ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಸ್ವಾಮಿ ಬಹಿರಂಗ ಚರ್ಚೆಗೆ ಬರಲಿ: ರೈತ ಮಹಿಳೆ ನಳಿನಿಗೌಡ ಪಂಥಾಹ್ವಾನ

ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ
Last Updated 24 ಮೇ 2020, 14:53 IST
ಅಕ್ಷರ ಗಾತ್ರ

ಕೋಲಾರ: ‘ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ನಾವು ಯಾವ ಸರ್ಕಾರಿ ಕಚೇರಿಯಲ್ಲಿ ಅರ್ಜಿ ಹಾಕಿ ಹಣ ಪಡೆದಿದ್ದೇವೆ ಎಂಬ ಬಗ್ಗೆ ಸಂಸದ ಮುನಿಸ್ವಾಮಿ ಅವರ ಬಳಿ ದಾಖಲೆಪತ್ರ ಇದ್ದರೆ ಬಹಿರಂಗ ಚರ್ಚೆಗೆ ಬರಲಿ’ ಎಂದು ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಸವಾಲು ಹಾಕಿದ್ದಾರೆ.

‘ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಡೆದುಕೊಂಡ ರೀತಿಯನ್ನು ಜನ ನೋಡಿದ್ದಾರೆ. ಸಚಿವರ ಪಕ್ಕದಲ್ಲೇ ಇದ್ದ ಸಂಸದರು ಸಹ ಎಲ್ಲಾ ಗಮನಿಸಿದ್ದಾರೆ. ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ನಾವು ಸಚಿವರಿಗೆ ಮನವಿ ಮಾಡಿದ್ದೆವು. ಆದರೆ, ಸಚಿವರು ಮಹಿಳೆಯರು ಎಂದೂ ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಸಚಿವರ ವರ್ತನೆಗೆ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಸಂಗತಿ ಸಂಸದರಿಗೆ ಗೊತ್ತಿದ್ದರೂ ಸಚಿವರ ಪರವಾಗಿ ಮಾತನಾಡುತ್ತಾ ನನ್ನ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರ ಈ ವರ್ತನೆ ಖಂಡನೀಯ’ ಎಂದು ದೂರಿದ್ದಾರೆ.

‘ನಾವು ಪ್ರಚಾರಕ್ಕೆ ಅಥವಾ ವೈಯಕ್ತಿಕ ಲಾಭಕ್ಕೆ ಹೋರಾಟ ಮಾಡುತ್ತಿಲ್ಲ. ರೈತ ಮಹಿಳೆಯಾಗಿ ನೊಂದ ರೈತರ ಪರವಾಗಿ ಮತ್ತು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುತ್ತಿದ್ದೇನೆ. ಸಂಸದರಿಗೆ ನಾವು ರೈತರೋ ಅಥವಾ ರೈತರಲ್ಲವೋ ಎಂಬ ಅನುಮಾನವಿದ್ದರೆ ನಮ್ಮ ಗ್ರಾಮಕ್ಕೆ ಬಂದು ಪರಿಶೀಲಿಸಲಿ’ ಎಂದು ಹೇಳಿದ್ದಾರೆ.

‘ನಾವು ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ಹಾಕಿ ಹಣ ವಸೂಲಿ ಮಾಡಿದ್ದೇವೆ ಎಂದು ಸಂಸದರು ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅವರ ಬಳಿ ದಾಖಲೆಪತ್ರವಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರ ಆರೋಪಕ್ಕೆ ಉತ್ತರ ನೀಡಲು ಮತ್ತು ತಪ್ಪು ಎಸಗಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧರಿದ್ದೇವೆ. ಅವರಿಗೆ ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ?’ ಎಂದು ಪಂಥಾಹ್ವಾನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT