ವೀರಶೈವ, ಲಿಂಗಾಯತರನ್ನು ಒಗ್ಗೂಡಿಸಿದ ಮಠ

7
ಧರ್ಮ ಒಡೆಯಲು ಮುಂದಾದವರ ಕಥೆ ಏನಾಗಿದೆ ಗೊತ್ತಾ?: ಶಾಮನೂರು

ವೀರಶೈವ, ಲಿಂಗಾಯತರನ್ನು ಒಗ್ಗೂಡಿಸಿದ ಮಠ

Published:
Updated:

ಮೈಸೂರು: ವಿಧಾನಸಭಾ ಚುನಾವಣೆಗೂ ಮುನ್ನ ವೀರಶೈವ, ಲಿಂಗಾಯತ ಎಂದು ಕಿತ್ತಾಡಿದ್ದ ಮುಖಂಡರು ಸುತ್ತೂರು ಮಠದ ವೇದಿಕೆಯಲ್ಲಿ ‘ನಾವೆಲ್ಲಾ ಒಂದೇ’ ಎಂಬ ಒಗ್ಗಟ್ಟು ಪ್ರದರ್ಶಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ಅದಕ್ಕೆ ಸಾಕ್ಷಿಯಾದರು.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಗೆದ್ದಿರುವ ವೀರಶೈವ–ಲಿಂಗಾಯತ ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

‘ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ. ಎರಡೂ ಒಂದೇ‌’ ಎಂಬ ಕೂಗು ವೇದಿಕೆಯಲ್ಲಿ ಪ್ರತಿಧ್ವನಿಸಿತು. ವಿಭಜನೆಗೆ ಮುಂದಾದವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ನಾನು ವೀರಶೈವನೋ ಲಿಂಗಾಯತನೋ ಗೊತ್ತಿಲ್ಲ. ಆದರೂ ಮಹಾಸಭಾ ಅಧ್ಯಕ್ಷನಾದೆ. ವೀರಶೈವ ಸಮಾಜವನ್ನು ಒಡೆಯಲು ಹೋದವರ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ಈಗ ಗೊತ್ತಿದೆ’ ಎಂದರು.

ದೇಶ ವಿಭಜನೆಗೆ ಕಾರಣವಾಗಿದ್ದ ಮೊಹಮ್ಮದ್‌ ಅಲಿ ಜಿನ್ನಾರಂತೆ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು ಧರ್ಮ ವಿಭಜನೆಗೆ ಮುಂದಾಗಿದ್ದರು ಎಂದು ಟೀಕಿಸಿದರು.

‘ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೊ ಹಾಕಲು ಸೂಚಿಸಿದರೆಂದು ಸಿದ್ದರಾಮಯ್ಯ ಅವರನ್ನು ಕರೆದು ಸನ್ಮಾನ ಮಾಡಿದೆ. ಆ ಬಳಿಕವೇ ಭಾರತ–ಪಾಕಿಸ್ತಾನದಂತೆ ಸಮಾಜದ ವಿಭಜನೆ ಶುರುವಾಯಿತು. ಚುನಾವಣೆ ವೇಳೆ ಅತಿರೇಕ ತಲುಪಿ ಈಗ ತಣ್ಣಗಾಗಿದೆ’ ಎಂದು ವ್ಯಂಗ್ಯವಾಗಿ ಹೇಳಿದರು.

ಬಿ.ಎಸ್‌.ಯಡಿಯೂರಪ್ಪ, ‘ಕೆಲವರು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದರು. ಆ ಸಂದರ್ಭದಲ್ಲಿ ಕೆಲ ಸ್ವಾಮೀಜಿಗಳು ದಿಟ್ಟ ನಿಲುವು ತೆಗೆದುಕೊಂಡರು’ ಎಂದರು.

* ಧರ್ಮ ಮತ್ತು ದಾರ್ಶನಿಕರನ್ನು ಜಾತಿಯ ಮಟ್ಟಕ್ಕೆ ಇಳಿಸುವ ಕೆಲಸ ನಡೆಯುತ್ತಿದೆ. ಯಾರದ್ದೋ ರಾಜಕೀಯ ದಾಳಕ್ಕೆ ಸಮಾಜ ವಿಭಜಿಸುವ ಪ್ರಯತ್ನ ನಡೆಯಿತು

– ಬಿ.ಎಸ್‌.ಯಡಿಯೂರಪ್ಪ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

*ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಆಗಬಹುದಾದ ಲಿಂಗಾಯತ ಸಮುದಾಯದ ಸಮರ್ಥ ನಾಯಕ ಯಾವುದೇ ಪಕ್ಷದಲ್ಲಿ ಕಾಣುತ್ತಿಲ್ಲ

–ಆಯನೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ

* ಲಿಂಗಾಯತ, ವೀರಶೈವ ಎಂಬುದು ಒಂದೇ. ಆದರೆ, ಅಲ್ಪಸಂಖ್ಯಾತ ಧರ್ಮವಾದರೆ ಕೆಲ ಸೌಲಭ್ಯ ಸಿಗಬಹುದೆಂದು ಸಿದ್ದರಾಮಯ್ಯ ಕಾಳಜಿ ತೋರಿದರು

–ಅಶೋಕ್‌ ಖೇಣಿ‌, ಕಾಂಗ್ರೆಸ್‌ ಮುಖಂಡ

* ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಚರ್ಚೆಯೇ ಅನವಶ್ಯಕ. ವಿಭಜನೆ ಮಾಡಿ ಬೇಳೆ ಬೇಯಿಸಿಕೊಳ್ಳಲು ಕೆಲವರು ಪ್ರಯತ್ನಿಸಿದ್ದಾರೆ

–ಬಿ.ಸಿ.ಪಾಟೀಲ, ಶಾಸಕ

* ವೀರಶೈವ, ಲಿಂಗಾಯತ ಎಂದು ಜಗಳವಾಡಿದರೆ ಸಮಾಜದಲ್ಲಿನ ನಿಜವಾದ ಸಮಸ್ಯೆ ಬಗೆಹರಿಯಲ್ಲ. ಬಡವರ ಏಳೆಗೆ ಸಾಧ್ಯವಾಗುವುದಿಲ್ಲ

–ಅಲ್ಲಂ ವೀರಭದ್ರಪ್ಪ‌, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !