ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಎಲ್‌ಕೆಜಿಗೆ ಬೇಡಿಕೆ

ಹೆಚ್ಚು ಅರ್ಜಿಗಳು ಬಂದರೆ ಲಾಟರಿ ಮೂಲಕ ಆಯ್ಕೆ
Last Updated 30 ಮೇ 2019, 4:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಜೂನ್‌ 10ರಿಂದ ಎಲ್‌ಕೆಜಿ ತರಗತಿಗಳು ಆರಂಭವಾಗಲಿದ್ದು, ಹಲವೆಡೆ ಭಾರಿ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರಿನಲ್ಲಿ ಆರಂಭವಾಗಲಿರುವ ಎಲ್‌ಕೆಜಿ ತರಗತಿಗೆ ಈಗಾಗಲೇ 35 ಮಂದಿ ಅರ್ಜಿ ಸಲ್ಲಿಸಿದ್ದಾರೆ! ಇನ್ನೂ 11 ದಿನ ಬಾಕಿ ಇದ್ದು, ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರ ಗ್ರಾಮದ ಕೆಪಿಎಸ್‌ ಶಾಲೆಗೆ ಈಗಾಗಲೇ 30 ಅರ್ಜಿ ಬಂದಿವೆ.ಇದೇ ಸ್ಥಿತಿ ರಾಜ್ಯದ ಇತರ ಹಲವು ಕಡೆಗಳಲ್ಲಿ
ಇರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಒಂದು ಎಲ್‌ಕೆಜಿ ತರಗತಿಗೆ ಗರಿಷ್ಠ 30 ಮಕ್ಕಳಿಗೆ ಅವಕಾಶ ಇದೆ. ಬೇಡಿಕೆ ಹೆಚ್ಚಿದರೆ ಇನ್ನೊಂದು ವಿಭಾಗ ಮಾಡಿ ಸೇರಿಸಿಕೊಳ್ಳಲಾಗುತ್ತಿದೆಯೇ? ನಾಲ್ಕೂವರೆ ವರ್ಷ ಮೀರಿದ ಮಕ್ಕಳಿಗಾಗಿ ಯುಕೆಜಿ ಆರಂಭಿಸಲಿದ್ದಾರೆಯೇ ಎಂದು ಕೇಳಿ ಕೆಲವು ಪೋಷಕರು ’ಪ್ರಜಾವಾಣಿ’ಗೆ ಕರೆ ಮಾಡಿದರು.

‘ಇದೊಂದು ಪೈಲಟ್‌ ಯೋಜನೆ. ಹೆಚ್ಚುವರಿ ವಿಭಾಗ ಮಾಡುವ ವಿಚಾರ ಇಲ್ಲ. ಈ ಬಾರಿ ಎಲ್‌ಕೆಜಿ ತರಗತಿಗಳು ಮಾತ್ರ ಆರಂಭವಾಗುತ್ತವೆ. ಮಕ್ಕಳ ಸಂಖ್ಯೆ ಅಧಿಕವಾದರೆ ಲಾಟರಿ ಮೂಲಕ ಆಯ್ಕೆ ಮಾಡಿ 30 ಮಕ್ಕಳಿಗಷ್ಟೇ ಅವಕಾಶ ನೀಡಲಾಗುವುದು, ಪೋಷಕರು ಸಹಕರಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಂ.ಟಿ.ರೇಜು ‘ಪ್ರಜಾವಾಣಿ’ಗೆ ತಿಳಿಸಿದರು.

ಬಲಿಪಶು ಮಾಡಬೇಡಿ: ‘ಇಂದು ಎಲ್ಲರೂ ಸರ್ಕಾರಿ ಎಲ್‌ಕೆಜಿ ಎಂದು ಬಿಂಬಿಸುತ್ತಿದ್ದು, ಸಹಜವಾಗಿಯೇ ಪೋಷಕರೂ ಅದರತ್ತ ಆಕರ್ಷಿತರಾಗಿದ್ದಾರೆ. ತರಗತಿಗೆ ಭಾರಿ ಸಂಖ್ಯೆಯಲ್ಲಿ ಮಕ್ಕಳ ಹಾಜರಾತಿ ಆಗುವುದೂ ವಿಶೇಷವೇನಿಲ್ಲ. ಆದರೆ ಇದು ಅಂಗನವಾಡಿ ವ್ಯವಸ್ಥೆಯನ್ನೇ ಹಾಳು ಮಾಡುವ ಅಪಾಯ ಇದೆ. ಒಂದು ಸಂಸ್ಥೆಯನ್ನು ಬಲಪಡಿಸಲು ಹೋಗಿ ಇನ್ನೊಂದು ಸಂಸ್ಥೆಯನ್ನು ಬಲಿಪಶು ಮಾಡುವುದು ಸರಿಯಲ್ಲ. ಬದಲಿಗೆ ಅಂಗನವಾಡಿಗಳಲ್ಲೇ ಎಲ್‌ಕೆಜಿ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ, ಇದರಿಂದ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆಸಹಾಯವಾಗುತ್ತದೆ’ ಎಂದು ಸಿಐಟಿಯು ನಾಯಕಿ ಎಸ್‌.ವರಲಕ್ಷ್ಮಿ ಹೇಳಿದರು.

ಇಂದು ಪ್ರತಿಭಟನೆ

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವ ಬದಲು ಅಂಗನವಾಡಿಗಳಲ್ಲೇ ಎಲ್‌ಕೆಜಿ ಆರಂಭಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಹಿತ ಮೂರು ಸಂಘಟನೆಗಳ ವತಿಯಿಂದ ನಗರದಲ್ಲಿ ಗುರುವಾರ ಬೆಳಿಗ್ಗೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ನಗರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ ವರೆಗೆ ಮೆರವಣಿಗೆ ನಡೆದು ಬಳಿಕ ಪ್ರತಿಭಟನಾ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT