ಶನಿವಾರ, ಏಪ್ರಿಲ್ 1, 2023
25 °C

ಪೊಲೀಸರ ಲಂಚಕ್ಕಾಗಿ ಒಡವೆ ಅಡವಿಟ್ಟ ತಾಯಿ!

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಜೀಪಿನಲ್ಲಿ ಅಕ್ರಮ ಮದ್ಯ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯನ್ನು  ಬಿಡಿಸಲು‌ ಕೊಡಬೇಕಾಗಿ ಬಂದ ಲಂಚದ ಹಣಕ್ಕೆ, ಅವರ ತಾಯಿ ತಮ್ಮ ಒಡವೆಗಳನ್ನು ₹ 5 ಲಕ್ಷಕ್ಕೆ ಅಡವಿಟ್ಟ ಸಂಗತಿ ಹಿರಿಯ ಅಧಿಕಾರಿಗಳ ವಿಚಾರಣೆಯಿಂದ ಬಹಿರಂಗವಾಗಿದೆ.

‘ವಾಣಿಜ್ಯ ಇಲಾಖೆಗೆ ಸೇರಿದ ಜೀಪಿನಲ್ಲಿ ಎಂಟು ಕಾರ್ಟನ್‌ ಬಾಕ್ಸ್‌ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಬಿಟಿಎಂ ಬಡಾವಣೆ ವಿಶೇಶ್‌ ಗುಪ್ತಾ ಮತ್ತು ಅವರ ಸ್ನೇಹಿತ ಗೋಪಿಎಂಬುವರನ್ನು ಎಲೆಕ್ಟ್ರಾನಿಕ್ ಸಿಟಿ ಎಸಿಪಿ ವಾಸು  ಮತ್ತು ಸಿಬ್ಬಂದಿ ಬಂಧಿಸಿ, ₹ 2.5 ಲಕ್ಷ ಲಂಚ ಪಡೆದು ಬಿಡುಗಡೆ ಮಾಡಿದ್ದು, ಮೇಲ್ನೋಟಕ್ಕೆ ಕಾಣುತ್ತಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮತ್ತು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಜೋಷಿ ಪ್ರತ್ಯೇಕವಾಗಿ ಸಲ್ಲಿಸಿರುವ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ತಿಳಿಸಿದ್ದಾರೆ.

ಪ್ರಕರಣ ಕುರಿತು ಶ್ರೀಪಾದ್‌ ಜೋಷಿ ಇದೇ‌ 14ರಂದು ವರದಿ ಸಲ್ಲಿಸಿದ್ದಾರೆ. ನಾಲ್ಕು ದಿನಗಳ ತರುವಾಯ ಶರಣಪ್ಪ ವರದಿ ಕೊಟ್ಟಿದ್ದಾರೆ. ಎರಡೂ ವರದಿಗಳು ಹೆಚ್ಚುಕಡಿಮೆ ಒಂದೇ ರೀತಿಯಲ್ಲಿದ್ದು, ಅಕ್ರಮ ಮದ್ಯ ಯಾರಿಗೆ ಸೇರಿದ್ದು,ಸರ್ಕಾರದ ಜೀಪನ್ನು ಹೇಗೆ ದುರ್ಬಳಕೆ
ಮಾಡಲಾಯಿತು ಎಂಬ ಪ್ರಶ್ನೆಗಳುನಿಗೂಢವಾಗಿಯೇ ಉಳಿದಿವೆ. 11ರಂದು ಬೆಟ್ಟದಾಸನಪುರ ಬಳಿ ಜೀಪ್‌ ಹಿಡಿಯಲಾಗಿತ್ತು.

‘ಸ್ಥಳದಲ್ಲೇ  ನಿಮ್ಮನ್ನು ಬಿಟ್ಟು ಕಳುಹಿಸಲು ಎಷ್ಟು ಹಣ ಕೊಡುತ್ತೀರಿ ಎಂದು ಎಸಿಪಿ ಕೇಳಿದ್ದರು. ₹ 5 ಲಕ್ಷ ಕೊಡುವುದಾಗಿ  ಗುಪ್ತಾ ಹೇಳಿದರೂ ಠಾಣೆಗೆ ಕರೆತರಲಾಗಿತ್ತು. ಠಾಣೆ ಹಿಂದಿನ ಖಾಲಿ ಜಾಗಕ್ಕೆ  ಅವರನ್ನು ಎಸಿಪಿ ಕರೆದೊಯ್ದು ಚರ್ಚಿಸಿದ್ದರು. ಆನಂತರ ಚೇಂಬರ್‌ಗೂ ಕರೆಸಿ,  ನಿಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಜೈಲಿಗೆ ಕಳುಹಿಸುತ್ತೇನೆ’ ಎಂಬುದಾಗಿ ಬೆದರಿಸಿದ್ದರು ಎಂದು ವರದಿಗಳಲ್ಲಿ ಪ್ರಸ್ತಾಪಿಸಲಾಗಿದೆ.

ಆನಂತರ, ಒಂದು ದಿನ ವಿಶೇಶ್‌ ಮತ್ತು ಗೋಪಿ ಅವರನ್ನು ಲಾಕಪ್‌ನಲ್ಲಿ ಇಡಲಾಗಿತ್ತು. ಮರುದಿನ ಕಾನ್‌ಸ್ಟೇಬಲ್‌ ಜನಾರ್ದನ್,‌ ಲಾಕಪ್‌ನಿಂದ ವಿಶೇಶ್‌ ಅವರನ್ನು ಹೊರಗಡೆ ಕರೆದೊಯ್ದು ₹50ಲಕ್ಷಕ್ಕೆ ಬೇಡಿಕೆ ಇಟ್ಟರು. ಇನ್‌ಸ್ಪೆಕ್ಟರ್‌, ಎಸಿಪಿ, ಡಿಸಿಪಿ ಮತ್ತು ಕಮಿಷನರ್‌ಗೆ ಹಣ ಕೊಡಬೇಕು ಎಂದರು. ಅಷ್ಟು  ಹಣ ಇಲ್ಲ ಎಂದಾಗ, ₹ 25 ಲಕ್ಷವಾದರೂ ಕೊಡಬೇಕೆಂದು ಪಟ್ಟು ಹಿಡಿದರು.
ಸ್ನೇಹಿತರಲ್ಲಿ ಕೇಳಿ ಹೊಂದಿಸಿ  ₹10 ಲಕ್ಷ ಕೊಡುವುದಾಗಿ ಹೇಳಿದರೂ ಕೇಳಲಿಲ್ಲ. ನೆಲಮಂಗಲ ಬಳಿ 1.18 ಎಕರೆ ಜಮೀನಿದ್ದು ಅದನ್ನು ಕೊಡುವುದಾಗಿ ಆರೋಪಿ ತಿಳಿಸಿದ್ದರು. ಜಮೀನನ್ನು ತಾವು ಹೇಳಿದವರ ಬಳಿ ಅಡವಿಟ್ಟು ಹಣ ಕೊಡಿ. ಆಮೇಲೆ ಅದನ್ನು ಬಿಡಿಸಿಕೊಳ್ಳುವಂತೆ ತಿಳಿಸಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶೇಶ್‌ ಅವರ ತಾಯಿಗೆ ದೂರವಾಣಿ ಕರೆ ಮಾಡಿಸಿ ಒಡವೆ ಅಡವಿಟ್ಟು ₹ 5 ಲಕ್ಷ ಹೊಂದಿಸುವಂತೆ ತಿಳಿಸಲಾಯಿತು. ಅದರಂತೆ ಅವರು ಹಣ ಹೊಂದಿಸಿದರು. ಪರಿಚಯಸ್ಥರ ಕಾರಿನ ಚಾಲಕನನ್ನು  ಗುಪ್ತಾ ಅವರ ಮನೆಗೆ ಕಳುಹಿಸಿ ₹ 2.5 ಲಕ್ಷ ಪಡೆಯಲಾಯಿತು. ಈ ಪ್ರಕರಣದಲ್ಲಿ ಎಸಿಪಿ ಅಶಿಸ್ತಿನಿಂದ ವರ್ತಿಸಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾಸ್ಕರ್‌ ಯಾರು?
‘ಲಾಕ್‌ಡೌನ್‌ ಇರುವುದರಿಂದ ಕುಡಿಯಲು ವಿಸ್ಕಿ ಕೊಡುವಂತೆ ಗೆಳೆಯ ಭಾಸ್ಕರ್‌ ಅವರನ್ನು ಕೇಳಿದೆ.  ಅವರು ವ್ಯವಸ್ಥೆ ಮಾಡಿದರು. ಅವರು ಕೊಟ್ಟಿದ್ದು ಎರಡು ಬಾಟಲ್‌. ಎಂಟು ಬಾಕ್ಸ್‌ ಜೀಪಿನಲ್ಲಿ ಹೇಗೆ ಬಂತು ಗೊತ್ತಿಲ್ಲ’ ಎಂದು ವಿಶೇಶ್‌ ವಿಚಾರಣಾ ಅಧಿಕಾರಿಗಳಿಗೆ ಹೇಳಿದ್ದಾರೆ.

‘ಭಾಸ್ಕರ್‌, ಪರಿಚಿತ ಸೋಮು ಎಂಬುವರನ್ನು ಕಳಿಸಿ ಮದ್ಯದ ವ್ಯವಸ್ಥೆ ಮಾಡಿದರು ಎಂದಿದ್ದಾರೆ ವಿಶೇಶ್‌. ಆದರೆ, ವಿಚಾರಣಾ ವರದಿಯಲ್ಲಿ ಭಾಸ್ಕರ್‌ ಮತ್ತು ಸೋಮು ಯಾರು? ಮದ್ಯದ ಪೆಟ್ಟಿಗೆಗಳು ಯಾರಿಗೆ ಸೇರಿದ್ದು? ಬಾಕ್ಸ್‌ಗಳನ್ನು ಎಲ್ಲಿಗೆ ಸಾಗಿಸಲಾಗುತಿತ್ತು ಇತ್ಯಾದಿ ವಿವರಗಳಿಲ್ಲ. ಜೀಪಿನ ಬಗ್ಗೆ ‍ಪ್ರಸ್ತಾಪವಿಲ್ಲ. ವರದಿ ಮೇಲ್ನೋಟಕ್ಕೆ ಪಕ್ಷಪಾತದಿಂದ ಕೂಡಿರುವಂತಿದೆ’ ಎಂಬ ಆರೋಪಗಳು ಇಲಾಖೆಯಲ್ಲೇ ಕೇಳಿಬರುತ್ತಿವೆ.

ಸರಿಯಾದ ನಿರ್ಧಾರ: ಕಮಿಷನರ್‌‌
ಅಕ್ರಮ ಮದ್ಯ ಸಾಗಣೆ ಪ್ರಕರಣದಲ್ಲಿ ಡಿಸಿಪಿ ಪೂರ್ವ ಅವರು ಕೊಟ್ಟಿರುವ ವರದಿಯನ್ನು ಎಲ್ಲ ಹಂತದಲ್ಲೂ ಸಮಗ್ರವಾಗಿ ಪರಿಶೀಲಿಸಿ ಎಸಿಪಿ ವಾಸು ಅವರನ್ನು ಸಸ್ಪೆಂಡ್‌ ಮಾಡಲಾಗಿದೆ. ಇದು ಏಕಪಕ್ಷೀಯ ತೀರ್ಮಾನವಲ್ಲ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಹೇಳಿದ್ದಾರೆ.

ಮುರುಗನ್ ಅವರ ವಿರುದ್ಧ ವಾಸು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಪೊಲೀಸ್‌ ಅಧಿಕಾರಿ ಆಗಿ ಸಾರ್ವಜನಿಕವಾಗಿ ಆರೋಪ ಮಾಡುವುದು ಸರಿಯಲ್ಲ. ಇಲಾಖೆಗೆ ತನ್ನದೇ ಘನತೆ, ಗೌರವ ಇದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು