ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಕೆಆರ್‌ಡಿಬಿಗೆ ಅಧ್ಯಕ್ಷರು ಯಾರು?

ಹೈ.ಕ ಭಾಗದ ನಾಲ್ಕು ಸಚಿವರು; ಯಾವ ಜಿಲ್ಲೆಗೆ ಅವಕಾಶ ಎಂಬುದೇ ಕುತೂಹಲ
Last Updated 9 ಜೂನ್ 2018, 6:29 IST
ಅಕ್ಷರ ಗಾತ್ರ

ಕಲಬುರ್ಗಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿ ಈ ಭಾಗದ ನಾಲ್ವರು ಸ್ಥಾನ ಪಡೆದಿದ್ದು, ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

ಸಚಿವ ಸಂಪುಟದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಕಲಬುರ್ಗಿ ಜಿಲ್ಲೆಯ ಪ್ರಿಯಾಂಕ್‌ ಖರ್ಗೆ, ರಾಯಚೂರು ಜಿಲ್ಲೆಯ ವೆಂಕಟರಾವ್‌ ನಾಡಗೌಡ, ಬೀದರ್‌ ಜಿಲ್ಲೆಯ ಬಂಡೆಪ್ಪ ಕಾಶೆಂಪುರ, ರಾಜಶೇಖರ ಪಾಟೀಲ (ಹುಮನಾಬಾದ್‌) ಸಚಿವರಾಗಿದ್ದಾರೆ. ಅವರಲ್ಲಿ ಯಾರಿಗೆ ಈ ಸ್ಥಾನ ಒಲಿಯಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಸಂವಿಧಾನದ ಕಲಂ 371 (ಜೆ) ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರ 2013ರಲ್ಲಿ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ’ಯು 2013ರ ನವೆಂಬರ್‌ 6ರಂದು ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಪುನರ್‌ರಚನೆಯಾಗಿದೆ. ಈ ಮಂಡಳಿಯಲ್ಲಿ ಈ ಭಾಗದ ಆರು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳು ಇದ್ದವು.

ಕೆಲ ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿದೆ. ಹೀಗಾಗಿ ಈಗ ಮಂಡಳಿಯ ವ್ಯಾಪ್ತಿಯಲ್ಲಿ 41 ವಿಧಾನಸಭಾ ಕ್ಷೇತ್ರಗಳು ಇವೆ.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ಮಂಡಳಿಯ ಸದಸ್ಯರಾಗಿರುತ್ತಾರೆ. ಇವರಲ್ಲಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ ಒಬ್ಬ ಸಚಿವರು ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

2013ರಲ್ಲಿ ಅಂದಿನ ಸಚಿವ ಖಮರುಲ್‌ ಇಸ್ಲಾಂ ಅವರು ಮಂಡಳಿಯ ಮೊದಲ ಮತ್ತು ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದರು. ಆ ನಂತರ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷರಾಗಿದ್ದರು. ಸರ್ಕಾರದ ಅವಧಿ ಕೊನೆಗೊಳ್ಳಲು ಕೆಲವೇ ತಿಂಗಳು ಇರುವಾಗ ಕೊಪ್ಪಳ ಜಿಲ್ಲೆಯ ಬಸವರಾಜ ರಾಯರಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಅಧ್ಯಕ್ಷರ ನೇಮಕವನ್ನು ಆರಂಭದಲ್ಲಿ ಹಿರಿತನದ ಆಧಾರದ ಮೇಲೆ ಮಾಡಲಾಗಿತ್ತು. ಮೂರು ಅವಧಿಗೆ ಕಲಬುರ್ಗಿ ಜಿಲ್ಲೆಯವರೇ ಅಧ್ಯಕ್ಷರಾಗಿದ್ದರು.

ಈಗಿನ ಸಚಿವರ ಹಿರಿತನ ನೋಡುವುದಾದರೆ ಪ್ರಿಯಾಂಕ್‌ ಖರ್ಗೆ ಹಾಗೂ ಬಂಡೆಪ್ಪ ಕಾಶೆಂಪುರ ಇಬ್ಬರೂ ಎರಡನೇ ಬಾರಿಗೆ ಸಚಿವರಾಗಿದ್ದಾರೆ. ವಿಧಾನಸಭೆಗೆ ಪ್ರಿಯಾಂಕ್‌ ಎರಡು ಬಾರಿ ಆಯ್ಕೆಯಾಗಿದ್ದರೆ, ಬಂಡೆಪ್ಪ ಮೂರು ಬಾರಿ ಆಯ್ಕೆಯಾಗಿದ್ದಾರೆ. ರಾಜಶೇಖರ ಪಾಟೀಲ ಮತ್ತು ವೆಂಕಟರಾವ್‌ ನಾಡಗೌಡ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

‘ಸಚಿವ ಸಂಪುಟ ರಚನೆಯಾಗಿದ್ದರೂ, ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆಯಾಗಿಲ್ಲ. ಹಿರಿತನದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆಯೋ ಅಥವಾ ಹಿಂದಿನ ಅವಧಿಯಲ್ಲಿ ಅವಕಾಶ ಸಿಗದ ಜಿಲ್ಲೆಯವರಿಗೆ ಅವಕಾಶ ನೀಡಲಾಗುತ್ತದೆಯೊ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಶಾಸಕರೊಬ್ಬರು ಹೇಳಿದರು.

ಶಾಸಕರಿಗೂ ಅವಕಾಶ: ರಾಜ್ಯ ಸರ್ಕಾರ ಸರದಿಯಂತೆ ಒಂದು ವರ್ಷದ ಅವಧಿಗೆ ವಿಧಾನಸಭೆಯ ಎಂಟು ಸದಸ್ಯರು, ವಿಧಾನ ಪರಿಷತ್‌ನ ಇಬ್ಬರು ಸದಸ್ಯರು, ಈ ಭಾಗದ ಒಬ್ಬ ಲೋಕಸಭಾ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಲ್ಲಿ ಒಬ್ಬರನ್ನು, ನಗರ ಸ್ಥಳೀಯ ಸಂಸ್ಥೆಗಳಿಂದ ಒಬ್ಬರು ಅಧ್ಯಕ್ಷ/ಮೇಯರ್‌ ಅವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸುತ್ತದೆ.

ವಿವಿಧ ಕ್ಷೇತ್ರಗಳ ಪರಿಣತಿ ಸಾಧಿಸಿರುವ 11 ಜನ ತಜ್ಞರನ್ನು ಎರಡು ವರ್ಷಗಳ ಅವಧಿಗೆ ಸದಸ್ಯರನ್ನಾಗಿ ನೇಮಿಸಲಾಗುತ್ತದೆ.

₹1,500 ಕೋಟಿ ಅನುದಾನ

ರಾಜ್ಯ ಸರ್ಕಾರ ಈ ಮಂಡಳಿಗೆ ವರ್ಷಕ್ಕೆ ₹1,500 ಕೋಟಿ ಅನುದಾನ ನೀಡುತ್ತಿದೆ. ಹಿಂದಿನ ವರ್ಷಗಳಲ್ಲಿ ನೀಡಿದ ಅನುದಾನದಲ್ಲಿಯ ಕಾಮಗಾರಿಗಳೂ ಇನ್ನೂ ನಡೆಯುತ್ತಿವೆ. ಮಂಡಳಿಯ ಅಧ್ಯಕ್ಷರಾದರೆ ಆರೂ ಜಿಲ್ಲೆಗಳ ಮೇಲೆ ಹಿಡಿತ ಸಾಧಿಸುವ ಅವಕಾಶವೂ ಇದೆ. ಹೀಗಾಗಿ ಇದರ ಚುಕ್ಕಾಣಿ ಹಿಡಿಯುವುದು ಸಚಿವರಿಗೆ ಪ್ರತಿಷ್ಠೆಯ ವಿಷಯ.

ರಾಜ್ಯದಲ್ಲಿ ಈಗ ಸಮ್ಮಿಶ್ರ ಸರ್ಕಾರ ಇದೆ. ಸಚಿವ ಸ್ಥಾನ ತಪ್ಪಿದವರಿಗೆ ನಿಗಮ ಇಲ್ಲವೆ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲು ಎರಡೂ ಪಕ್ಷಗಳು ಯತ್ನಿಸುತ್ತಿವೆ. ಆದರೆ, ಈ ಭಾಗದ ಸಚಿವರೊಬ್ಬರಿಗೆ ಎಚ್‌ಕೆಆರ್‌ಡಿಬಿ ಅಧ್ಯಕ್ಷ ಹುದ್ದೆ ಅಲಂಕರಿಸುವ ಭಾಗ್ಯವೂ ಇದೆ. ಹೀಗಾಗಿ ಅಂಥವರ ಪಾಲಿಗೆ ಇದು ಡಬಲ್‌ ಧಮಾಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT