ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಹೆಚ್ಚಿಸದ ಮಾಲಿನ್ಯ ನಿಯಂತ್ರಣ ಮಂಡಳಿ

ಏರುಗತಿಯಲ್ಲಿರುವ ಅಪಾಯಕಾರೀ ಕೈಗಾರಿಕೆಗಳು
Last Updated 13 ಫೆಬ್ರುವರಿ 2019, 20:16 IST
ಅಕ್ಷರ ಗಾತ್ರ

ಆಲ್ವಾರ್( ರಾಜಸ್ಥಾನ):ಕರ್ನಾಟಕದಲ್ಲಿ ಅಪಾಯಕಾರಿ ವಲಯದಲ್ಲಿರುವ ಕೈಗಾರಿಕೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ ಅವುಗಳ ಮಾಲಿನ್ಯ ಪ್ರಮಾಣವನ್ನು ಪರಿಶೀಲನೆ ಮಾಡುವಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ.

ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್‌ಮೆಂಟ್‌ (ಸಿಎಸ್‌ಇ) ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.2014–15 ಸಾಲಿನ ದತ್ತಾಂಶಗಳನ್ನು ಪರಿಗಣಿಸಿ ಈ ಅಧ್ಯಯನ ನಡೆಸಲಾಗಿದ್ದು, ಅಪಾಯಕಾರಿ ಕಿತ್ತಳೆ ಮತ್ತು ಕೆಂಪು ವಲಯದ ಕೈಗಾರಿಕೆಗಳ ಪ್ರಮಾಣ ಶೇ 62ರಷ್ಟು ಹೆಚ್ಚಳವಾಗಿದ್ದರೆ, ತಾಂತ್ರಿಕ ತಜ್ಞ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಕೇವಲ ಶೇ 12 ರಷ್ಟು ವೃದ್ಧಿಯಾಗಿದೆ. 2010–11ನೇ ಸಾಲಿನ ಅಂಕಿ ಅಂಶಗಳೊಡನೆ ಹೋಲಿಸಿ ಈ ಅಧ್ಯಯನ ಮಾಡಲಾಗಿದೆ.

ಸಿಎಸ್‌ಇ ಉಪನಿರ್ದೇಶಕ ಚಂದ್ರಭೂಷಣ್‌ , ದೇಶದ ಕೈಗಾರಿಕಾ ಪ್ರಧಾನ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಮಾಲಿನ್ಯ ನಿಯಂತ್ರಣ ಸ್ಥಿತಿಗತಿಯ ವಿಶ್ಲೇಷಣೆ ನಡೆಸಿದರು. ಕೈಗಾರಿಕಾ ಪ್ರಧಾನ ರಾಜ್ಯಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕಾತಿ ಅಲ್ಪ ಪ್ರಮಾಣದಲ್ಲಿ ನಡೆದರೂ ಅವು ಕೇವಲ ಆಡಳಿತಾತ್ಮ ಸಿಬ್ಬಂದಿ ನೇಮಕಾತಿಯಷ್ಟೇ ಆಗಿರುತ್ತವೆ. ವಿಷಕಾರಿ ಮಾಲಿನ್ಯಕಾರಕ ವಸ್ತುಗಳ ಅಧ್ಯಯನ ನಡೆಸಬಲ್ಲ ತಂತ್ರಜ್ಞರ ನೇಮಕಾತಿಯತ್ತ ಸರ್ಕಾರಗಳು ಆಸಕ್ತಿಯನ್ನೇ ತೋರಿಸುತ್ತಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತೆರಿಗೆ, ಸುಂಕ ಸೇರಿದಂತೆ ವಿವಿಧ ಮೂಲಗಳಿಂದ ವಾರ್ಷಿಕ 9,571 ಕೋಟಿ ಆದಾಯ ಗಳಿಸಿದರೂ, 4,335 ಕೋಟಿ ಹಣವನ್ನು ಮಾತ್ರ ಖರ್ಚು ಮಾಡುತ್ತಿದೆ. ಪ್ರಸ್ತುತ ಇರುವ ತಾಂತ್ರಿಕ ತಜ್ಞ ಸಿಬ್ಬಂದಿಯೊಬ್ಬರು ಬರೋಬ್ಬರಿ 243 ಕೈಗಾರಿಕೆಗಳ ಮಾಲಿನ್ಯ ಪರಿಶೀಲನೆ ನಡೆಸುವ ಒತ್ತಡ ಸೃಷ್ಟಿಯಾಗಿದೆ. ಇಷ್ಟು ಕಡಿಮೆ ಸಂಖ್ಯೆಯ ತಾಂತ್ರಿಕ ತಜ್ಞರು ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ನಿಗಾ ಇಡುವುದು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಕೈಗಾರಿಕೆಗಳ ಸಂಖ್ಯೆ ಹೆಚ್ಚಳದ ಜೊತೆಗೆ ಹೊಸ ನಿಯಮಗಳನ್ನು ಅರ್ಥಮಾಡಿಕೊಂಡು ಮಾಲಿನ್ಯ ನಿಯಂತ್ರಣದತ್ತ ಗಮನ ಹರಿಸಲು ತಂತ್ರಜ್ಞರ ಅಗತ್ಯ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮಂಜೂರಾದ ಆಡಳಿತಾತ್ಮಕ ಅಥವಾ ತಾಂತ್ರಿಕೇತರ ಸಿಬ್ಬಂದಿ ಹುದ್ದೆಯ ಸಂಖ್ಯೆಗಿಂತತಾಂತ್ರಿಕ ತಜ್ಞ ಸಿಬ್ಬಂದಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇರಳ, ಗುಜರಾತ್‌ ಮತ್ತು ಮೇಘಾಲಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಆಡಳಿತಾತ್ಮಕ ಸಿಬ್ಬಂದಿ ಹುದ್ದೆಗಳಿಗೇ ಹೆಚ್ಚು ಒತ್ತು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT