ನಾಯಕತ್ವ ಬದಲಾವಣೆಗೆ ಕಾಂಗ್ರೆಸ್‌ ಪ್ರಸ್ತಾವ: ಜೆಡಿಎಸ್‌ ನಿರಾಕರಣೆ

ಮಂಗಳವಾರ, ಜೂಲೈ 23, 2019
25 °C

ನಾಯಕತ್ವ ಬದಲಾವಣೆಗೆ ಕಾಂಗ್ರೆಸ್‌ ಪ್ರಸ್ತಾವ: ಜೆಡಿಎಸ್‌ ನಿರಾಕರಣೆ

Published:
Updated:

ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಪತನದ ಆತಂಕ ಎದುರಿಸುತ್ತಿರುವ ಸರ್ಕಾರವನ್ನು ಸುಭದ್ರಗೊಳಿಸಲು ನಾಯಕತ್ವ ಬದಲಾವಣೆ ಒಂದೇ ಮಾರ್ಗ ಎಂಬ ಕಾಂಗ್ರೆಸ್‌ ಪಕ್ಷದ ಪ್ರಸ್ತಾವವನ್ನು ಜೆಡಿಎಸ್‌ ತಳ್ಳಿ ಹಾಕಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಕಾರ್ಯವೈಖರಿ ಕುರಿತು ಬಹುತೇಕ ಅತೃಪ್ತ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿ, ಜೆಡಿಎಸ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಕಾಂಗ್ರೆಸ್‌ ಮುಖಂಡರು ಕಿವಿಮಾತು ಹೇಳಿದ್ದಾರೆ.

ಆದರೆ, ‘ಕಾಂಗ್ರೆಸ್‌ ಮುಖಂಡರು ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಬದಲು ಸಮಸ್ಯೆಯ ಮೂಲ ಹುಡುಕಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು’ ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜೀನಾಮೆ ಪತ್ರ ಸಲ್ಲಿಸಿ, ಮುಂಬೈನಲ್ಲಿ ಬೀಡುಬಿಟ್ಟಿರುವ ತನ್ನ ಶಾಸಕರನ್ನು ಮರಳಿ ಕರೆತರುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌, ಮಲ್ಲಿಕಾರ್ಜುನ ಖರ್ಗೆ, ಆರ್‌.ವಿ. ದೇಶಪಾಂಡೆ ಅಥವಾ ಎಚ್‌.ಕೆ. ಪಾಟೀಲ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಹುದು. ಎಚ್‌.ಡಿ. ರೇವಣ್ಣ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಅವರ ಬಗೆಗಿನ ಅಸಮಾಧಾನ ನಿವಾರಿಸಲಾಗುವುದು ಎಂಬ ಸಲಹೆ ನೀಡಿದೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೋರಿದರೆ ದೇವೇಗೌಡ ಅವರು ಖಂಡಿತ ಒಪ್ಪಲಾರರು ಎಂಬ ನಂಬಿಕೆಯಿಂದಲೇ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿಯವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ತಿಳಿದುಬಂದಿದೆ.

ಜೆಡಿಎಸ್‌ಗೆ ಐದು ವರ್ಷಗಳ ಅವಧಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ಪಕ್ಷದಿಂದಲೇ ಅಧಿಕ ಸಂಖ್ಯೆಯ ಶಾಸಕರು ಬಂಡಾಯ ಎದ್ದಿದ್ದಾರೆ. ಬಿಕ್ಕಟ್ಟಿಗೆ ಮೂಲ ಕಾರಣವೇ ಸಿದ್ದರಾಮಯ್ಯ. ಅವರು ಬಯಸಿದಲ್ಲಿ ಸರ್ಕಾರ ಉಳಿಯಲಿದೆ ಎಂಬ ಆಶಯವೂ ಜೆಡಿಎಸ್‌ ಮುಖಂಡರದ್ದಾಗಿದೆ.

‘ಕಾಂಗ್ರೆಸ್‌ನಲ್ಲೇ ಉದ್ಭವವಾದ ಭಿನ್ನಾಭಿಪ್ರಾಯಗಳು ಮತ್ತು ಒಳ ಜಗಳದಿಂದಾಗಿಯೇ ಸರ್ಕಾರ ಬಿಕ್ಕಟ್ಟು ಎದುರಿಸುವಂತಾಗಿದೆ. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಶಾಸಕರೇ ಬಂಡೆದ್ದಿರುವುದರಿಂದ ಸಮಸ್ಯೆಗೆ ಪರಿಹಾರ ಕಷ್ಟ ಸಾಧ್ಯವೇನಲ್ಲ ಎಂದು ಕುಮಾರಸ್ವಾಮಿ ಅರಿತಿದ್ದಾರೆ.

ಅಂತೆಯೇ ನಾಯಕತ್ವ ಬಿಟ್ಟು ಕೊಡುವ ಬದಲು ಅಗತ್ಯ ಬಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತುಕೊಳ್ಳಬಹುದು ಎಂಬ ಇಂಗಿತವನ್ನೂ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !