ ರೈಲು ಬೀರೂರು ಬಳಿ ನಿಂತಿತು. ತಾಳಗೊಪ್ಪದಿಂದ ಮೈಸೂರಿಗೆ ಹೊರಡುವ ಫಾಸ್ಟ್ ಪ್ಯಾಸೆಂಜರ್ ಸಹ ಭದ್ರಾವತಿ ಬಳಿ ನಿಂತಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ರೈಲು ತರೀಕೆರೆ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಣವನ್ನು ವಾಪಸ್‌ ನೀಡಬೇಕೆಂದು ಒತ್ತಾಯಿಸಿ ದಾಂಧಲೆ ನಡೆಸಿದ್ದರಿಂದ ಅವರಿಗೆ ಹಣವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಪದೇ ಪದೇ ಪ್ರಯಾಣದಲ್ಲಿ ಆಗುತ್ತಿರುವ ಸಮಸ್ಯೆಯಿಂದಾಗಿ ಬೇಸರ ವ್ಯಕ್ತಪಡಿಸಿದರಲ್ಲದೇ ರೈಲಿನಿಂದ ಇಳಿದು ಸರ್ಕಾರಿ ಬಸ್ ಹತ್ತಿ ಪ್ರಯಾಣ ಮುಂದುವರಿಸಿದರು.

ಭೂಕುಸಿತಗೊಂಡಿರುವ ಪ್ರದೇಶಕ್ಕೆ ರೈಲ್ವೆ ಹಿರಿಯ ಅಧಿಕಾರಿಗಳು ಹಾಗೂ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿದ್ದು ಈ ಭಾಗದಲ್ಲಿರುವ ರೈಲು ಹಳಿಗಳ ಕೆಳಗೆ ಸುರಂಗ ಮಾರ್ಗ ಕೊರೆದಿರುವ ಕಾರಣ ಅನೇಕ ಬಾರಿ ಭೂಮಿಯ ಮಣ್ಣು ಜರುಗಿದ್ದು, ರೈಲುಗಳು ಆಗಾಗ ಪ್ರಯಾಣವನ್ನು ಸ್ಥಗಿತಗೊಳಿಸಬೇಕಾಗುತ್ತಿದೆ. ರೈಲ್ವೆ ಅಧಿಕಾರಿಗಳು ಸಮಸ್ಯೆ ಪರಿಹರಿಸಿ ಆಗುತ್ತಿರುವ ಅವಘಡವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT