ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ನೇ ಬಾರಿ ಲಿಂಗನಮಕ್ಕಿ ಜಲಾಶಯ ಭರ್ತಿ

45 ಸಾವಿರ ಕ್ಯುಸೆಕ್‌ ನೀರು ಶರಾವತಿ ನದಿಗೆ: ಮೈದುಂಬಿಕೊಂಡ ಜೋಗ ಜಲಪಾತ
Last Updated 4 ಸೆಪ್ಟೆಂಬರ್ 2019, 5:02 IST
ಅಕ್ಷರ ಗಾತ್ರ

ಕಾರ್ಗಲ್: ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶರಾವತಿ ಜಲ ವಿದ್ಯುತ್ ಯೋಜನಾ ಪ್ರದೇಶದ ಜೀವನಾಡಿ ಲಿಂಗನಮಕ್ಕಿ ಜಲಾಶಯವು ಕಳೆದ 55 ವರ್ಷಗಳಲ್ಲಿ 21ನೇ ಬಾರಿಗೆ ಭರ್ತಿಯಾಗಿದೆ. ಮಂಗಳವಾರ 11 ರೇಡಿಯಲ್‌ ಗೇಟ್‌ಗಳನ್ನು ತೆರೆದು 45 ಸಾವಿರ ಕ್ಯುಸೆಕ್‌ ನೀರನ್ನು ಶರಾವತಿ ನದಿಗೆ ಹರಿಸಲಾಯಿತು.

ಜಲಾಶಯದಿಂದ ನೀರು ಹೊರಗೆ ಬಿಡುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ‘ರಾಜಾ’, ‘ರೋರರ್‌’, ‘ರಾಕೆಟ್‌’, ‘ರಾಣಿ’ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜಲಾಶಯದಿಂದ ನೀರನ್ನು ಮಂಗಳವಾರ ಹೊರಗೆ ಹರಿಸಿದ ಸಂದರ್ಭದಲ್ಲಿ ಮಾಹಿತಿ ನೀಡಿದ ಪ್ರಭಾರ ಮುಖ್ಯ ಎಂಜಿನಿಯರ್ ಜಿ.ಸಿ. ಮಹೇಂದ್ರ, ‘ದುರ್ಬಲ ಮುಂಗಾರಿನಿಂದಾಗಿ ಜಲ ವಿದ್ಯುತ್ ಯೋಜನಾ ಪ್ರದೇಶದಲ್ಲಿ ಆರಂಭದಲ್ಲಿ ನೀರಿನ ಒಳ ಹರಿವು ಕಡಿಮೆಯಿತ್ತು. ಆದರೆ, ದಿಢೀರನೆ ಸುರಿದ ಆಶ್ಲೇಷ ಮಳೆಯಿಂದಾಗಿ ಆಶ್ಚರ್ಯಕರ ರೀತಿಯಲ್ಲಿ ಜಲಾಶಯದಲ್ಲಿ ನೀರು ಗರಿಷ್ಠ ಮಟ್ಟದ ಸಮೀಪ ತಲುಪಿತ್ತು. ಈಚೆಗೆ ಶರಾವತಿ ಜಲಾನಯನದಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಳ ಹರಿವು ಹೆಚ್ಚಾಗಿ 1818.9 ಅಡಿಗೆ (ಗರಿಷ್ಠ ಮಟ್ಟ: ಸಮುದ್ರ ಮಟ್ಟದಿಂದ 1819 ಅಡಿ) ನೀರು ತಲುಪಿದೆ. 39 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ನದಿಪಾತ್ರದ ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ದಿಢೀರನೆ ನೀರನ್ನು ಹೊರಕ್ಕೆ ಹಾಯಿಸದೇ ಹಂತ ಹಂತವಾಗಿ ಹರಿಸಲಾಗುವುದು’ ತಿಳಿಸಿದರು.

ಪ್ರಭಾರ ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್, ಗೇಟ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಸುದೀಪ್ ರೈ, ಸಹಾಯಕ ಎಂಜಿನಿಯರ್‌ಗಳಾದ ಇ. ರಾಜು, ಜಗದೀಶ್ ನೀರು ಹೊರಹಾಯಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕರಾವಳಿಯಲ್ಲಿ ಇಂದು ಹೆಚ್ಚು ಮಳೆ ಸಾಧ್ಯತೆ (ಬೆಂಗಳೂರು ವರದಿ): ‘ರಾಜ್ಯದ ಕರಾವಳಿ ಭಾಗದಲ್ಲಿ ಸೆಪ್ಟೆಂಬರ್‌ 4ರಂದು ಹೆಚ್ಚು ಮಳೆಯಾಗಲಿದೆ. 5ರಿಂದ 8ರವರೆಗೆ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಬಳಿಕ ಈ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿ, ಪಶ್ಚಿಮಘಟ್ಟ ಹಾಗೂ ಉತ್ತರ ಒಳನಾಡಿನ ಕಲಬುರ್ಗಿ, ಬೀದರ್, ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಂಗಳವಾರ ಹೆಚ್ಚು ಮಳೆಯಾಗಿದೆ. ಹೀಗಾಗಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿತ್ತು. ನಾಳೆಯಿಂದ ರಾಜ್ಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ’ ಎಂದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT