ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಮರ ಧರ್ಮಾಭಿಮಾನ ಲಿಂಗಾಯತರಲ್ಲೂ ಬೇಕು’: ಅರವಿಂದ ಜತ್ತಿ

Last Updated 28 ಅಕ್ಟೋಬರ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಸ್ಲಿಮರು ಹೇಗೆ ತಮ್ಮ ಧರ್ಮದ ಕುರುಹುಗಳನ್ನು ಅಭಿಮಾನ ಮತ್ತು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೊ ಅಂತಹುದೇ ಧರ್ಮಾಭಿಮಾನ ಲಿಂಗಾಯತರಲ್ಲೂ ಜಾಗೃತವಾಗಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ಮಹಾಸಭಾದ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಬಿ.ಡಿ.ಜತ್ತಿಯವರು ರಾಷ್ಟ್ರಪತಿಯಾಗಿದ್ದಾಗಲೂ ತಮ್ಮ ಹಣೆಗೆ ವಿಭೂತಿ ಧರಿಸುತ್ತಿದ್ದರು. ಇದು ಬಸವ ಧರ್ಮದ ಕಟಿಬದ್ಧತೆಗೆ ಅವರಿಗಿದ್ದ ಒಂದು ಸ್ಪಷ್ಟ ಉದಾಹರಣೆ. ಅವರಂತೆಯೇ ಎಲ್ಲ ಬಸವಾಭಿಮಾನಿಗಳೂ ಇಂದು ಲಿಂಗಾಯತ ಧರ್ಮದ ಆಚಾರ-ವಿಚಾರಗಳನ್ನು ತಪ್ಪದೇ ಪಾಲನೆ ಮಾಡಬೇಕು’ ಎಂದು ಅವರು ಹೇಳಿದರು.

‘ಬಸವಣ್ಣನ ಮಾನವ ತತ್ವಗಳು ವಿಶ್ವ ಸಂಸ್ಥೆಯಲ್ಲಿ ಮಾನ್ಯತೆ ಪಡೆಯುವ ದಿನಗಳು ದೂರವಿಲ್ಲ. ಈ ದಿಸೆಯಲ್ಲಿ ಇಂಬು ನೀಡುವ ಕೆಲಸಕ್ಕೆ ಪ್ರತಿಯೊಬ್ಬರೂ ಸಿದ್ಧರಾಗಬೇಕು’ ಎಂದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಧರ್ಮಕ್ಕೆ ಯಾರೂ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕಾಗಿಲ್ಲ. ಅದು ಯಾವತ್ತೊ ಸ್ವತ್ರಂತ್ರ ಧರ್ಮ ಆಗಿದೆ. ವಾಸ್ತವದಲ್ಲಿ ಅದರ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ ಅಗಬೇಕು. ಅಲ್ಲದೆ, ವಚನಗಳಲ್ಲಿ ಕಲಬೆರಕೆ ಆಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ’ ಎಂದು ಹೇಳಿದರು.

‘ವಚನ ಪ್ರಜ್ಞೆ ಜಾಗೃತಗೊಳಿಸಲು ಯುವ ಜನತೆ ಮುಂದಾಗಬೇಕು. ಇವತ್ತು 15 ಸಾವಿರದಷ್ಟು ವಚನಗಳು ಆ್ಯಪ್‌ನಲ್ಲಿ ಅಡಕವಾಗಿವೆ. ಇವುಗಳನ್ನು ಜತನವಾಗಿ ಕಾಪಾಡಿಕೊಂಡು ಅವು ನಮ್ಮೆಲ್ಲರ ಅಕ್ಷರ, ತಾಯಿ ಆಗುವಂತೆ ನೋಡಿ ಕೊಳ್ಳಬೇಕು’ ಎಂದರು.

ಸ್ಪ್ಯಾನಿಷ್, ಫ್ರೆಂಚ್ ಭಾಷೆಗೆ ವಚನಗಳ ತರ್ಜುಮೆ: ಜಾಮದಾರ

‘ಬಸವಣ್ಣನ ವಚನಗಳನ್ನು ಸ್ಪ್ಯಾನಿಷ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಕೆಲಸ ಭರದಿಂದ ನಡೆಯತ್ತಿದೆ. ಮುಂದಿನ ಒಂದೂವರೆ ವರ್ಷದ ಒಳಗೆ ಈ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ‌. ಜಾಮದಾರ ತಿಳಿಸಿದರು.

‘448 ವಚನಗಳಲ್ಲಿ ಶ್ಲೋಕಗಳನ್ನು ಸೇರಿಸಲಾಗಿದೆ. ಇವುಗಳ ಶುದ್ಧೀಕರಣ ನಡೆಯುತ್ತಿದೆ. ಲಿಂಗಾಯತರಲ್ಲಿ ಧಾರ್ಮಿಕ ಮೂಲತತ್ವಗಳ ಆಚರಣೆಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಂಗಳೂರಿನಲ್ಲಿ ಚರ್ಚೆ ನಡೆಸಲಾಗುತ್ತಿದೆ‌. ಇದು ರಾಜ್ಯದ ಎಲ್ಲೆಡೆ ಆರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT