‘ಮುಂಬೈಕರ್’ ಉಪನಾಮ ಇರುವುದಕ್ಕೆ ನಿಂದನೆ!

7
ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಪೋಷಕರು, ವಿದ್ಯಾರ್ಥಿಗಳ ಆಗ್ರಹ

‘ಮುಂಬೈಕರ್’ ಉಪನಾಮ ಇರುವುದಕ್ಕೆ ನಿಂದನೆ!

Published:
Updated:
Deccan Herald

ಕಾರವಾರ: ‘ಮುಂಬೈಕರ್’ ಎಂಬ ಉಪನಾಮ ಇರುವ ಕಾರಣಕ್ಕೇ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಲಾಗಿದೆ.

ಕಮರ್ಷಿಯಲ್ ಪ್ರಾಕ್ಟೀಸ್ (ಸಿಪಿ) ವಿಭಾಗದ ಉಪನ್ಯಾಸಕ ಅಂಜನಪ್ಪ ಅವರ ವಿರುದ್ಧ ಈ ರೀತಿ ಆರೋಪ ಮಾಡಲಾಗಿದೆ. ಇದರಿಂದ ಕೆರಳಿದ ವಿದ್ಯಾರ್ಥಿನಿಯ ಪಾಲಕರು ಗುರುವಾರ ಕಾಲೇಜಿಗೆ ಬಂದು ಉಪನ್ಯಾಸಕರ ಅಮಾನತಿಗೆ ಆಗ್ರಹಿಸಿದರು.

ಇದೇ 13ರಂದು ಕಾಲೇಜಿಗೆ ದಾಖಲಾತಿ ಮಾಡಿಕೊಂಡಿದ್ದ ಅಂಕೋಲಾ ತಾಲ್ಲೂಕಿನ ವಿದ್ಯಾರ್ಥಿನಿಯು, 14ರಂದು ಮೊದಲ ದಿನದ ತರಗತಿಗೆ ಹಾಜರಾಗಿದ್ದಳು. ಈ ವೇಳೆ ಅಂಜನಪ್ಪ ಅವರು ವಿದ್ಯಾರ್ಥಿಗಳ ಪರಿಚಯ ಕೇಳುತ್ತಿದ್ದರು. ವಿದ್ಯಾರ್ಥಿನಿಯು ತನ್ನ ಹೆಸರು, ತಂದೆಯ ಹೆಸರು ಹಾಗೂ ಉಪನಾಮದೊಂದಿಗೆ ಪರಿಚಯ ಮಾಡಿಕೊಂಡಿದ್ದಳು. ಅಷ್ಟಕ್ಕೇ ಸಿಟ್ಟಾದ ಉಪನ್ಯಾಸಕ, ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ಬೈದರು. ತರಗತಿಯಲ್ಲಿ ಇತರ ವಿದ್ಯಾರ್ಥಿಗಳ ಎದುರೇ ಸುಮಾರು ಅರ್ಧ ಗಂಟೆ ಉಪನ್ಯಾಸಕರು ನಿಂದಿಸಿದ್ದಾಗಿ ವಿದ್ಯಾರ್ಥಿನಿಯು ಪಾಲಕರಲ್ಲಿ ಹೇಳಿಕೊಂಡಿದ್ದಾಳೆ.

ಕ್ರಮಕ್ಕೆ ಆಗ್ರಹ: ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯನ್ನು ವಿನಾ ಕಾರಣ ಅವಮಾನ ಮಾಡಿದ ಉಪನ್ಯಾಸಕರನ್ನು ಅಮಾನತು ಮಾಡಬೇಕು ಎಂದು ಪ್ರಾಂಶುಪಾಲರನ್ನು ಒತ್ತಾಯಿಸಿದರು. ಉಪನ್ಯಾಸಕರು ಬರುವವರೆಗೂ ಕಾಲೇಜಿನಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

‘ಅಂಜನಪ್ಪ ಅವರನ್ನು ಕೂಡಲೇ ಕಾಲೇಜಿನಿಂದ ಹೊರ ಹಾಕಬೇಕು. ವಿದ್ಯಾರ್ಥಿನಿಯು ಅವರಿದ್ದರೆ ಕಾಲೇಜಿಗೆ ಹೋಗುವುದಿಲ್ಲ ಎನ್ನುತ್ತಿದ್ದಾಳೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕ್ರಮಕ್ಕೆ ಸೂಚನೆ: ಕೆಲವು ಹೊತ್ತಿನ ಚರ್ಚೆಯ ಬಳಿಕ, ಪ್ರಾಂಶುಪಾಲರು ಪಾಲಕರಿಂದ ಲಿಖಿತ ದೂರು ಪಡೆದರು. ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು. ಪ್ರಕರಣ ಬಗೆಹರಿಯುವವರೆಗೆ ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಪ್ರಾಂಶುಪಾಲ ವಿ.ಎಂ.ಹೆಗಡೆ ಪಾಲಕರಿಗೆ ಭರವಸೆ ನೀಡಿದರು.

‘ಖಿನ್ನತೆಗೆ ಒಳಗಾಗಿದ್ದಾರೆ’: ‘ಬುಧವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೂ ಅಂಜನಪ್ಪ ಅಸಭ್ಯವಾಗಿ ವರ್ತಿಸಿದ್ದರು. ಅವರನ್ನು ಅಲ್ಲೇ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಬಗ್ಗೆಯೂ ತಾಂತ್ರಿಕ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ’ ಎಂದು ವಿ.ಎಂ.ಹೆಗಡೆ ತಿಳಿಸಿದರು.

ಅವರು ಗುರುವಾರ ತರಗತಿಗೆ ಹಾಜರಾಗಲಿಲ್ಲ. ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಅಂಜನಪ್ಪ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಕಾಲೇಜಿಗೆ ಹಾಜರಾಗುತ್ತಿದ್ದರು. ವಿದ್ಯಾರ್ಥಿಗಳಿಂದ ಅವರ ವಿರುದ್ಧ ಈವರೆಗೆ ಯಾವುದೇ ದೂರು ಬಂದಿರಲಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಅವರ ವರ್ತನೆಗೆ ಸಂಬಂಧಿಸಿ ನಗರ ಠಾಣೆಯ ಪೊಲೀಸರು ನೋಟಿಸ್ ನೀಡಿ ಕಳುಹಿಸಿದ್ದಾರೆ. ‘ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯ ಇದೆ’ ಎಂದೂ ಪೊಲೀಸರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !