ದಾಖಲೆ ಬಹುಮತದಲ್ಲಿ ಗೆಲ್ಲುತ್ತೇನೆ: ಕೆ.ಪಿ.ಸತೀಶ್ ಚಂದ್ರನ್

ಶುಕ್ರವಾರ, ಏಪ್ರಿಲ್ 26, 2019
24 °C
ಏಳು ಭಾಷೆಗಳ, ವೈವಿಧ್ಯಮಯ ಜಾತಿ ಧರ್ಮಗಳ, ವಿಭಿನ್ನ ಸಂಸ್ಕೃತಿಗಳ ತವರೂರು

ದಾಖಲೆ ಬಹುಮತದಲ್ಲಿ ಗೆಲ್ಲುತ್ತೇನೆ: ಕೆ.ಪಿ.ಸತೀಶ್ ಚಂದ್ರನ್

Published:
Updated:
Prajavani

ಕಾಸರಗೋಡು ಎಲ್‌ಡಿಎಫ್ ಅಭ್ಯರ್ಥಿ ಕೆ.ಪಿ.ಸತೀಶ್ ಚಂದ್ರನ್ ಸಂದರ್ಶನ

ಕಾಸರಗೋಡು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ಪಷ್ಟ ರಾಜಕೀಯ ನಿಲುವು ಇರುವ ವಿದ್ಯಾಂತ ಜನರ ನಾಡು ಕಾಸರಗೋಡು. ಹಲವು ಬಾರಿ ಕೋಮು ದಳ್ಳುರಿ ಕಾಣಿಸಿಕೊಂಡಿದ್ದರೂ, ಪರಸ್ಪರ ಮೈತ್ರಿಯಿಂದ ಬಾಳುವ ಕಾಸರಗೋಡಿನಲ್ಲಿ
ಚುನಾವಣೆಯ ಪ್ರಚಾರದ ಕಾವು ಈಗ ತುತ್ತ ತುದಿಗೆ ತಲುಪಿದೆ.

ರಾಜಕೀಯ ಚದುರಂಗದಾಟದಲ್ಲಿ ವಿವಿಧ ಅಭ್ಯರ್ಥಿಗಳಿಗೆ ವಿವಿಧ ದಾಳಗಳು, ಸವಾಲುಗಳು. ಶಬರಿಮಲೆ ವಿವಾದ, ಪೆರಿಯ ಜೋಡಿ ಕೊಲೆ, ಕಾಸರಗೋಡು ಕನ್ನಡ ವಿದ್ಯಾರ್ಥಿಗಳ ಮೇಲೆ ಕಡ್ಡಾಯ ಮಲಯಾಳ ಹೇರಿಕೆ ಇವೆಲ್ಲವೂ ಈ ಬಾರಿಯ ಇಲ್ಲಿನ ಚುನಾವಣಾ ಜ್ವಲಂತ ಸಮಸ್ಯೆಗಳಾಗಿವೆ. ಕೊಲೆಪಾತಕ ರಾಜಕೀಯ, ವಿಶ್ವಾಸಿಗಳ ಮೇಲೆ ಕುದುರೆಸವಾರಿ ನಡೆಸಿದ ಎಲ್‌ಡಿಎಫ್ ನಿಲುವುಗಳನ್ನು ಎರಡೂ ರಂಗಗಳು ತಮ್ಮ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿವೆ.

ಆದರೆ, ಕೋಮುವಾದದ ವಿರುದ್ಧ ದೃಢ ನಿಲುವು, ಮೂರು ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಿದ ಅಪಾರವಾದ ಅಭಿವೃದ್ಧಿ ಯೋಜನೆಗಳು, ಭ್ರಷ್ಟಾಚಾರ ಮುಕ್ತ ಆಡಳಿತ, ಸ್ತ್ರೀ- ಪುರುಷ ಸಮಾನತೆ ಮುಂತಾದ ಪ್ರಗತಿಪರ ನಿಲುವುಗಳನ್ನು ಕೇರಳದ ವಿದ್ಯಾವಂತ ಜನರು ಅರ್ಥೈಸಿ ಎಡರಂಗವನ್ನೇ ಗೆಲ್ಲಿಸಲಿದ್ದಾರೆ ಎಂದು ಎಲ್‌ಡಿಎಫ್‌ ಅಚಲ ವಿಶ್ವಾಸ ಹೊಂದಿದೆ. ಕಾಸರಗೋಡು ಎಲ್‌ಡಿಎಫ್ ಭದ್ರ ಕೋಟೆಯಾಗಿದ್ದು, ಇಲ್ಲಿ ಉಳಿದ ಪಕ್ಷಗಳಿಗೆ ಉಳಿಗಾಲವಿಲ್ಲ ಎಂದೇ ನಂಬಿಕೊಳ್ಳಲಾಗಿದೆ.

ಎರಡು ಬಾರಿ ತ್ರಿಕರಿಪುರದ ಶಾಸಕರಾಗಿ, ಎಂಟು ವರ್ಷಗಳ ಕಾಲ ಸಿಪಿಎಂನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಪಕ್ಷದ ಅತ್ಯಂತ ಜನಪ್ರಿಯ ನಾಯಕ ಎಲ್‌ಡಿಎಫ್ ಅಭ್ಯರ್ಥಿ ಕೆ.ಪಿ.‌ಸತೀಶ್ಚಂದ್ರನ್. ತಮ್ಮ ಎದುರಾಳಿಗಳಾದ
ಯುಡಿಎಫ್‌ನ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರಿಗಿಂತ ಪ್ರಚಾರರಂಗದಲ್ಲಿ ಭಾರಿ ಮುಂದಿದ್ದೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ‌

ಭಾನುವಾರ ರಾತ್ರಿ 10.30ಕ್ಕೆ ಸತೀಶ್ ಚಂದ್ರನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಜಿಲ್ಲೆಯ ಪೂರ್ವ ಗಡಿ ಪ್ರದೇಶವಾದ ಚಿತ್ತಾರಿಕ್ಕಲ್‌ನಲ್ಲಿ ಅವರು ಮನೆ ಮನೆ ಭೇಟಿ ಮಾಡಿ, ಮತಯಾಚನೆಯಲ್ಲಿ ನಿರತರಾಗಿದ್ದರು. ಮನೆಗಳಿಗೆ ಹತ್ತಿ ಇಳಿದ ಬಳಿಕ ಸಿಗುವ ಒಂದೆರಡು ನಿಮಿಷಗಳ ಬಿಡುವಿನಲ್ಲಿ ಅವರು ಪ್ರಶ್ನೆಗೆ ಉತ್ತರಿಸುತ್ತಾ ಹೋದರು.

* ನಿಮ್ಮ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಕಾಸರಗೋಡು ಲೋಕಸಭಾ ಕ್ಷೇತ್ರದ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಮೂರು ಸುತ್ತಿನ ಪ್ರಚಾರ ಮುಗಿದಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ತಲಾ ಮೂರು ದಿನಗಳಂತೆ ಒಟ್ಟು 21 ದಿನಗಳ ಕಾಲ ನಿರಂತರ ಸುತ್ತಾಡಿ ಪ್ರಚಾರ ನಡೆಸಲಾಗಿದೆ. 540 ಸಭಾ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿ ಮತಯಾಚನೆ ನಡೆಸಿದ್ದೇನೆ. ಮೂರು ಲಕ್ಷಕ್ಕೂ ಅಧಿಕ ಮತದಾರರನ್ನು ಮುಖತಃ ಭೇಟಿ ಮಾಡಿದ್ದೇನೆ. ದಾಖಲೆ ಬಹುಮತದಲ್ಲಿ ಗೆಲ್ಲುತ್ತೇನೆ.

* ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿ ಹಿಂದೆ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತಲೂ ಬಲಿಷ್ಠರು. ನಿಮಗೆ ಹೇಗೆ ಅನಿಸುತ್ತದೆ?

ಅವರು ಬಲಿಷ್ಠ ಅಭ್ಯರ್ಥಿ ಎಂದು ನನಗೆ ಅನ್ನಿಸುತ್ತಿಲ್ಲ. ಯುಡಿಎಫ್ ಅಭ್ಯರ್ಥಿ ಯಾರೇ ಆದರೂ ಅದರಿಂದ ಎಲ್‌ಡಿಎಫ್ ಅಭ್ಯರ್ಥಿಗೆ ಪ್ರತಿಕೂಲ ಪರಿಸ್ಥಿತಿ ಉಂಟಾಗದು. ಎಲ್‌ಡಿಎಫ್ ಮತದಾರರು ಪಕ್ಷ, ನಿಲುವುಗಳಿಗೆ ನಿಷ್ಠರು. ನಮ್ಮ ಮತಗಳು ಎಲ್ಲೂ ಸೋರಿ ಹೋಗುವುದಿಲ್ಲ. ಕಾಸರಗೋಡಿನ ಮೂಲೆ ಮೂಲೆಗಳನ್ನೂ ಬಲ್ಲ ನನಗೆ, ಎಲ್ಲರೂ ಚಿರಪರಿಚಿತರು.

* ರಾಷ್ಟ್ರಮಟ್ಟದಲ್ಲಿ ಮೋದಿ ಅಲೆ ಜೋರಾಗಿದೆ. ಕೇರಳದಲ್ಲಿ ನಿಮ್ಮನ್ನು ಆಯ್ಕೆ ಮಾಡಿದರೆ ಕೇರಳಕ್ಕೆ ಸೂಕ್ತ ಸ್ಪಂದನೆ ಸಿಗಬಹುದೇ?

ಮೋದಿ ವರ್ಚಸ್ಸು ಕುಸಿದಿದೆ. ಅವರು ಇನ್ನೊಮ್ಮೆ ಪ್ರಧಾನಿ ಆಗುವುದಿಲ್ಲ. ಅರುಣ್ ಶೌರಿ, ಯಶವಂತ್ ಸಿನ್ಹಾ ಅವರಂತಹ ಹಿರಿಯ ನಾಯಕರು ಮೋದಿ ವಿರುದ್ಧ ಸೆಟೆದು ನಿಂತಿದ್ದಾರೆ. ಮೋದಿ ದುರಾಡಳಿತ ಕೊನೆಗೊಳಿಸಬೇಕಾಗಿದೆ. ಜಾತ್ಯತೀತತೆ, ಮತಾತೀತತೆ, ರಾಷ್ಟ್ರೀಯತೆಗೆ ಮೋದಿ ಆಡಳಿತದಿಂದ ಘಾಸಿಯಾಗಿದೆ. ಜನರನ್ನು ವಿಂಗಡಿಸಿ, ವಿಭಜಿಸಿ, ಒಡೆದು ಆಳುವ ನೀತಿಯನ್ನು ಮೋದಿ ಅವರು ಅನುಸರಿಸಿದ್ದಾರೆ. ಪ್ರಜಾಪ್ರಭುತ್ವ, ಸಮಾನತೆ, ಸಹಬಾಳ್ವೆಯ ಹೊಸತೊಂದು ಅಧಿಕಾರ ಕೇಂದ್ರದಲ್ಲಿ ಬರಲಿದೆ.

* ರಾಷ್ಟ್ರಮಟ್ಟದಲ್ಲಿ ಎಡಪಕ್ಷಗಳ ಪ್ರಾಬಲ್ಯ ಕಡಿಮೆ ಆಗುತ್ತಿದೆ. ಕೇರಳದಲ್ಲಿ ಮಾತ್ರ ನೀವು ಸೆಣಸಿ ಗೆಲುವು ಸಾಧಿಸಿದರೂ
ಪ್ರಯೋಜನ ಏನು?

ರಾಷ್ಟ್ರೀಯ ಮಟ್ಟದಲ್ಲಿ ಎಡರಂಗಕ್ಕೆ ಬೆಂಬಲ ಸಿಗದೇ ಇರುವುದು ದುರದೃಷ್ಟಕರ. ಎಡರಂಗದ ರಾಜಕೀಯ ಮಹತ್ವನ್ನು ಅರ್ಥೈಸಿ ಜನ ಹಿತಕ್ಕಾಗಿ ದುಡಿಯುವ ಸರ್ಕಾರ ಎಲ್ಲಾ ಕಡೆಗಳಲ್ಲೂ ಇರಬೇಕು. ಕೋಮುವಾದ ಮುಕ್ತ, ಜಾತಿ- ಮತಾತೀತ ಕೋಮು ಸೌಹಾರ್ದ ಸಮಾಜ ರೂಪಿಸುವ ಜನಹಿತ ಸರ್ಕಾರ ಭಾರತದಲ್ಲಿ ಎಲ್ಲೆಡೆ ಬರಬೇಕು ಎಂಬುವುದೇ ನಮ್ಮ ಧ್ಯೇಯ.

* ಜಲಪ್ರಳಯಕ್ಕೆ ತುತ್ತಾದ ಕೇರಳಕ್ಕೆ ಬೇಕಾದ ರೀತಿಯಲ್ಲಿ ಕೇಂದ್ರ ನೆರವು ನೀಡಲಿಲ್ಲ ಎಂಬ ಆರೋಪವಿದೆ. ಜನರು ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು?

ಮಹಾಪ್ರಳಯದಿಂದ ಕೇರಳ ತತ್ತರಿಸಿತ್ತು. ಭೀಕರ ಪ್ರಳಯ ಬಂದರೂ ಸಾಮಾನ್ಯ ನೆರೆ ಬಂದರೆ ಸಿಗುವಷ್ಟೂ ಸಹಾಯವನ್ನು ಕೂಡ ಕೇಂದ್ರ ಸರ್ಕಾರ ಮಾಡಲಿಲ್ಲ. ರಸ್ತೆ, ಕಟ್ಟಡಗಳು, ಮನೆಗಳು, ವ್ಯಾಪಾರ ಸಂಸ್ಥೆಗಳು ವ್ಯಾಪಕವಾಗಿ ಕೊಚ್ಚಿ ಹೋಗಿದ್ದರೂ  ಜನರ ಕಣ್ಣೀರು ಒರೆಸಲು ಕೇಂದ್ರ ಬರಲಿಲ್ಲ. ಮುಖ್ಯಮಂತ್ರಿಯವರು ಜನರ ನೆರವನ್ನು ಕೋರಿ ಪ್ರಳಯದ ದುರಂತ ಪರಿಹಾರ ನಿವಾರಣೆಗಾಗಿ ಮುತುವರ್ಜಿ ವಹಿಸಿದರು.

ಕೇರಳದ ಹೊರಗಿರುವ ಮಲಯಾಳಿ ಸಮೂಹ ಇದಕ್ಕಾಗಿ ಕೈ ಜೋಡಿಸಿದ್ದಾರೆ. ನವ ಕೇರಳ ಸೃಷ್ಟಿಗಾಗಿ ರಾಜ್ಯ ಸರ್ಕಾರ ಅತ್ಯುತ್ತಮವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮೋದಿ ಅವರು ಕೇರಳವನ್ನು ಕಡೆಗಣಿಸುತ್ತಿದ್ದಾರೆ. ‘ನಿಮ್ಮ ಮನೆಗೆ ಬಂದ ಹಾಗೆ ಬನ್ನಿ’ ಎಂದು ಮೊದಲ ಭೇಟಿಯಲ್ಲಿ ಮುಖ್ಯಮಂತ್ರಿಯ ಜತೆ ಮಾತಾಡಿದ್ದ ಮೋದಿ ಅನಂತರ ಕೇರಳವನ್ನು ನಿರಂತರವಾಗಿ ಕಡೆಗಣಿಸಿದ್ದಾರೆ. ಪ್ರಳಯ ಬಂದಾಗ ಕೇರಳೀಗರ ಕೈಬಿಟ್ಟ ಮೊದಿಯವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲೇ ಬೇಕು.

* ನಿರುದ್ಯೋಗಿ ಯುವಕರಿಗೆ ಕೇಂದ್ರ ಉದ್ಯೋಗ ಕೊಡಿಸಲಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ?

ಎಡರಂಗ ಸರ್ಕಾರ ಸುಳ್ಳು ಭರವಸೆ ನೀಡಿ ಯುವಕರನ್ನು ವಂಚಿಸಿಲ್ಲ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲೋಕಸೇವಾ ಆಯೋಗದ ಮೂಲಕ 1.80 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಿದೆ. ಇದು ಸಾರ್ವಕಾಲಿಕ ದಾಖಲೆ. ಮುಂದಿನ ಎರಡು ವರ್ಷದಲ್ಲಿ ಇನಷ್ಟು ಉದ್ಯೋಗ ನೀಡಲಿದೆ. ಆದರೆ, ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಒದಗಿಸುವ ಪೊಳ್ಳು ಭರವಸೆ ನೀಡಿದ ನರೇಂದ್ರ ಮೋದಿ ಸರ್ಕಾರ ಈಗ ಅದೇ ಸುಳ್ಳು ಭರವಸೆಯ ವರಸೆಯಲ್ಲೇ ಮತ್ತೊಮ್ಮೆ ಮತ ಯಾಚಿಸುತ್ತಿದ್ದಾರೆ. ಮೋದಿ ಸರ್ಕಾರ ದೇಶದ ಯುವಕರನ್ನು ವಂಚಿಸಿದೆ. ಐದು ವರ್ಷಗಳ ಕಾಲ ಕೋಮುವಾದ ಬೆಳೆಸಿದ ಮೋದಿ ಸರ್ಕಾರ ಜನರನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸವನ್ನಷ್ಟೇ ಮಾಡಿದೆ.

* ಶಬರಿಮಲೆ ಸಮಸ್ಯೆ ಬಿಜೆಪಿಗೆ ಮತ ಲಭಿಸಲು ಆಸ್ಪದ ನೀಡುವುದಿಲ್ಲವೇ?

ಶಬರಿಮಲೆ ಬಗ್ಗೆ ಬಿಜೆಪಿ ಇಬ್ಬಗೆಯ ನೀತಿ ತಾಳಿದೆ. ರಾಜಕೀಯ ಲಾಭ ಪಡೆಯಲು ಶಬರಿಮಲೆ ಸಮಸ್ಯೆಯನ್ನು ವಿಕೃತಗೊಳಿಸಲಾಗಿದೆ. ‘ಗಂಡಸರು ಹೋಗುವ ಯಾವುದೇ ಸ್ಥಳಕ್ಕೂ ಮಹಿಳೆಯರಿಗೂ ಹೋಗುವ ಹಕ್ಕಿದೆ’ ಎಂದು ಆರ್‌ಎಸ್‌ಎಸ್‌ನ ವರಿಷ್ಠ ನಾಯಕ ಆರ್.ಹರಿ ಅವರು ತಮ್ಮ ‘ಮಾಟ್ಟುವಿನ್ ಚಟ್ಟಂಙಳೆ’ ಎಂಬ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ. ಆದರೆ ಅವರ ನಾಯಕರೇ ಹೇಳಿದ ವಿಚಾರಗಳಿಗೆ ತದ್ವಿರುದ್ಧವಾಗಿ ಕೆಟ್ಟ ರಾಜಕೀಯ ನಡೆಸಲು ಶಬರಿಮಲೆ ವಿವಾದ ಉಂಟು ಮಾಡಿದ್ದಾರೆ. ಜನರು ಈ ಕಪಟ ಸಂಪ್ರದಾಯ ಪ್ರೀತಿಯನ್ನು ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಈ ವಿವಾದದಿಂದ ಎಲ್‌ಡಿಎಫ್ ಮತಗಳು ಸಿಗಬಹುದೆಂಬ ಆಸೆಯನ್ನು ಬಿಜೆಪಿ ಬಿಟ್ಟು ಬಿಡುವುದು ಒಳಿತು.

* ಕಾಸರಗೋಡಿನಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕಡ್ಡಾಯ ಕನ್ನಡ ಹೇರಿದಾಗ ಎಲ್‌ಡಿಎಫ್ ಮೌನ ತಾಳಿತ್ತು. ಅವರ ಜ್ವಲಂತ ಸಮಸ್ಯೆ ಈಗಲೂ ಇದೆ. ಈ ಬಗ್ಗೆ ಪ್ರತಿಕ್ರಿಯೆ ಏನು?

ಕಾಸರಗೋಡಿನ ಕನ್ನಡ ಅಲ್ಪ ಸಂಖ್ಯಾತರ ಸಮಸ್ಯೆಗಳ ಬಗ್ಗೆ ಚರ್ಚೆ ನಡಸಿ, ಅಲ್ಪ ಸಂಖ್ಯಾತರ ಹಕ್ಕು ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಮತ್ತು ಅಲ್ಪಸಂಖ್ಯಾತರ ಮಧ್ಯೆ ತಪ್ಪು ತಿಳಿವಳಿಕೆ ಇದ್ದಲ್ಲಿ ಅದರ ಪರಿಹಾರ ಆಗಬೇಕಾಗಿದೆ. ಅದಕ್ಕಾಗಿ ಪ್ರಯತ್ನಿಸುವೆ. ಭಾಷಾ ಅಲ್ಪ ಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ವಿಶೇಷ ಸಹಾನುಭೂತಿ ಇದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಸಂಸತ್ತಿನಲ್ಲಿ ಹಾಲಿ ಸಂಸದ ಪಿ. ಕರುಣಾಕರನ್ ಒತ್ತಾಯಿಸಿದ್ದಾರೆ.

* ಸರ್ಕಾರಗಳು ಬದಲಾದರೂ ಕಾಸರಗೋಡಿನಲ್ಲಿ ಯುವಕರಿಗೆ ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳನ್ನು
ಈ ತನಕ ಆರಂಭಿಸಿಲ್ಲ. ನೀವು ಈ ನಿಟ್ಟಿನಲ್ಲಿ ಏನಾದರೂ ಮಾಡಬಲ್ಲಿರಾ?

ನಾನು ಗೆದ್ದಲ್ಲಿ ಉದ್ಯೋಗ ಸಂಸ್ಥೆಗಳನ್ನು ಸ್ಥಾಪಿಸಲು ಗರಿಷ್ಠ ಪ್ರಯತ್ನ ನಡೆಸುವೆ. ಮಲಬಾರ್ ಪ್ರದೇಶದಲ್ಲಿ ಪಾಲ್ಗಾಟ್‌ನ ಹೊರತಾಗಿ ಉಳಿದ ಯಾವುದೇ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡುವ ಸಂಸ್ಥೆಗಳಿಲ್ಲ. ಕಾಸರಗೋಡಿನ ಉದ್ಯಮ ಕ್ಷೇತ್ರದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಪಿನ್ನಿಂಗ್ ಮಿಲ್ ಆರಂಭಿಸಿದೆ. ಸಾಕಷ್ಟು ಸರ್ಕಾರಿ ಜಾಗ ಹೊಂದಿರುವ ಕಾಸರಗೋಡಿನಲ್ಲಿ ಉದ್ಯೋಗ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !