ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಬ್ಬರ, ಮಲೆನಾಡು ತತ್ತರ

ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಭಾಗ ಜಲಾವೃತ– ₹ 4.50 ಕೋಟಿ ನಷ್ಟ
Last Updated 15 ಜೂನ್ 2018, 11:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಜಿಲ್ಲೆಯ ಮಲೆನಾಡು ಭಾಗ ತತ್ತರಿಸಿದೆ. ಕೆಲವೆಡೆ ರಸ್ತೆಗೆ ಮಣ್ಣುರಾಶಿ, ಮರಗಳು ಬಿದ್ದಿದ್ದು ಸಂಚಾರ ಬಂದ್‌ ಆಗಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಜಡಿ ಮಳೆ ಸುರಿಯಿತು. ನಸುಕಿನಲ್ಲಿ ಶುರುವಾದ ಬೆಳಿಗ್ಗೆ 10 ಗಂಟೆವರೆಗೂ ಸುರಿಯಿತು. ಇಡೀ ದಿನ ಮೋಡ ಕವಿದಿತ್ತು. ತಂಪು ವಾತಾವರಣ ಇತ್ತು. ಗಿರಿ ಶ್ರೇಣಿಯಲ್ಲಿ ಹದ ಮಳೆಯಾಗಿದೆ. ಗಿರಿಶ್ರೇಣಿಯ ಮಾರ್ಗದಲ್ಲಿ ಕೆಲವೆಡೆ ಮರಗಳ ರೆಂಬೆಕೊಂಬೆಗಳು ಮುರಿದಿವೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ, ಬಾಳೆಹೊನ್ನೂರು ಭಾಗದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.

ಬುಧವಾರ ಜಿಲ್ಲೆಯ ಚಿಕ್ಕಮಗಳೂರು– 33 ಮಿ.ಮೀ, ವಸ್ತಾರೆ– 32, ಜೋಳದಾಳ್‌– 38, ಸಂಗಮೇಶ್ವರ ಪೇಟೆ– 59.7, ಆಲ್ದೂರು– 27.2, ಕೊಪ್ಪ– 42, ಹರಿಹರಪುರ– 67.2, ಜಯಪುರ– 70.2, ಕಮ್ಮರಡಿ– 61.4, ಬಸರಿಕಟ್ಟೆ–85.3, ಕಳಸ– 104 , ಗೋಣಿಬೀಡು– 55, ಜಾವಳಿ– 56, ಮೂಡಿಗೆರೆ– 34, ಬಾಳೆಹೊನ್ನೂರು– 49, ಮೇಗರಮಕ್ಕಿ– 30, ಶೃಂಗೇರಿ– 116, ಕಿಗ್ಗ– 204, ಕೆರೆಕಟ್ಟೆಯಲ್ಲಿ 375 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಈವೆಗೆ ಶೇ 228 ಮಳೆ ಸುರಿದಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ಭಾಗದಲ್ಲಿ ಮಳೆ ಅಬ್ಬರ ಹೆಚ್ಚು ಇದೆ. ಭದ್ರಾ ನದಿ ದಂಡೆ ವಾಸಿಗಳನ್ನು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಕ್ರಮ ವಹಿಸಲಾಗಿದೆ. ಮುಂಜಾಗ್ರತೆಯಾಗಿ ನಾಲ್ಕು ತಾಲ್ಲೂಕುಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು’ ಎಂದು ತಿಳಿಸಿದರು.

‘ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಭಾಗದಲ್ಲಿ ಜಮೀನು, ಗದ್ದೆ. ತೋಟಗಳಿಗೆ ನೀರು ನುಗ್ಗಿದ್ದು ಜಲಾವೃತವಾಗಿವೆ. ಸುಮಾರು 50 ಎಕರೆ ಅಡಿಕೆ, ಬಾಳೆ ತೋಟ ನಾಶವಾಗಿದೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆಯವರಿಗೆ ತೋಟ, ಬೆಳೆ ನಷ್ಟ ಸಮೀಕ್ಷೆ ಮಾಡಲಿದ್ದಾರೆ. ಅವರು ವರದಿ ನೀಡಿದ ಪರಿಹಾರ ನೀಡಲಾಗುವುದು’ ಎಂದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ, ಮೋರಿ, ಸೇತುವೆಗಳು ಕುಸಿದಿದ್ದು ಈವರೆಗೆ ಸುಮಾರು ₹ 4.50 ಕೋಟಿ ನಷ್ಟ ಅಂದಾಜಿಸಲಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳು ಹಾನಿಗೊಂಡಿವೆ. ಕೆಲವೆಡೆ ವಿದ್ಯುತ್‌ ಪೂರೈಕೆ ಕಡಿತಗೊಂಡಿದೆ. ಮೆಸ್ಕಾಂಗೆ ಸುಮಾರು ಎರಡು ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಾನಿ ಸ್ಥಳಗಳಿಗೆ ಸಂಬಂಧಪಟ್ಟ ತಹಶೀಲ್ದಾರ್‌, ಉಪವಿ ಭಾಗಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಿದರು.

‘ಜಿಲ್ಲಾ ಕೇಂದ್ರದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ನಿಟ್ಟಿನಲ್ಲಿ 80 ಎಕರೆ ಜಾಗ ನೀಡಲಾಗಿದೆ. ಇನ್ನು 20 ಎಕರೆ ಅಗತ್ಯ ಇದೆ ಎಂದು ಕೇಳಿದ್ದಾರೆ. ಕೋರಿರುವು 20 ಎಕರೆಯಲ್ಲಿ ಸ್ವಲ್ಪ ಜಾಗ ಅರಣ್ಯ ಮತ್ತು ಕಂದಾಯ ಇಲಾಖೆಗೆ ಒಳಪಟ್ಟಿದೆ. ಇನ್ನು ಸ್ವಲ್ಪ ಜಾಗ ಖಾಸಗಿಯವರಿಗೆ ಸೇರಿದೆ. ಪ್ರಸ್ತಾವ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಜಾನುವಾರು ಸಾವು

ಮಳೆಯಿಂದಾಗಿ 9 ಜಾನುವಾರು ಮೃತಪಟ್ಟಿವೆ. 7 ಜಾನುವಾರು ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. 18 ಮನೆಗಳಿಗೆ ಹಾನಿಯಾಗಿದ್ದು, 10 ಮನೆಗಳವರಿಗೆ ತಲಾ 10 ಸಾವಿರದಂತೆ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT