ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮಳೆ: ಕೊಡಗಿನಲ್ಲಿ ‘ರೆಡ್‌ ಅಲರ್ಟ್‌’ ಹಿಂದಕ್ಕೆ

Last Updated 24 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಮುಂಗಾರು ಅಬ್ಬರ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ 2–3 ದಿನ ಅಬ್ಬರಿಸಿದ್ದ ಮುಂಗಾರು ದುರ್ಬಲವಾಗಿದ್ದು, ಹವಾಮಾನ ಇಲಾಖೆ ಘೋಷಿಸಿದ್ದ ‘ರೆಡ್‌ ಅಲರ್ಟ್‌’ ವಾಪಸ್‌ ಪಡೆಯಲಾಗಿದೆ.

ಭಾರತೀಯ ಹವಾಮಾನ ಇಲಾಖೆಯು ಜುಲೈ 25ರಿಂದ 29ರ ತನಕ ಸಾಧಾರಣ ಮಳೆ ಆಗಲಿದೆ ಎಂದು ತಿಳಿಸಿದೆ. ಜಿಲ್ಲೆಯ ಒಳನಾಡು ಪ್ರದೇಶದ ಅಲ್ಲಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಮಳೆಯ ಅಬ್ಬರ ತಗ್ಗಿದ್ದು, ಭಾಗಮಂಡಲದಲ್ಲಿ ನೀರಿನಮಟ್ಟ ಇಳಿದಿದೆ. ಭಾಗಮಂಡಲದಿಂದ ನಾಪೋಕ್ಲು ಗ್ರಾಮಕ್ಕೆ ವಾಹನಗಳು ಸಂಚರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ಭಾಗಮಂಡಲದಲ್ಲಿ 39 ಮಿ.ಮೀ, ಮಡಿಕೇರಿ 21, ನಾಪೋಕ್ಲು 20 ಮಿ.ಮೀ ಮಳೆಯಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಾಗ ರಭಸದ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 36 ಮಿ.ಮೀ. ಮಳೆ ಸುರಿದಿದೆ. ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ 57.4 ಮಿ.ಮೀ. ಮಳೆಯಾಗಿದೆ.

ಬಜ್ಪೆಯ ಆದ್ಯಪಾಡಿ ಹಾಗೂ ನಗರದ ಬಿಜೈ ಬೆಟ್ಟಗುಡ್ಡೆಯಲ್ಲಿ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಿ, ತಡೆಗೋಡೆ ನಿರ್ಮಿಸುವ ಕಾರ್ಯ ನಡೆಸಲಾಗಿದೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕ ಕರಿಂಬಿಲ ಬಳಿ ಚೆರ್ಕಳ–ಕಲ್ಲಡ್ಕ ಅಂತರ ರಾಜ್ಯ ರಸ್ತೆ ಕುಸಿಯುವ ಭೀತಿಯಲ್ಲಿದೆ. ಎರಡು ಅಡಿಯಷ್ಟು ಕುಸಿದಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ.

ರಸ್ತೆಯ ಒಂದು ಬದಿಯ ಮಣ್ಣಿನ ಗುಡ್ಡ ಕುಸಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿದು ಬೀಳುವ ಭೀತಿ ಎದುರಾಗಿದೆ.

ಈ ಗುಡ್ಡ ಬಿದ್ದಲ್ಲಿ, ರಸ್ತೆಯು ಸಂಪೂರ್ಣ ಕುಸಿಯಲಿದೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳದಲ್ಲಿ ಮಾತ್ರ ದಿನವಿಡೀ ಮಳೆಯಾಯಿತು. ಉಳಿದಂತೆ ಮಳೆ ಇರಲಿಲ್ಲ.

ಗೋಕರ್ಣ ಸಮೀಪದ ಹಿರೇಗುತ್ತಿ ಬಳಿ ಗಜನಿಭೂಮಿಯಲ್ಲಿ ಸಂಗ್ರಹವಾಗಿದ್ದನೀರಿನ ಬಿದ್ದು ಸುಧೀರ ಕೇಶವ ಪಡ್ತಿ (32) ಎಂಬುವವರು ಮೃತಪಟ್ಟಿದ್ದಾರೆ. ಕಾಲು ಜಾರಿ ನೀರಿಗೆ ಬಿದ್ದ ಅವರು ನಾಪತ್ತೆಯಾಗಿದ್ದರು.

ಎರಡು ಗಂಟೆ ನಂತರ ಕಾಂಡ್ಲಾ ಗಿಡದ ನಡುವೆ ಅವರ ಶವ ಪತ್ತೆಯಾಯಿತು.

ಭಟ್ಕಳದ ಮುಂಡಳ್ಳಿಯಲ್ಲಿ ಶರಾಬಿ ಹೊಳೆಯ ನೀರು ರಸ್ತೆಯ ಮೇಲೆ ಹರಿದು, ಕೆಲ ಸಮಯ ಗ್ರಾಮ ದ್ವೀಪದಂತಾಗಿತ್ತು. ನದಿನೀರು ಮನೆಗಳಿಗೆ ನುಗ್ಗಿದ್ದರಿಂದ ಆರು ಮನೆಗಳನಿವಾಸಿಗಳನ್ನುಬೇರೆಡೆಗೆ ಸ್ಥಳಾಂತರಿಸಲಾಯಿತು.

ಮಂಗಳವಾರ ತೆರೆಯಲಾಗಿದ್ದ ಐದು ತಾತ್ಕಾಲಿಕ ಪುನರ್ವಸತಿ ಕೇಂದ್ರಗಳ ಪೈಕಿ, ಕುಮಟಾ ತಾಲ್ಲೂಕಿನಕೋನಳ್ಳಿ ಹಾಗೂ ಕಡವು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಂತ್ರಸ್ತರಿಗೆ ಆಶ್ರಯ ಮುಂದುವರಿಸಲಾಗಿದೆ ಎಂದುತಾಲ್ಲೂಕು ಆಡಳಿತ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಕಳಸದಲ್ಲಿ ಒಳ್ಳೆಯ ಮಳೆಯಾಗಿದೆ.

ಶಿವಮೊಗ್ಗ ನಗರ, ಶಿಕಾರಿಪುರ, ಹೊಸನಗರ, ನಗರ ಹೋಬಳಿ, ಕೋಣಂದೂರು, ಸಾಗರ, ತೀರ್ಥಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ. ಭದ್ರಾವತಿಯಲ್ಲಿ ಸಣ್ಣ ಮಳೆಯಾಗಿದೆ.

ದಾವಣಗೆರೆ ನಗರ ಮತ್ತು ಸುತ್ತಮುತ್ತ ಬುಧವಾರ ಹದವಾದ ಮಳೆಯಾಗಿದೆ. ಜಿಲ್ಲೆಯ ಹೊನ್ನಾಳಿ, ತ್ಯಾವಣಗಿಯಲ್ಲಿ ತುಂತುರು ಮಳೆಯಾಗಿದೆ. ಮೆಕ್ಕೆಜೋಳ, ಅಡಿಕೆ ಹಾಗೂ ತೆಂಗಿನ ತೋಟಗಳಿಗೆ ಈ ಮಳೆಯಿಂದ ಅನುಕೂಲವಾಗಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿದೆ.

ಕೆಆರ್‌ಎಸ್‌: 9 ಸಾವಿರ ಕ್ಯುಸೆಕ್‌ ಒಳಹರಿವು

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 9 ಸಾವಿರ ಕ್ಯುಸೆಕ್‌ ತಲುಪಿದೆ. ಬುಧವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 88.15 ಅಡಿಗೆ ತಲುಪಿದೆ.

ಜುಲೈ 8ರಂದು ಜಲಾಶಯದ ಒಳಹರಿವು 12,039 ಕ್ಯುಸೆಕ್‌ ದಾಖಲಾಗಿತ್ತು. ನಂತರ ಮಳೆ ಪ್ರಮಾಣ ಕುಗ್ಗಿದ ಕಾರಣ ಒಳಹರಿವು ಕಡಿಮೆಯಾಯಿತು. ಜುಲೈ 21ರಂದು 374 ಕ್ಯುಸೆಕ್‌ಗೆ ಕುಸಿದಿತ್ತು. ಜುಲೈ 21ರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಬುಧವಾರ 9,035 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ನಾಲೆಗೆ 2,911 ಕ್ಯುಸೆಕ್‌, ನದಿಗೆ 3,197 ಕ್ಯುಸೆಕ್‌ ಹರಿಸಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT