ಲಿಂಗಾಯತ: ಕಾಂಗ್ರೆಸ್‌ಗೆ ಸುಡುಕೆಂಡ

7
ಸಂಪುಟ ಸಭೆಯಲ್ಲಿ ಪ್ರಸ್ತಾಪಿಸದೇ ಇರಲು ತೀರ್ಮಾನ

ಲಿಂಗಾಯತ: ಕಾಂಗ್ರೆಸ್‌ಗೆ ಸುಡುಕೆಂಡ

Published:
Updated:

ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮ ಕಾಂಗ್ರೆಸ್‌ ಪಾಲಿಗೆ ಸುಡುಕೆಂಡದಂತಾಗಿದ್ದು, ಅದನ್ನು ಮತ್ತೆ ಮುಟ್ಟದಿರಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ.

ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವ ಬೆನ್ನಲ್ಲೇ, ಈ ನಿರ್ಣಯಕ್ಕೆ ಪಕ್ಷ ಬಂದಿದೆ. ಕೇಂದ್ರ ತಿರಸ್ಕಾರ ಕುರಿತು ಸಂಪುಟ ಸಭೆಯಲ್ಲಾಗಲಿ, ಪಕ್ಷದ ವೇದಿಕೆಯಲ್ಲಾಗಲಿ ಚರ್ಚಿಸುವುದು ಬೇಡ ಎಂಬುದು ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿರುವ ಕಾಂಗ್ರೆಸ್‌ ಸಚಿವರ ಅಭಿಮತ.

‘ಧರ್ಮದ ವಿಷಯದಲ್ಲಿ ಅನಗತ್ಯವಾಗಿ ಕೈ ಹಾಕಿದ್ದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಕೇಂದ್ರದ ಶಿಫಾರಸಿನ ಕುರಿತು ಮತ್ತೆ ಚರ್ಚೆಗೆ ಮುಂದಾದರೆ ಲೋಕಸಭೆ ಚುನಾವಣೆಯಲ್ಲಿ ಏಟು ಬೀಳುವುದು ಖಚಿತ ಎಂಬುದು ಸದ್ಯಕ್ಕೆ ನಡೆದಿರುವ ಚರ್ಚೆ. ಈ ಕುರಿತು ನಮ್ಮ ಗುಂಪು ಸಮಾಲೋಚನೆ ವೇಳೆ ಅನೌಪಚಾರಿಕವಾಗಿ ಚರ್ಚಿಸಿದ್ದೇವೆ. ಅದಿನ್ನು ಪಕ್ಷದ ಪಾಲಿಗೆ ಮುಗಿದ ಅಧ್ಯಾಯ’ ಎಂದು ಹಿಂದಿನ ಸರ್ಕಾರದಲ್ಲೂ ಸಚಿವರಾಗಿದ್ದ ಈಗಲೂ ಸಚಿವರಾಗಿರುವ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವೀರಶೈವ–ಲಿಂಗಾಯತ ಎರಡೂ ಒಂದೇ ಧರ್ಮವೋ ಅಥವಾ ಪ್ರತ್ಯೇಕವಾಗಬೇಕೋ ಎಂಬುದು ಧಾರ್ಮಿಕ ಮುಖಂಡರಿಗೆ, ಆ ಸಮುದಾಯದ ಜನರಿಗೆ ಸಂಬಂಧಿಸಿದ ಸಂಗತಿ. ಆ ವಿಷಯದಲ್ಲಿ ಸರ್ಕಾರ ಅಥವಾ ಪಕ್ಷ ಕೈ ಹಾಕಲೇಬಾರದಿತ್ತು. ಆಗಿನ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದವರು ಸುಖಾಸುಮ್ಮನೇ ಮೂಗು ತೂರಿಸಿದರು. ಅದರಿಂದ ಪಕ್ಷಕ್ಕೆ ಎಷ್ಟರಮಟ್ಟಿಗೆ ಏಟು ಬಿದ್ದಿದೆ ಎಂಬುದು ಈಗ ಅರಿವಾಗಿದೆ’ ಎಂದೂ ಅವರು ಹೇಳಿದರು.

‘ಕೇಂದ್ರದ ನಿರ್ಧಾರವನ್ನು ಸಚಿವ ಸಂಪುಟದ ಮುಂದೆ ಇಟ್ಟು ಚರ್ಚಿಸುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ, ‘ಈಗ ಚರ್ಚೆ ಮಾಡಿ ಬಗೆಹರಿಸಬೇಕಾದ ನೂರಾರು ಸಂಗತಿಗಳಿವೆ. ಅದಕ್ಕಿಂತ ಪ್ರಮುಖ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿವೆ. ಸರ್ಕಾರ ಮಾಡಬೇಕಾದ ಅನೇಕ ಮಹತ್ವದ ಕೆಲಸಗಳಿವೆ. ಧರ್ಮ ವಿಭಜನೆಯಂತಹ ಕೆಲಸಗಳನ್ನು ಸರ್ಕಾರ ಮಾಡಬಾರದು ಎಂದು ಸಚಿವರು ಸೇರಿದ್ದ ಅನೌಪಚಾರಿಕ ಸಭೆಗಳಲ್ಲಿ ಪ್ರಾಸಂಗಿಕವಾಗಿ ಚರ್ಚಿಸಿದ್ದೇವೆ. ಹೀಗಾಗಿ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸುವುದಿಲ್ಲ’ ಎಂದೂ ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !