ಗುರುವಾರ , ಏಪ್ರಿಲ್ 2, 2020
19 °C

ಯಕೃತ್ತು ಸಮಸ್ಯೆಯ ಬಾಲಕಿಗೆ ಮರುಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಪರೂಪದ ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ಅಸ್ಸಾಂನ ಐದು ವರ್ಷದ ಬಾಲಕಿಗೆ ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ‘ಸಕ್ರ ವರ್ಲ್ಡ್‌’ ಆಸ್ಪತ್ರೆಯ ವೈದ್ಯರು ಮರುಜೀವ ನೀಡಿದ್ದಾರೆ. 

ಒಂದೇ ವಾರದಲ್ಲಿ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದಿದ ಕಾಮಾಲೆ ರೋಗದಿಂದ ಬಳಲುತ್ತಿದ್ದ ಅಸ್ಸಾಮಿನ ಬಾಲಕಿ ಸಕ್ರ ಆಸ್ಪತ್ರೆಗೆ ದಾಖಲಾಗಿದ್ದಳು.

‘ತಪಾಸಣೆ ಮಾಡಿದಾಗ ಬಾಲಕಿಯ ಶರೀರದ ಬಿಲಿರು ಬಿನ್ (ಕೆಂಪು ರಕ್ತ ಕಣಗಳ ಸ್ಥಗಿತ) ಶೇ 34 ಎಂ.ಜಿ. ಇತ್ತು. ಅಂತರರಾಷ್ಟ್ರೀಯ ಸಾಮಾನ್ಯ ಅನುಪಾತದ ಪ್ರಕಾರ ಐಎನ್‌ಆರ್ 6.6 ಇರಬೇಕಿತ್ತು. ರಕ್ತದಲ್ಲಿದ್ದ ಭಾರಿ ಪ್ರಮಾಣದ ಬಿಲಿರುಬಿನ್ ಕಾಮಾಲೆ ಲಕ್ಷಣ ಸೂಚಿಸುತ್ತಿತ್ತು. ಐಎನ್‌ಆರ್ ಸಾಮಾನ್ಯವಾಗಿ ಯಕೃತ್ತಿನ ಘನೀಕರಣವನ್ನು ಪ್ರತಿಬಿಂಬಿಸುತ್ತದೆ. ದೇಹದಲ್ಲಿನ ಹೆಪ್ಪುಗಟ್ಟುವಿಕೆಯ ಅಗತ್ಯಕ್ಕೆ ತಕ್ಕಷ್ಟು ಪ್ರೋಟಿನ್ ಅಂಶವನ್ನು ಯಕೃತ್ತು ಉತ್ಪಾದಿಸುತ್ತಿಲ್ಲವೆಂಬುದನ್ನು ಇದು ಬಹಿರಂಗಪಡಿಸುತ್ತಿತ್ತು. ಬಾಲಕಿ ಯಕೃತ್ತಿನ ವೈಫಲ್ಯಕ್ಕೊಳಗಾಗಿದ್ದಳು’ ಎಂದು ಸಕ್ರ ವರ್ಲ್ಡ್ ಆಸ್ಪತ್ರೆಯ ಗ್ಯಾಸ್ಟ್ರೋಇಂಟೆಸ್ಟಿನಲ್ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ.ಸಾದಿಕ್ ಸಿಕೊರಾ ವಿವರಿಸುತ್ತಾರೆ. 

ಬಾಲಕಿಯನ್ನು ಪರೀಕ್ಷೆಗೊಳಪಡಿಸಿದಾಗ ಆಕೆ ‘ವಿಲ್ಸನ್ ಕಾಯಿಲೆ’ಯಿಂದ ಬಳಲುತ್ತಿರುವುದು ದೃಢಪಟ್ಟಿತ್ತು.

ತಾಮ್ರದ ಅಂಶವು ಪಿತ್ತ ಜನಕಾಂಗದಲ್ಲಿ ಸಂಗ್ರಹಗೊಳ್ಳುವ ಅಪರೂಪದ ಸ್ಥಿತಿಯಿದು. ಇದು ಯಕೃತ್ತಿನ ಕ್ಷೀಣತೆಗೆ ಕಾರಣ. ತಕ್ಷಣ ಚಿಕಿತ್ಸೆ ಸಿಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇತ್ತು. ತಕ್ಷಣವೇ ಬಾಲಕಿಯ ಹೆಸರನ್ನು ಯಕೃತ್ತು ಕಸಿ ಪಟ್ಟಿಗೆ ಸೇರಿಸಲಾಯಿತು. ಬಾಲಕಿಯ ತಾಯಿಯದ್ದು ಒಂದೇ ರಕ್ತದ ಗುಂಪಾಗಿದ್ದರಿಂದ ಮಗಳಿಗೆ ಯಕೃತ್ತು ದಾನ ಮಾಡಿದರು.

ತಾಯಿಯ ಪಿತ್ತಜನಕಾಂಗದ 8 ಭಾಗಗಳಲ್ಲಿ ರಕ್ತ ಪೂರೈಕೆ ಮತ್ತು ಪಿತ್ತರಸದ ಒಳಮಾರ್ಗದ ಜತೆಗೆ ಬಾಲಕಿಯ ದೇಹ ಹೊಂದಿಕೆಯಾದ್ದರಿಂದ ಯಕೃತ್ತು ದಾನ ಪಡೆಯಲು ಸಾಧ್ಯವಾಯಿತು.

‘7 ಗಂಟೆಗಳ ಸುದೀರ್ಘಾವಧಿಯ ಶಸ್ತ್ರಚಿಕಿತ್ಸೆ ಇದು. ಅಂಗದಾನ ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯ ದೇಹವು ನೈಸರ್ಗಿಕವಾಗಿ ಎದುರಾಗುವ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಔಷಧಿಗಳನ್ನು ಪಡೆಯ ಬೇಕಾಗುತ್ತದೆ. ಹೊಸ ಅಂಗವನ್ನು ಸುರಕ್ಷಿತವಾಗಿ ಕಾಪಾಡಿ ಕೊಳ್ಳಲು ಜೀವಮಾನವಿಡೀ ಎಚ್ಚರ ವಹಿಸಬೇಕಾಗುತ್ತದೆ’ ಎನ್ನುತ್ತಾರೆ ಸಕ್ರ ಆಸ್ಪತ್ರೆಯ ಹಿಪಾಟ್ ಪ್ಯಾಂಕ್ರಿಯೇಟೊ ಬಿಲಿಯರಿ ಶಸ್ತ್ರಚಿಕಿತ್ಸೆ ಹಾಗೂ ಯಕೃತ್ತ ಬದಲಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಕಿಶೋರ್ ಜಿ.ಎಸ್.ಬಿ.

‘ನನ್ನ ಮಗಳು ಈಗ ನಗುನಗುತ್ತಾ ಓಡಾಡಿ ಕೊಂಡಿರುವುದು ನಮಗೆ ಸಂತಸ ತಂದಿದೆ’ ಎನ್ನುತ್ತಾರೆ ಬಾಲಕಿಯ ತಂದೆ ಭೂಪೇಂದ್ರ ಬೋಹ್ರಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು