ಶುಕ್ರವಾರ, ಸೆಪ್ಟೆಂಬರ್ 17, 2021
29 °C

ವಂಚನೆ ಆರೋಪದಡಿ ರಜನಿಕಾಂತ್ ಪತ್ನಿಗೆ ನೋಟಿಸ್‌: ಸಮಯ ನೀಡುವಂತೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ‘ಆ್ಯಡ್ ಬ್ಯೂರೊ ಅಡ್ವಟೈಸಿಂಗ್’ ಕಂಪನಿಗೆ ₹ 6.20 ಕೋಟಿ ವಂಚಿಸಿದ ಆರೋಪದಡಿ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನಟ ರಜನಿಕಾಂತ್ ಅವರ ಪತ್ನಿ ಲತಾ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

’ರಜನಿಕಾಂತ್ ಅಭಿನಯದ ’ಕೊಚ್ಚಾಡಿಯನ್’ ಚಿತ್ರದ ಜಾಹೀರಾತು ಪ್ರಕಟಿಸಿದ್ದ ಕಂಪನಿಯ ಮಾಲೀಕರು ನೀಡಿದ್ದ ದೂರಿನಡಿ ನಿಮ್ಮ (ಲತಾ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚೆನ್ನೈನಲ್ಲಿರುವ ಮನೆಯಲ್ಲೇ 2018ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ನಿಮ್ಮ ಹೇಳಿಕೆ ಪಡೆಯಲಾಗಿದೆ. ಮತ್ತೊಮ್ಮೆ ನಿಮ್ಮ ಹೇಳಿಕೆ ಅಗತ್ಯವಿರುವುದರಿಂದ ಮೇ 6ರಂದು ವಿಚಾರಣೆಗೆ ಬನ್ನಿ’ ಎಂದು ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ನೋಟಿಸ್‌ಗೆ ಉತ್ತರ ನೀಡಿರುವ ಲತಾ, ‘ನಾನು ಸದ್ಯ ಪ್ರವಾಸದಲ್ಲಿದ್ದೇನೆ. ದಯವಿಟ್ಟು ವಿಚಾರಣೆ ದಿನವನ್ನು ಮುಂದೂಡಿ. ಮೇ 20ರ ನಂತರ ವಿಚಾರಣೆಗೆ ಬರುತ್ತೇನೆ’ ಎಂದು ಹೇಳಿದ್ದಾರೆ.

ಪ್ರಕರಣದ ವಿವರ: 2014ರಲ್ಲಿ ನಿರ್ಮಿಸಿದ್ದ ‘ಕೊಚ್ಚಾಡಿಯನ್’ ಚಿತ್ರದ ಜಾಹೀರಾತುಗಳನ್ನು ‘ಆ್ಯಡ್ ಬ್ಯೂರೊ ಅಡ್ವಟೈಸಿಂಗ್’ ಕಂಪನಿ ನೀಡಿತ್ತು. ಒಪ್ಪಂದದಂತೆ ಲತಾ ಅವರು ಸಂಭಾವನೆ ನೀಡಿರಲಿಲ್ಲ. ಆ ಸಂಬಂಧ ಕಂಪನಿ ಮಾಲೀಕ ಅಬಿರ್ ಚಂದ್‌, ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ರದ್ದು ಮಾಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್, ‘ದೂರು ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು. ಬಳಿಕವೇ ಹಲಸೂರು ಗೇಟ್‌ ಠಾಣೆಯಲ್ಲಿ ಲತಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು