ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನಾಡಿನ ಸಮಸ್ಯೆ ಆಲಿಸುವೆ: ‘ಪ್ರಜಾವಾಣಿ ಒಳನೋಟ’ಕ್ಕೆ ಎಚ್.ಡಿ.ಕೆ ಸ್ಪಂದನೆ

Last Updated 11 ನವೆಂಬರ್ 2018, 19:57 IST
ಅಕ್ಷರ ಗಾತ್ರ

‘ಗಡಿನಾಡಿನ ಜನರು ಅನುಭವಿಸುತ್ತಿರುವ ಸಮಸ್ಯೆ, ಸಂಕಟಗಳ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿರುವ ‘ಒಳನೋಟ’ವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನಾಡಿನೊಳಗಿರುವ ಯಾರಲ್ಲೂ ಪರಕೀಯ, ಅನಾಥ ಭಾವನೆ ಬರದಂತೆ ನೋಡಿಕೊಳ್ಳುವುದು, ಇದ್ದರೆ ಹೋಗಲಾಡಿಸುವುದು ಮೈತ್ರಿ ಸರ್ಕಾರದ ಪ್ರಧಾನ ಧ್ಯೇಯವಾಗಿರಲಿದೆ.

‘ಪ್ರಜಾವಾಣಿ’ ಬೆಳಕು ಚೆಲ್ಲಿರುವ ವಿಷಯಗಳ ಬಗ್ಗೆ ಸರ್ಕಾರ ಆದ್ಯತೆ ಮೇಲೆ ಗಮನ ಹರಿಸಲಿದೆ. ಇದರ ಮೊದಲ ಹೆಜ್ಜೆಯಾಗಿ ಸಾಧ್ಯವಾದಷ್ಟು ಬೇಗ ಸಭೆಯೊಂದನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಡಿನ ಬಗ್ಗೆ ಕಳಕಳಿಯುಳ್ಳ ಹಿರಿಯ ಮುತ್ಸದ್ದಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಹಾಗೂ ಹಾಲಿ ಅಧ್ಯಕ್ಷರು, ಗಡಿ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವ ಮಹನೀಯರು, ರಾಜ್ಯದ ಎಲ್ಲ ಗಡಿ ಜಿಲ್ಲೆಗಳಲ್ಲಿನ ಹೋರಾಟಗಾರರು, ಕಾಳಜಿಯುಳ್ಳವರನ್ನು ಒಂದೆಡೆ ಸೇರಿಸಿ ಅವರ ಸಲಹೆ ಪಡೆಯಲು ನಿರ್ಧರಿಸಿದ್ದೇನೆ. ತಜ್ಞರು ಮತ್ತು ಹಿರಿಯರು ನೀಡುವ ಸಲಹೆ ಆಧರಿಸಿ ಸರ್ಕಾರ ತನ್ನ ಮುಂದಿನ ಹೆಜ್ಜೆ ಇಡಲಿದೆ. ಗಡಿ ಅಭಿವೃದ್ಧಿಯ ವಿಷಯದಲ್ಲಿ ಪಕ್ಷ ಭೇದವಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಅಪೇಕ್ಷೆ. ಇದಕ್ಕೆ ಎಲ್ಲರ ಸಹಕಾರ ಬಯಸುವೆ. ಗಡಿ ಜಿಲ್ಲೆ, ಉತ್ತರ-ದಕ್ಷಿಣ, ಭಾಷಿಕ ಭೇದವಿಲ್ಲದೇ ಕನ್ನಡ ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡುವುದು ಸಮ್ಮಿಶ್ರ ಸರ್ಕಾರದ ಸಂಕಲ್ಪ. ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದ ‘ಪ್ರಜಾವಾಣಿ’ ಬಳಗಕ್ಕೆ ಧನ್ಯವಾದಗಳು.

ವಿಶ್ವಾಸದಿಂದ
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

***

ಗಡಿನಾಡಿನ ಜನರ ನೋವಿಗೆ ಧ್ವನಿಯಾದ ಒಳನೋಟ

ರಾಜ್ಯದ ಗಡಿನಾಡಿನ ಪ್ರದೇಶಗಳ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ನಾಡಿನ ಗಡಿಗುಂಟ ಕಣ್ಣೀರ ಕೋಡಿ’ ವರದಿಗೆ ಓದುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಗಮನ ಹರಿಸುವುದಾಗಿ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ವಾಗ್ದಾನ ಮಾಡಿದ್ದಾರೆ. ಸರ್ಕಾರದ ಕಣ್ತೆರೆಸುವ ಈ ಪ್ರಯತ್ನಕ್ಕೆ ಗಡಿನಾಡಿನ ಪ್ರಮುಖರು ಧನ್ಯವಾದ ಸಲ್ಲಿಸಿದ್ದಾರೆ.

ಇದು ತೀಕ್ಷ್ಣ ನೋಟವೂ ಆಗಿದೆ

‘ಗಡಿಗುಂಟ ಕಣ್ಣೀರ ಕೋಡಿ’ ನ.11ರ ಸಂಚಿಕೆಯ ಒಳನೋಟ ಗಡಿಭಾಗದ ಜನರ ಸಂಕಷ್ಟವನ್ನು ಸರ್ಕಾರಕ್ಕೆ ಎತ್ತಿತೋರಿಸಿದೆ. ಇದು ತೀಕ್ಷ್ಣನೋಟವೂ ಆಗಿದೆ. ಈ ಹೊಸ ಪ್ರಯೋಗ ಮಾಡುತ್ತಿರುವ ‘ಪ್ರಜಾವಾಣಿ’ ಜನರ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಒಳನೋಟಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಎಂಬುದೂ ಪ್ರಕಟವಾದರೆ ಜನರಿಗೆ ಮತ್ತಷ್ಟು ಸ್ಪಷ್ಟತೆ ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ಪ್ರಜಾವಾಣಿ ‘ಛೂಬಾಣ’ ಮಾದರಿಯಲ್ಲಿ ‘ಒಳನೋಟ’ ಬೀರುತ್ತಿರುವುದು ನಮಗೆ ಇಷ್ಟವಾಗಿದೆ.

–ಡಿ. ಉಮಾದೇವಿ
ಗಡಿ ಅಭಿವೃದ್ಧಿ ಹೋರಾಟಗಾರ್ತಿ, ಯಾದಗಿರಿ

ಇಲಾಖೆಗಳು ವರ್ಗವಾಗಿಲ್ಲ

ಹನೂರು ತಾಲ್ಲೂಕು ಕೇಂದ್ರ ಎಂದು ಘೋಷಣೆಯಾಗಿದ್ದರೂ, ಸರ್ಕಾರದ ಎಲ್ಲ ಇಲಾಖೆಗಳು ಇಲ್ಲಿಗೆ ವರ್ಗವಾಗಿಲ್ಲ.ಇದರಿಂದ ಗಡಿ ಭಾಗದ ಜನರಿಗೆ ಸಮಸ್ಯೆ ಆಗುತ್ತಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ₹ 50 ಕೋಟಿ ಅನುದಾನ ಕೇಳಿದ್ದೇನೆ.

–ಆರ್‌. ನರೇಂದ್ರ,ಹನೂರು ಶಾಸಕ

ರಾಜ್ಯ ಸರ್ಕಾರವೇ ಹೊಣೆ

ಎಲ್ಲ ರಾಜ್ಯ ಸರ್ಕಾರಗಳು ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಿವೆ. ಗಡಿ ಭಾಗದಲ್ಲಿ, ಅದರಲ್ಲೂ ಹನೂರು ಭಾಗದಲ್ಲಿ ಕನ್ನಡಿಗರಿಗೆ ಮೂಲಸೌಕರ್ಯಗಳು ಇಲ್ಲದಿರುವುದರಿಂದ ಅವರು ತಮಿಳುನಾಡು ರಾಜ್ಯವನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ನೇರಹೊಣೆ

ಚಾ.ರಂ.ಶ್ರೀನಿವಾಸ ಗೌಡ,ಕನ್ನಡ ಪರ ಹೋರಾಟಗಾರ

ಕನ್ನಡ ಉಳಿಸಿ

ಕರ್ನಾಟಕ– ಕೇರಳ ಗಡಿಪ್ರದೇಶದ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಬಲವಂತವಾಗಿ ಹೇರುತ್ತಿರುವ ಕಾರಣ ಮತ್ತು ಕನ್ನಡಕ್ಕೆ ಪ್ರೋತ್ಸಾಹ ಸಿಗದೆ ಆ ಭಾಗದ ಕನ್ನಡಿಗರು ಕನ್ನಡ ಶಾಲೆಗಳಿಗೆ ಹೋಗಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ‘ಪ್ರಜಾವಾಣಿ’ ಈ ನಿಟ್ಟಿನಲ್ಲಿ ಎಚ್ಚರಿಸುವ ಕೆಲಸ ಮಾಡಿದೆ.

–ಸಂಜೀವ ಮಠಂದೂರು,ಪುತ್ತೂರು ಶಾಸಕ

ವಾಸ್ತವದ ಒಳನೋಟ

ರಾಜ್ಯದ ಗಡಿ ನಾಡ ಜನರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ವಾಸ್ತವ ಚಿತ್ರಣವನ್ನು ‘ಪ್ರಜಾವಾಣಿ’ ಒಳನೋಟ ಚೆನ್ನಾಗಿ ಕಟ್ಟಿಕೊಟ್ಟಿದೆ. ಡಿ.ಎಂ.ನಂಜುಂಡಪ್ಪ ಸಮಿತಿ ನೀಡಿದ ವರದಿ ಮಾರ್ಗಸೂಚಿಗಳನ್ನು ಆಧರಿಸಿ ರಾಜ್ಯ ಸರ್ಕಾರ ಗಡಿ ಪ್ರದೇಶದ ಜನರ ಜೀವನ ಉತ್ತಮಪಡಿಸಲಿಕ್ಕೆ ಬೇಕಾದ ನೀತಿ ರೂಪಿಸಿಲ್ಲ ಎನ್ನುವುದು ವಾಸ್ತವ.

–ಜಿ.ವಿ.ಶ್ರೀರಾಮರೆಡ್ಡಿ,ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ

ಸರ್ಕಾರಕ್ಕೆ ಮಾರ್ಗದರ್ಶಿ

ರಾಜ್ಯದ ಗಡಿ ಪ್ರದೇಶದ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿರುವುದು ಉತ್ತಮ ಬೆಳವಣಿಗೆ. ಪಾವಗಡದಂತಹ ಗಡಿಭಾಗದ ಸಮಸ್ಯೆಗಳ ಪರಿಹಾರ ಕುರಿತು ಸರ್ಕಾರಗಳುಆಶ್ವಾಸನೆಗಳನ್ನು ಕೊಡುವುದರಲ್ಲಿಯೇ ಕಾಲ ಕಳೆಯುತ್ತಿವೆ. ‘ಪ್ರಜಾವಾಣಿ’ ವರದಿಯನ್ನು ಸರ್ಕಾರ ಮಾರ್ಗದರ್ಶಿ ಎನ್ನುವಂತೆ ಪರಿಗಣಿಸಿ ಗಡಿಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು.

–ನಾಗಭೂಷಣರೆಡ್ಡಿ,ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಕಿಸಾನ್ ಸಂಘ

ಮೂಲಸೌಕರ್ಯ ಇಲ್ಲ

ನನ್ನ ಕ್ಷೇತ್ರವೂ ಸೇರಿ ಜಿಲ್ಲೆಯ ಗಡಿಭಾಗಗಳಲ್ಲಿ ವಾಸಿಸುವ ಕನ್ನಡಿಗರು ಮೂಲಸೌಕರ್ಯದಿಂದ ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.

–ಟಿ. ರಘುಮೂರ್ತಿ,ಚಳ್ಳಕೆರೆ ಶಾಸಕ

ಕೋಟಿ ನಮನ

ರಾಜ್ಯದ ಗಡಿ ಜಿಲ್ಲೆಗಳ ಸಮಸ್ಯೆ ಮೇಲೆ ಬೆಳಕು ಚೆಲ್ಲಿರುವ ಪತ್ರಿಕೆಯ ಪ್ರಯತ್ನ ಶ್ಲಾಘನೀಯ. ಪತ್ರಿಕೆಯ ಪ್ರತಿಯು ಸಂಗ್ರಹ ಯೋಗ್ಯ. ದಪ್ಪ ಚರ್ಮದ ಆಳುವ ವರ್ಗಕ್ಕೆ ಗಡಿ ಭಾಗದ ಜನರ ಸಮಸ್ಯೆಗೆ ಸ್ಪಂದಿಸುವ ಹೃದಯವಂತಿಕೆ ಇಲ್ಲ. ಗಡಿ ಭಾಗದ ಜನರ ಸಮಸ್ಯೆಗಳ ಕುರಿತು ಅಧಿಕಾರಿ ವರ್ಗ ಹಾಗೂ ಆಡಳಿತ ಯಂತ್ರದ ಕಣ್ಣು ತೆರೆಸಲು ಮಾಡಿರುವ ಪತ್ರಿಕೆಯ ಪ್ರಯತ್ನಕ್ಕೆ ಕೋಟಿ ನಮನ.

–ಕೋಗಿಲಹಳ್ಳಿ ಕೃಷ್ಣಪ್ಪ,ಗಡಿ ಹೋರಾಟಗಾರ

ಸೌಲಭ್ಯ ಕಲ್ಪಿಸಬೇಕಿದೆ

ನಮ್ಮಲ್ಲಿ ಮರಾಠಿ ಪ್ರಭಾವವಿಲ್ಲ. ನೆರೆಯ ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ, ಜತ್ತ ತಾಲ್ಲೂಕಿನ ವಿವಿಧೆಡೆ ಕನ್ನಡದ ಪ್ರಭಾವ ಇಂದಿಗೂ ದಟ್ಟೈಸಿದೆ. ಅಲ್ಲಿನವರು ಕನ್ನಡ ಶಾಲೆಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ, ಪಿಯು ಶಿಕ್ಷಣವನ್ನು ನೀಡುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಬೇಕಿದೆ.

–ಯಶವಂತರಾಯಗೌಡ ಪಾಟೀಲ,ಇಂಡಿ ಶಾಸಕ

ಸಚಿವರಿಗೆ ಒತ್ತಡ

ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ಗಡಿಯಲ್ಲಿರುವ ಕನ್ನಡಿಗರು ಹಲವು ಸಂಕಟಗಳನ್ನು ಎದುರಿಸುತ್ತಿರುವುದು ಗಮನದಲ್ಲಿದೆ. ‘ಪ್ರಜಾವಾಣಿ’ಯು ಸರ್ಕಾರದ ಗಮನ ಸೆಳೆದಿರುವುದು ಸರಿಯಾಗಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆ.

ಮಹೇಶ ಕುಮಠಳ್ಳಿ,ಶಾಸಕ, ಅಥಣಿ

ಕಣ್ಣು ತೆರೆಸುವ ಪ್ರಯತ್ನ

ಗಡಿ ಭಾಗದ ಜನರ ಸಂಕಟಗಳ ಕುರಿತು ಸಮಗ್ರವಾಗಿ ವರದಿ ಮಾಡಿದ ‘ಪ್ರಜಾವಾಣಿ’ಗೆ ಧನ್ಯವಾದಗಳು. ರಾಜ್ಯ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಇದಾಗಿದೆ. ಇಂಥ ವರದಿ, ವಿಶೇಷ ಲೇಖನಗಳು ಹೆಚ್ಚೆಚ್ಚು ಬರಲೆಂದು ಆಶಿಸುತ್ತೇನೆ.

–ಅಶೋಕ ಚಂದರಗಿ,ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ

‘ನಯಾಪೈಸೆ ಬಿಡುಗಡೆ ಆಗಿಲ್ಲ’

2013ರಿಂದ ಇದುವರೆಗೆ ಕೊಡಗಿನ ಗಡಿಗ್ರಾಮಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ. ಜಿಲ್ಲಾಧಿಕಾರಿ ಖಾತೆಗೆ ಅನುದಾನ ನೀಡುತ್ತೇವೆ ಎಂಬುದು ಭರವಸೆಯಾಗಿಯೇ ಉಳಿದಿದೆ. ಇನ್ನಾದರೂ ಸರ್ಕಾರ ಕಾಳಜಿ ತೋರಲಿ.

–ಕೆ.ಜಿ.ಬೋಪಯ್ಯ,ಶಾಸಕ, ವಿರಾಜಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT