ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಜೀವನಕ್ಕೆ ಕಾನೂನು ಅರಿವು ಅಗತ್ಯ

ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು–ನೆರವು ಕಾರ್ಯಕ್ರಮ
Last Updated 12 ಮೇ 2018, 8:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮನುಷ್ಯ ಜೀವನದ ಅವಿಭಾಜ್ಯ ಅಂಗವಾದ ಕಾನೂನುಗಳೇ ಇರದಿದ್ದರೆ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಆದ್ದರಿಂದ ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಲು ಕಾನೂನು ತಿಳಿವಳಿಕೆ ಅಗತ್ಯ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌. ದೇವರಾಜ್‌ ತಿಳಿಸಿದರು.

ನಗರದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾನೂನು ಮತ್ತು ವೈದ್ಯರಿಗೆ ನಿಕಟ ಸಂಪರ್ಕವಿದೆ. ಕುಟುಂಬ ಕಲಹ, ಜಮೀನಿನ ವಿವಾದಗಳಲ್ಲಿ ಜನರು ಹೆಚ್ಚಾಗಿ ಮಾನಸಿಕವಾಗಿ ಉದ್ರೇಗಕ್ಕೆ ಒಳಗಾಗಿ ಕಾನೂನು ಉಲ್ಲಂಘನೆ ಮಾಡುತ್ತಾರೆ. ಕೆಲವೊಮ್ಮೆ ಪ್ರಾಣ ಹಾನಿ ಆಗುವ ಸಂಭವವಿರುತ್ತದೆ. ಇಂತಹ ಅನೇಕ ಪ್ರಕರಣಗಳಲ್ಲಿ ಜನರು ಪೆಟ್ಟು ತಿಂದು ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಪ್ರಕರಣದ ಬಗ್ಗೆ ವೈದ್ಯರಲ್ಲಿ ಮಾಹಿತಿ ಇರುತ್ತದೆ. ಸಮಾಜದಲ್ಲಿ ವ್ಯಕ್ತಿಯು ಆರೋಗ್ಯಕರ ಜೀವನ ನಡೆಸಲು ವೈದ್ಯರಿಂದಲೂ ಸಹ ಕಾನೂನು ಅರಿವು, ನೆರವು ಪಡೆದುಕೊಳ್ಳಬಹುದು’ ಎಂದು ಹೇಳಿದರು.

‘ಪ್ರತಿಯೊಬ್ಬರಲ್ಲಿ ಕಾನೂನು ಅರಿವು ಮೂಡಿದಾಗ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ದೇಶದ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಈಗಾಗಲೇ ದೇಶದಲ್ಲಿ 3,600ಕ್ಕೂ ಹೆಚ್ಚು ಕಾನೂನುಗಳನ್ನು ರಚಿಸಲಾಗಿದೆ. ಕಾನೂನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ನಾವು ಯಾವುದೇ ಸೇವೆಯನ್ನು ಪಡೆಯಬೇಕಾದರೆ ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಆಗಲೇ ಸಮಾಜ ಸುಧಾರಣೆ ಸಾಧ್ಯ’ ಎಂದು ತಿಳಿಸಿದರು.

‘ಜನ ಸಾಮಾನ್ಯರಲ್ಲಿ ಕಾನೂನು ಅರಿವಿರದ ಕಾರಣ ಸಮಸ್ಯೆಗಳು ಹೆಚ್ಚುತ್ತಿವೆ. ಕಾನೂನು ಗೌರವಿಸಿ, ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನಾವು ಮಾಡುವ ವೃತ್ತಿ, ವ್ಯವಹಾರಗಳಲ್ಲಿ ಕಾನೂನು ಬದ್ಧತೆಯನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರತಿ ಹಳ್ಳಿಯಲ್ಲಿ ಜನರಿಗೆ ಕಾನೂನು ಅರಿವು, ನೆರವು ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದೆ’ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಲೋಕೇಶ್ ಮಾತನಾಡಿ, ‘ಪ್ರತಿ ಪ್ರಜೆ ಕಾನೂನು ಪಾಲನೆ ಮಾಡುವಲ್ಲಿ ಬದ್ಧರಾಗಿರಬೇಕು. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ. ವ್ಯಕ್ತಿಯು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಮೊದಲು ಕಾನೂನಿನ ಅರಿವು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮನುಷ್ಯ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ಕುಮಾರ್‌, ಆರ್‌ಎಂಒ ಡಾ.ರಮೇಶ್‌, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸಹ ನಿರ್ದೇಶಕ ಶ್ರೀನಿವಾಸ್‌ ಉಪಸ್ಥಿತರಿದ್ದರು.

**
ಕಾನೂನು ರಕ್ಷಣೆ ಪ್ರತಿಯೊಬ್ಬ್ರ ಹೊಣೆ. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಿ, ಸೌಹಾರ್ದಯುತವಾಗಿ ಬಾಳಲು ಪರಸ್ಪರ ಸಹಕಾರ, ಸಹಭಾಗಿತ್ವ ಅತ್ಯಗತ್ಯ
ಎಚ್‌. ದೇವರಾಜ್‌, ಹಿರಿಯ ಸಿವಿಲ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT