ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ವಿತರಣಾ ಕೇಂದ್ರಕ್ಕೆ ಪಾಲಿಕೆ ಪರವಾನಗಿ ಕಡ್ಡಾಯ

ರಿಟ್‌ ಅರ್ಜಿಗಳ ವಿಲೇವಾರಿ: ಏಕಸದಸ್ಯ ನ್ಯಾಯಪೀಠದ ಆದೇಶ
Last Updated 27 ಮೇ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: 'ಪಾಲಿಕೆ ವ್ಯಾಪ್ತಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ವಿತರಣಾ ಸ್ಟೇಷನ್ ಪ್ರಾರಂಭಿಸಲು ಸ್ಥಳಿಯ ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯ’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ‘ಸಿಪಾನಿ ಎನರ್ಜಿ ಲಿಮಿಟೆಡ್‌ ಕಂಪನಿ’ ಹಾಗೂ ಜಯನಗರ ಮೊದಲನೇ ಹಂತದ ಐದನೇ ಕ್ರಾಸ್‌ನಲ್ಲಿರುವ ‘ಚಪಲಮ್ಮ ಮತ್ತು ಪ್ಲೇಗಮ್ಮ ದೇವಸ್ಥಾನಗಳ ಅಭಿವೃದ್ಧಿ ಸಂಘ’ದ ಅಧ್ಯಕ್ಷ ಕೆ.ಎಂ.ನಟರಾಜ್‌ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

‘ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಕಲಂ 353 ಮತ್ತು ಷೆಡ್ಯೂಲ್ 10ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್‌ಪಿಜಿ ವಿತರಣಾ ಸ್ಟೇಷನ್ ಸ್ಥಾಪಿಸಿ ವ್ಯಾಪಾರ ಚಟುವಟಿಕೆ ನಡೆಸಲು ಸ್ಥಳೀಯ ನಗರ ಪಾಲಿಕೆಯಿಂದ ಉದ್ದಿಮೆ–ವ್ಯಾಪಾರ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಸ್ಥಳೀಯರಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯವಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: ಬಿಬಿಎಂಪಿ ಚಿಕ್ಕಪೇಟೆ ವಲಯದ ಆರೋಗ್ಯಾಧಿಕಾರಿ, 2018ರ ಸೆಪ್ಟೆಂಬರ್ 20ರಂದು ಸಿಪಾನಿ ಎನರ್ಜಿ ಲಿಮಿಟೆಡ್‌ ಕಂಪನಿಗೆ ನೋಟಿಸ್ ಜಾರಿಗೊಳಿಸಿದ್ದರು. ‘ನೀವು ಪರವಾನಗಿ ಪಡೆಯದೆ ಸ್ಟೇಷನ್‌ ಆರಂಭಿಸಿದ್ದೀರಿ. ನಿಮ್ಮ ಕೇಂದ್ರವನ್ನು ಯಾಕೆ ಮುಚ್ಚಿಸಬಾರದು’ ಎಂದು ಕೇಳಿದ್ದರು.

ಇದನ್ನು ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಪನಿ, ‘ನಾವು ಈಗಾಗಲೇ ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ಪರವಾನಗಿ ಪಡೆದಿದ್ದೇವೆ. ಆದ್ದರಿಂದ ಪಾಲಿಕೆಯ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ’ ಎಂದು ಪ್ರತಿಪಾದಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಎಲ್‌ಪಿಜಿ ವಿತರಣಾ ಕೇಂದ್ರದಿಂದ ತೊಂದರೆ ಆಗುತ್ತಿದೆ’ ಎಂದು ಆಕ್ಷೇಪಿಸಿ ಕೆ.ಎಂ.ನಟರಾಜ್‌ ಕೂಡಾ ಮತ್ತೊಂದು ರಿಟ್‌ ಅರ್ಜಿ ಸಲ್ಲಿಸಿದ್ದರು.

ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ವಾದ ಮಂಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT