ಸೋಮವಾರ, ಮೇ 25, 2020
27 °C
ಏಪ್ರಿಲ್ 1ರಿಂದ ತೆರೆಯುವುದು ಅನುಮಾನ: ಸರ್ಕಾರದ ನಿರ್ದೇಶನದ ನಿರೀಕ್ಷೆಯಲ್ಲಿ ಅಬಕಾರಿ ಇಲಾಖೆ

ಮದ್ಯದ ವ್ಯಾಪಾರ ಆರಂಭವಾದರೂ ಹೊಸ ದರದಲ್ಲೇ ಮಾರಾಟ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ನಿರ್ದೇಶನದಂತೆ ಬಂದ್ ಆಗಿರುವ ಮದ್ಯದ ಅಂಗಡಿಗಳು ಏ. 1ರಿಂದ ತೆರೆಯುವ ಸಾಧ್ಯತೆ ಕಡಿಮೆ ಇದೆ. ಏಪ್ರಿಲ್‌ನಲ್ಲಿ ಯಾವಾಗ ಮದ್ಯದ ಅಂಗಡಿ ಅಥವಾ ಬಾರ್‌ ತೆರೆದರೂ ಹೊಸ ದರ ಅನ್ವಯವಾಗಲಿದೆ.

‘ಸರ್ಕಾರದ ಆದೇಶದಂತೆ ಮಾ.31ರವರೆಗೆ ಮದ್ಯದ ಅಂಗಡಿಗಳು ಬಂದ್ ಆಗಿವೆ. ಈ ಅವಧಿಯನ್ನು ವಿಸ್ತರಿಸಬೇಕೋ, ಬೇಡವೋ ಎಂಬುದರ ಬಗ್ಗೆ ಈವರೆಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬಂದಿಲ್ಲ’ ಎಂದು ಅಬಕಾರಿ ಇಲಾಖೆ ಆಯುಕ್ತ ವಿ. ಯಶವಂತ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಈ ನಡುವೆ ಅಬಕಾರಿ ಸುಂಕದ ದರಗಳನ್ನು ಶೇ 6ರಷ್ಟು ಹೆಚ್ಚಿಸಲು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು, ಅದರಂತೆ ದರ ಹೆಚ್ಚಳಕ್ಕೆ ಸಿದ್ಧತೆಗಳನ್ನು ಅಬಕಾರಿ ಇಲಾಖೆ ಮಾಡಿಕೊಂಡಿದೆ.

‘ಮದ್ಯದ ಅಂಗಡಿಗಳಲ್ಲಿ ಸದ್ಯ ದಾಸ್ತಾನಿರುವ ಮದ್ಯವನ್ನು ಹಳೇ ದರದಲ್ಲೇ ಮಾರಾಟ ಮಾಡಬೇಕು. ಕೆಎಸ್‌ಬಿಸಿಎಲ್‌ನಿಂದ ಹೊಸದಾಗಿ ಖರೀದಿ ಮಾಡುವ ಮದ್ಯಕ್ಕೆ ಹೊಸ ಸುಂಕ ಅನ್ವಯವಾಗಲಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

ಐದು ದಿನ ಹಳೇ ದರ ಇರಲಿ: ಮದ್ಯದ ಅಂಗಡಿ ತೆರೆದ ನಂತರ ಮುಂದಿನ ಐದು ದಿನಗಳ ಕಾಲ ಹಳೇ ದರವನ್ನೇ ಮುಂದುವರಿಸಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮನವಿ ಮಾಡಿದೆ.

‘ಅಂಗಡಿ ತೆರೆದ ಕೂಡಲೇ ಹೊಸ ದರದಲ್ಲಿ ಮದ್ಯ ಮಾರಾಟ ಮಾಡಬೇಕಾಗುತ್ತದೆ. ಹೊಸ ದರದ ಮದ್ಯ ಲಭ್ಯವಾಗುವುದು ವಿಳಂಬವಾಗುತ್ತದೆ. ಹೀಗಾಗಿ, ಹಳೇ ದರದಲ್ಲೇ ಮದ್ಯ ಖರೀದಿ ಮತ್ತು ಮಾರಾಟಕ್ಕೆ ಐದು ದಿನಗಳ ಅವಕಾಶ ನೀಡಬೇಕು’ ಎಂದು ಫೆಡರೇಷನ್ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ರಾಜ್ಯ ಸರ್ಕಾರ ಮತ್ತು ಅಬಕಾರಿ ಇಲಾಖೆಗೆ ಪತ್ರ ಬರೆದಿದ್ದಾರೆ.

‘ಲಾಕ್‌ಡೌನ್ ನಡುವೆ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡುವುದಾದರೆ ಎಲ್ಲಾ ರೀತಿಯ ಮದ್ಯದ ಅಂಗಡಿಗಳಿಗೂ ಅನ್ವಯವಾಗುವ ಆದೇಶ ಹೊರಡಿಸಬೇಕು. ವೈನ್ ಶಾಪ್ ಅಥವಾ ಎಂಆರ್‌ಪಿ ಮಳಿಗೆಗೆ ಮಾತ್ರ ಅವಕಾಶ ನೀಡಿದರೆ ಜನಸಂದಣೆ ಹೆಚ್ಚಾಗಿ ಕೋವಿಡ್–19 ನಿಯಂತ್ರಣಕ್ಕೆ ಕಷ್ಟವಾಗಲಿದೆ. ನಿರ್ದಿಷ್ಟ ಸಮಯ ನಿಗದಿ ಮಾಡಬೇಕು ಮತ್ತು ಪಾರ್ಸೆಲ್ ಸೇವೆಯನ್ನಷ್ಟೇ ನೀಡಲು ನಿರ್ಬಂಧ ವಿಧಿಸಿ ಎಲ್ಲರಿಗೂ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ದಿನಕ್ಕೆ ₹55 ಕೋಟಿ ಖೋತಾ

ಕಳೆದ 8 ದಿನಗಳಿಂದ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಅಬಕಾರಿ ವರಮಾನದಲ್ಲಿ ದಿನಕ್ಕೆ ₹55 ಕೋಟಿ ಖೋತಾ ಆಗಿದೆ. 

ಮಾ.24ರಿಂದ ಸಂಪೂರ್ಣ ಬಂದ್ ಆಗಿದ್ದು, ಅದಕ್ಕೂ ಮುನ್ನ ಮೂರು ದಿನ ವೈನ್‌ಶಾಪ್ ಮತ್ತು ಎಂಆರ್‌ಪಿ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಒಟ್ಟಾರೆ ₹500 ಕೋಟಿ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ.

2019–20ನೇ ಸಾಲಿನಲ್ಲಿ ₹ 20,950 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿತ್ತು. ಮಾರ್ಚ್‌ ಅಂತ್ಯಕ್ಕೆ ನಿರೀಕ್ಷೆಗೂ ಮೀರಿ ₹21,400 ಕೋಟಿ ವರಮಾನವನ್ನು ಅಬಕಾರಿ ಇಲಾಖೆ ಸಂಗ್ರಹಿಸಿದೆ.

2020–21ನೇ ಸಾಲಿಗೆ ಶೇ 6ರಷ್ಟು ಸುಂಕ ಹೆಚ್ಚಳದೊಂದಿಗೆ ₹ 1,700 ಕೋಟಿ ಹೆಚ್ಚುವರಿ ವರಮಾನವನ್ನು ಇಲಾಖೆ ನಿರೀಕ್ಷೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು