ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಓದುಗರ ಚಿಂತೆಗೆ ಡಿಜಿಟಲ್ ಮದ್ದು!

ಲಾಕ್‌ಡೌನ್‌ ಕಾರಣಕ್ಕೆ ಡಿಜಿಟಲ್‌ ಗ್ರಂಥಾಲಯ ಮತ್ತು ಮೊಬೈಲ್ ಆ್ಯಪ್‌ ಸೇವೆಗಳನ್ನು ಬಳಸುವಂತೆ ಸಲಹೆ
Last Updated 12 ಮೇ 2020, 4:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಭೀತಿ,ಲಾಕ್‌ಡೌನ್‌ ಕಾರಣಕ್ಕೆ ಕಳೆದ ಒಂದೂವರೆ ತಿಂಗಳಿಂದ ಗ್ರಂಥಾಲಯಗಳು ಬಾಗಿಲು ಮುಚ್ಚಿದ್ದೇ, ಓದುಗರ ಚಿತ್ತ ಇದೀಗ ಆನ್‌ಲೈನ್‌ ಸೇವೆಗಳತ್ತ ಹೊರಳುತ್ತಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಓದುಗರಿಗೆ ಆನ್‌ಲೈನ್‌ ಸೇವೆ ಒದಗಿಸುವುದಕ್ಕಾಗಿ ಕಳೆದ ನವೆಂಬರ್‌ನಲ್ಲಿ ತನ್ನದೇ ಜಾಲತಾಣದ ಮೂಲಕ ಡಿಜಿಟಲ್‌ ಗ್ರಂಥಾಲಯ ಸೇವೆ ಪರಿಚಯಿಸಿತ್ತು. ಅದೀಗ ಲಾಕ್‌ಡೌನ್‌ ಕಾರಣಕ್ಕೆ ಓದುಗರ ನೆರವಿಗೆ ಬರುತ್ತಿದೆ.

ಗ್ರಂಥಾಲಯಗಳು ತೆರೆಯದೆ, ಪುಸ್ತಕ ಸಿಗದೆ ಓದುವ ಹಂಬಲದಿಂದ ಚಡಪಡಿಕೆಯಲ್ಲಿರುವ ಓದುಗರಿಗೆ ಗ್ರಂಥಾಲಯ ಇಲಾಖೆ ಅಧಿಕಾರಿಗಳು wwwkarnatakadigitalpubliclibrary.org/ ಜಾಲತಾಣದ ಸೇವೆ ಬಳಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

ಈ ಜಾಲತಾಣದಲ್ಲಿ ಮಕ್ಕಳು ರಾಜ್ಯ ಸರ್ಕಾರದ ಸಿಬಿಎಸ್‌ಸಿ, ಎನ್‌ಸಿಆರ್‌ಟಿ, ಐಸಿಎಸ್‌ಸಿ ಪಠ್ಯಕ್ರಮದ ಪುಸ್ತಕಗಳನ್ನು ಉಚಿತವಾಗಿ ಓದಬಹುದು.

ಜತೆಗೆ ಗ್ರಂಥಾಲಯ ಇಲಾಖೆಯು ಓದುಗರಿಗೆ ಸುಲಭ ಸೇವೆ ನೀಡುವ ಉದ್ದೇಶದಿಂದ ಇತ್ತೀಚೆಗೆ e-Sarvajanika Granthalaya ಮೊಬೈಲ್‌ ಆ್ಯಪ್ ಕೂಡ ಪರಿಚಯಿಸಿದ್ದಾರೆ. ‘ಅಂಗೈಯಲ್ಲಿ ಓದುಗನ ಪುಸ್ತಕ’ ಎಂಬ ಈ ಸೇವೆಯನ್ನು ಜನರು ಸ್ಮಾರ್ಟ್‌ಫೋನ್‌ಗಳ ಮೂಲಕ ಸುಲಭವಾಗಿ ಬಳಕೆ ಮಾಡಬಹುದು.

ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಜತೆಗೆ 7 ಶಾಖಾ ಗ್ರಂಥಾಲಯಗಳು, ತಲಾ ಒಂದು ಡಿಜಿಟಲ್‌ ಮತ್ತು ಜಿಲ್ಲಾ ಮಕ್ಕಳ ಗ್ರಂಥಾಲಯಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದ 151 ಗ್ರಂಥಾಲಯಗಳಿವೆ.

ಪ್ರಸ್ತುತ, ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ4,866 ಮತ್ತು ಜಿಲ್ಲೆಯಾದ್ಯಂತ ಗ್ರಂಥಾಲಯಗಳಲ್ಲಿ 22,531 ಸದಸ್ಯತ್ವ ಪಡೆದ ಓದುಗರಿದ್ದಾರೆ. ಈ ಪೈಕಿ ಬಹುಪಾಲು ಜನರು ಲಾಕ್‌ಡೌನ್‌ ಕಾರಣಕ್ಕೆ ಗ್ರಂಥಾಲಯಗಳಿಂದ ಪುಸ್ತಕ ಪಡೆದುಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ.

’ಗ್ರಂಥಾಲಯಗಳು ಬಾಗಿಲು ಮುಚ್ಚಿರುವ ಕಾರಣಕ್ಕೆ ಓದುಗರು, ಮಕ್ಕಳು ಓದಿನಿಂದ ವಂಚಿತವಾಗುವ ಅಗತ್ಯವಿಲ್ಲ. ಡಿಜಿಟಲ್‌ ಗ್ರಂಥಾಲಯ ಸೇವೆ ಬಳಸಿಕೊಂಡು ಲಕ್ಷಾಂತರ ಪುಸ್ತಕಗಳನ್ನು, ಸಾವಿರಾರು ನಿಯತಕಾಲಿಕೆ, ದಿನಪತ್ರಿಕೆಗಳನ್ನು ಓದಬಹುದು‘ ಎನ್ನುತ್ತಾರೆ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ.

’ಮಕ್ಕಳು ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು, ಕಥೆ, ಸಾಹಿತ್ಯ, ಕಾದಂಬರಿಯಂತಹ ಪಠ್ಯೇತರ ಪುಸ್ತಕಗಳು, ನಿಯತಕಾಲಿಕೆಗಳು, ಶೈಕ್ಷಣಿಕಕ್ಕೆ ಸಂಬಂಧಿಸಿದ, ಕಾಮಿಕ್ಸ್‌, ನೀತಿಕಥೆ, ಪಂಚತಂತ್ರ, ರಸಪ್ರಶ್ನೆಗೆ ಸಂಬಂಧಿಸಿದ ಸಾವಿರಾರು ವಿಡಿಯೊ ತುಣುಕುಗಳು ಡಿಜಿಟಲ್‌ ಲೈಬ್ರರಿಯಲ್ಲಿವೆ‘ ಎಂದು ತಿಳಿಸಿದರು.

ಅಂಕಿಅಂಶಗಳು

38,024:ಡಿಜಿಟಲ್ ಗ್ರಂಥಾಲಯದಲ್ಲಿರುವ ಇ–ಬುಕ್‌ಗಳು

59,990:ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಜರ್ನಲ್‌ಗಳು

5,820:ವಿಡಿಯೊಗಳು

1,007: ಮಕ್ಕಳಿಗೆ ಸಂಬಂಧಿತ ಇ–ಪುಸ್ತಕಗಳು

312:ಜಿಲ್ಲೆಯಲ್ಲಿ ಈವರೆಗೆ ಡಿಜಿಟಲ್‌ ಗ್ರಂಥಾಲಯ ಸೇವೆ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT