ಡಿ.10ರಿಂದ ಲಿಂಗಾಯತ ಸಮಾವೇಶ

7
ಪ್ರತ್ಯೇಕ ಧರ್ಮ ಸ್ಥಾನಮಾನ; ಕೇಂದ್ರಕ್ಕೆ ಮನವಿ

ಡಿ.10ರಿಂದ ಲಿಂಗಾಯತ ಸಮಾವೇಶ

Published:
Updated:

ನವದೆಹಲಿ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು ಮಾನ್ಯ ಮಾಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ಥಳೀಯ ಬಸವಧರ್ಮ ಪೀಠದ ವತಿಯಿಂದ ಡಿಸೆಂಬರ್‌ 10ರಿಂದ ಮೂರು ದಿನಗಳ ಕಾಲ ಬೃಹತ್‌ ಲಿಂಗಾಯತ ಸಮಾವೇಶ ಏರ್ಪಡಿಸಲು ನಿರ್ಧರಿಸಲಾಗಿದೆ.

ಇಲ್ಲಿನ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್‌ 10ರಂದು ಆರಂಭವಾಗಲಿರುವ ಸಮಾವೇಶ ಉದ್ಘಾಟನೆಗೆ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಪೀಠದ ಚನ್ನ ಬಸವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದ ಅಂಗವಾಗಿ ಧರ್ಮ ಚಿಂತನ ಗೋಷ್ಠಿ, ಸರ್ವಧರ್ಮ ಸಮನ್ವಯ ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ಡಿ.12ರಂದು 15,000ಕ್ಕೂ ಅಧಿಕ ಲಿಂಗಾಯತರು ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದು ಅವರು ಹೇಳಿದರು.

‘ಅಷ್ಟರೊಳಗೆ ಕೇಂದ್ರವು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಿದಲ್ಲಿ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿನಂದನಾ ಸಮಾರಂಭವನ್ನಾಗಿ ಬದಲಿಸಲಾಗುವುದು’ ಎಂದು ಅವರು ಹೇಳಿದರು.

ಪ್ರತ್ಯೇಕ ಧರ್ಮದ ಸ್ಥಾನಮಾನದ ಬೇಡಿಕೆ ಅನೇಕ ವರ್ಷಗಳಿಂದ ಇದ್ದು, ಧರ್ಮದ ವಿಷಯದಲ್ಲಿ ರಾಜಕಾರಣ ಬೆರೆಸುವುದು ಪೀಠದ ಉದ್ದೇಶವಲ್ಲ. ಆದರೆ, ಸಮುದಾಯದ ಕೆಲವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುವುದರಿಂದ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಅವರು ಹೇಳಿದರು.

ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಕಾಂಗ್ರೆಸ್‌ ಪಕ್ಷ ಕೇಂದ್ರಕ್ಕೆ ಶಿಫಾರಸು ಮಾಡಿದ್ದರಿಂದ ಅಧಿಕಾರ ಕಳೆದುಕೊಂಡಿತು ಎಂಬ ಆರೋಪದಲ್ಲಿ ಹುರುಳಿಲ್ಲ. ಕರ್ನಾಟಕ ವಿಧಾನಸಭೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಚುನಾವಣೆಗಿಂತ 2018ರ ಚುನಾವಣೆಯ ಮತಗಳಿಕೆ ಪ್ರಮಾಣವನ್ನು ಕಾಂಗ್ರೆಸ್‌ ಹೆಚ್ಚಿಸಿಕೊಂಡಿದೆ ಎಂದ ಅವರು, ಈ ಆರೋಪದಲ್ಲಿ ಸತ್ಯಾಂಶ ಅಗಿದ್ದಲ್ಲಿ,  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು ಎಂದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಯಾವುದೇ ನಿಲುವು ತಾಳದೇ ತಟಸ್ಥವಾಗಿ ಉಳಿಯಿತು. ಈಗಲಾದರೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಮುಂದಾದರೆ ಬಿಜೆಪಿಯು ಸಮುದಾಯದ ಮತಗಳನ್ನು ಪಡೆಯಲಿದೆ ಎಂದು ಅವರು ತಿಳಿಸಿದರು. ಪೀಠದ ಸರ್ವಮಂಗಳಾ ಮಾತಾಜಿ, ವಿ.ವಿ. ಬಿರಾದಾರ, ಸೊಲ್ಲಾಪುರದ ವಿಜಯಕುಮಾರ್‌ ಹತ್ತೂರೆ ಈ ಸಂದರ್ಭ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !