ಶುಕ್ರವಾರ, ಆಗಸ್ಟ್ 23, 2019
22 °C
ವಿಕೇಂದ್ರೀಕರಣದಿಂದ ಭ್ರಷ್ಟಾಚಾರಕ್ಕೆ ದಾರಿ, ಬಿಬಿಎಂಪಿಗೆ ಹಸ್ತಾಂತರಿಸಲು ವಿವಿಧ ಲೇಖಕರ ವಿರೋಧ

ಗ್ರಂಥಾಲಯ ಇಲಾಖೆಗೆ ಕೊನೆ ಮೊಳೆ: ಆತಂಕ

Published:
Updated:
Prajavani

ಬೆಂಗಳೂರು: ನಗರದ 26 ‘ನಗರ ಕೇಂದ್ರ ಗ್ರಂಥಾಲಯ’ಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮತ್ತೆ ಚಾಲನೆ ನೀಡಿದ್ದು, ಇದಕ್ಕೆ ಲೇಖಕರು ಮತ್ತು ಪ್ರಕಾಶಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯದ್ದು ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ 490 ಗ್ರಂಥಾಲಯಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಸದ್ಯವೇ ಅಧಿಕಾರಿಗಳ ಸಭೆ ಕರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಈ ಪ್ರಯತ್ನ ನಿಲ್ಲಿಸಬೇಕು ಎಂದು ಸಾಹಿತಿಗಳು ಮತ್ತು ಪ್ರಕಾಶಕರು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿದ್ದ ಅಂದಿನ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಪ್ರೊ.ಬರಗೂರು ರಾಮಚಂದ್ರಪ್ಪ ಕಳೆದ ತಿಂಗಳು ಪತ್ರ ಬರೆದು, ‘ಬೆಂಗಳೂರು ಮಹಾನಗರದಲ್ಲಿರುವ ಗ್ರಂಥಾಲಯಗಳನ್ನು ಬಿಬಿಎಂಪಿ ವಶಕ್ಕೆ ನೀಡುವ ಪ್ರಸ್ತಾವ ಕೈಬಿಡಬೇಕು’ ಎಂದು ಒತ್ತಾಯಿಸಿದ್ದರು.

‘ಸರ್ಕಾರ ತನ್ನದೇ ಇನ್ನೊಂದು ಇಲಾಖೆಯನ್ನು ಕುಗ್ಗಿಸುವ ಪ್ರಸ್ತಾವವನ್ನು ಕೈಬಿಡಬೇಕು. ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ನಾಡಿನ ಲೇಖಕರು ಹಾಗೂ ಪ್ರಕಾಶಕರು ಸಮ್ಮತಿ ಇಲ್ಲ’ ಎಂದೂ ಬರಗೂರು ಪತ್ರದಲ್ಲಿ ತಿಳಿಸಿದ್ದರು.

ಗ್ರಂಥಾಲಯ ಕಟ್ಟಡ, ಹಣದ ಮೇಲೆ ಕಣ್ಣು?: ನಗರದ ಪ್ರಮುಖ ಸ್ಥಳಗಳಲ್ಲಿ 26 ನಗರ ಕೇಂದ್ರ ಗ್ರಂಥಾಲಯದ ಕಟ್ಟಡಗಳಿವೆ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡಗಳು ಮತ್ತು ಇಲಾಖೆಗೆ ಗ್ರಂಥಾಲಯ ಕರದ ರೂಪದಲ್ಲಿ ಬರುತ್ತಿರುವ ಹಣದ ಮೇಲೆ ಅಧಿಕಾರಿಗಳ ಕಣ್ಣು ಬಿದ್ದಿದೆ ಎಂದು ಹೆಸರು ಹೇಳಲು ಬಯಸದ ಪ್ರಕಾಶಕರು ಆರೋಪಿಸಿದ್ದಾರೆ.

‘ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳು ಈವರೆಗೂ ಸಂಗ್ರಹಿಸಿರುವ ₹450 ಕೋಟಿಗೂ ಹೆಚ್ಚು ಗ್ರಂಥಾಲಯ ಕರವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸದೇ ತಮ್ಮಲ್ಲೇ ಉಳಿಸಿ ಕೊಂಡಿವೆ. ಪ್ರಕಾಶಕರು ಮತ್ತು ಸಾಹಿತಿಗಳ ಒತ್ತಡಕ್ಕೂ ಮಣಿಯುತ್ತಿಲ್ಲ. ಹಿಂದಿನ ಸರ್ಕಾರಗಳೂ ನಮ್ಮ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ’ ಎಂದು ಅವರು ಹೇಳಿದರು.

‘ಈ ಹಣವನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವುದು ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಹುನ್ನಾರ. ರಾಜ್ಯದಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು ಎಂಬ ಕಾರಣಕ್ಕೆ ಗ್ರಂಥಾಲಯ ಕರವನ್ನು ವಿಧಿಸಿ ಆ ಮೂಲಕ ಬಂದ ಹಣವನ್ನು ಗ್ರಂಥಾಲಯ ಇಲಾಖೆಯ ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಆ ಬಳಿಕ ಮೂಲ ಉದ್ದೇಶದಿಂದಲೇ ವಿಮುಖವಾಗಿದೆ. ಸುದೀರ್ಘ ಇತಿಹಾಸವಿರುವ ಗ್ರಂಥಾ ಲಯ ಇಲಾಖೆಗೆ ಕೊನೆ ಮೊಳೆಹೊಡೆಯಬೇಡಿ’ ಎಂದು ಮನವಿ ಮಾಡಿದರು.

ಕಟ್ಟಡಗಳ ಕಥೆ ಏನು?: ಗ್ರಂಥಾಲಯ ಕಟ್ಟಡಗಳನ್ನು ಬಿಬಿಎಂಪಿಯವರು ಬೇರೆ ಉದ್ದೇಶಕ್ಕೂ ಬಳಸಿಕೊಳ್ಳುವ ಸಾಧ್ಯತೆ ಇದೆ. ಆಗ ಗ್ರಂಥಾಲಯಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತವೆ ಎಂದು ಪ್ರಕಾಶಕ ಸೃಷ್ಟಿ ನಾಗೇಶ್‌ ತಿಳಿಸಿದರು. ನಗರದ ಪಾರಂಪರಿಕ ಮಾರುಕಟ್ಟೆಗಳ ವ್ಯಾಪಾರಿಗಳನ್ನು ಹೊರಗೆ ಹಾಕಿ, ಮಾರುಕಟ್ಟೆಗಳನ್ನು ಒಡೆದು ಶಾಪಿಂಗ್‌ ಮಾಲ್‌ ಮಾದರಿಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಗ್ರಂಥಾಲಯ ಕಟ್ಟಡಗಳ ಸ್ಥಿತಿ ಆ ರೀತಿ ಆಗಬಾರದು ಎಂದು ಅವರು ಹೇಳಿದರು.

ಬಜೆಟ್‌ ಆಗಿಲ್ಲ: ಪ್ರತಿವರ್ಷ ಗ್ರಂಥಾಲಯ ಇಲಾಖೆಗೆ ಹಣ ಬಿಡುಗಡೆ ಮಾಡಲು ಮಾರ್ಚ್‌ನಲ್ಲೇ ಬಜೆಟ್‌ ರೂಪಿಸಲಾಗುತ್ತದೆ. ಈ ವರ್ಷ ಇನ್ನೂ ಬಜೆಟ್‌ ತಯಾರಿಸಿಲ್ಲ. ಇದರಿಂದ ₹10 ಕೋಟಿ ಬಿಡುಗಡೆ ಆಗಿಲ್ಲ. ಇದರಿಂದ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪುಸ್ತಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

‘ಪುಡಿ ರಾಜಕಾರಣಿ, ಏಜೆಂಟರಿಗೆ ಹಬ್ಬ’
ಗ್ರಂಥಾಲಯಗಳನ್ನು ಬಿಬಿಎಂಪಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸುವುದರಿಂದ ಪುಸ್ತಕ ಖರೀದಿ ವ್ಯವಹಾರಕ್ಕೆ ಪುಡಿ ರಾಜಕಾರಣಿಗಳು ಮತ್ತು ಏಜೆಂಟರು ಹುಟ್ಟಿಕೊಳ್ಳುತ್ತಾರೆ. ಲೇಖಕರು ಮತ್ತು ಪ್ರಕಾಶಕರು ಇವರ ಮರ್ಜಿಗೆ ಒಳಪಡಬೇಕಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶ್ರೀಕಂಠ ಕೂಡಿಗೆ ಹೇಳಿದರು.

ಗ್ರಂಥಾಲಯ ಕರದಿಂದ ಬರುವ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಪುಸ್ತಕ ಖರೀದಿ ವ್ಯವಸ್ಥೆ ಭ್ರಷ್ಟಾಚಾರದ ಕೂಪವಾಗುತ್ತದೆ. ನಾನು ಪುಸ್ತಕ ಆಯ್ಕೆ ಸಮಿತಿಯಲ್ಲಿ ಇದ್ದಾಗ ಗ್ರಂಥಾಲಯಗಳ ವಿಕೇಂದ್ರೀಕರಣ ಪ್ರಸ್ತಾವ ಬಂದಿತ್ತು. ಇದನ್ನು ವಿರೋಧಿಸಿದ್ದೇನೆ ಎಂದರು.

**
ಪಾರಂಪರಿಕ ಮಾರುಕಟ್ಟೆಗಳ ವ್ಯಾಪಾರಿಗಳನ್ನು ಹೊರಗೆ ಹಾಕಿ, ಶಾಪಿಂಗ್‌ ಮಾಲ್‌ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಗ್ರಂಥಾಲಯ ಕಟ್ಡಗಳ ಸ್ಥಿತಿ ಆ ರೀತಿ ಆಗಬಾರದು.
-ಸೃಷ್ಟಿ ನಾಗೇಶ್‌, ಪ್ರಕಾಶಕ

Post Comments (+)