ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಲೈಟ್‌ ಫಿಶಿಂಗ್‌ ನಿಷೇಧ

ಕೇಂದ್ರ ಸರ್ಕಾರದ ಎತ್ತಿಹಿಡಿದ ಹೈಕೋರ್ಟ್‌
Last Updated 6 ಫೆಬ್ರುವರಿ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕವೂ ಸೇರಿದಂತೆ ಕರಾವಳಿಯ ಆಳ ಸಮುದ್ರದಲ್ಲಿ ಲೈಟ್‌ ಫಿಶಿಂಗ್‌ (ಬೆಳಕು ಅಳವಡಿಸಿ ಮೀನುಗಾರಿಕೆ) ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮನ್ನಣೆ ನೀಡಿದೆ.

ಈ ಮೊದಲು ಷರತ್ತುಬದ್ಧ ಮೀನುಗಾರಿಕೆಗೆ ಅವಕಾಶ ನೀಡಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ಮಾರ್ಪಾಡು ಮಾಡಿದ್ದು, ಕೇಂದ್ರದ ಆದೇಶ ಪಾಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿದೆ.

ಈ ಸಂಬಂಧ ಉಡುಪಿಯ ಮಲ್ಪೆ ಬಂದರಿನ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ‘ಕೇಂದ್ರ ಸರ್ಕಾರದ ನಿರ್ಧಾರ ಏಕಪಕ್ಷೀಯವಾಗಿದೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ನಿರ್ಧಾರ ಮರು ಪರಿಶೀಲಿಸುವಂತೆ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸಿಲ್ಲ’ ಎಂದು ಆಕ್ಷೇಪಿಸಿದರು.

‘ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಯಾಂತ್ರಿಕೃತ ದೋಣಿ ಖರೀದಿಸಿ ಬೆಳಕು ಬಳಸಿ ಮೀನುಗಾರಿಕೆ ಮಾಡಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ತೊಂದರೆ ಆಗಿದೆ’ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲೆ ಎಂ.ಸಿ.ನಾಗಶ್ರೀ, ‘ಎಲ್‌ಇಡಿ, ಹ್ಯಾಲೋಜನ್ ಬೆಳಕು ಬಳಸಿ ಸಮುದ್ರಾಳದಲ್ಲಿ ಯಾಂತ್ರೀಕೃತ ದೋಣಿ ಮೂಲಕ ಮೀನುಗಾರಿಕೆ ಮಾಡುವುದರಿಂದ ಅಪರೂಪದ ಮೀನಿನ ಸಂತತಿ ಹಾಗೂ ಮೀನು ಮರಿಗಳು ನಾಶವಾಗುತ್ತವೆ. ಇದು ಮೀನು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಕೇಂದ್ರ ಸರ್ಕಾರಈ ನಿರ್ಧಾರ ಕೈಗೊಂಡಿದೆ’ ಎಂದು ಸಮಜಾಯಿಷಿ ನೀಡಿದರು.

ಪಾರಂಪಾರಿಕ ಮೀನುಗಾರರು ಮಧ್ಯಂತರ ಅರ್ಜಿ ಸಲ್ಲಿಸಿ, ಲೈಟ್ ಫಿಶಿಂಗ್ ನಿಷೇಧಿಸುವಂತೆ ಕೋರಿದ್ದರು.

ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಶೇಷ ಆರ್ಥಿಕ ವಲಯದಲ್ಲಿ ಎಲ್‌ಇಡಿ ಬೆಳಕು ಬಳಸಿ ಸಮುದ್ರದ ಆಳದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದು ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಮೀನುಗಾರಿಕೆ ಸಚಿವಾಲಯ 2017ರಲ್ಲಿ ಬೆಳಕು ಮೀನುಗಾರಿಕೆ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT