ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸಾಲ ಮನ್ನಾ: ಆಯೋಗ ಒಪ್ಪಿಗೆ

ಗುರುತಿಸಿದ ಫಲಾನುಭವಿಗಳ ಖಾತೆಗಳಿಗೆ ಹಣ ಬಿಡುಗಡೆ
Last Updated 26 ಏಪ್ರಿಲ್ 2019, 21:06 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯ ನೀತಿಸಂಹಿತೆ ಜಾರಿಗೂ ಮೊದಲು ಗುರುತಿಸಿದ್ದ ಅರ್ಹ ರೈತರ ಸಾಲ ಮನ್ನಾ ಮೊತ್ತವನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ.

ಆಯೋಗದ ನಿರ್ದೇಶನದಂತೆ ಸಾಲ ಮನ್ನಾ ಹಣ ಬಿಡುಗಡೆಯನ್ನು ಮಾರ್ಚ್‌ 11ರಿಂದ ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ, ರಾಜ್ಯದಲ್ಲಿ ಮತದಾನ ಮುಗಿದ ಕಾರಣ ಹಣ ಬಿಡುಗಡೆ ಮಾಡಲು ಏ. 24ರಂದೇ ಆಯೋಗ ಒಪ್ಪಿಗೆ ಸೂಚಿಸಿದೆ ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ.

ಸಹಕಾರ ಸಂಘಗಳಿಂದ ಪಡೆದ ₹ 1 ಲಕ್ಷವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಈವರೆಗೆ 4.10 ಲಕ್ಷ ಫಲಾನುಭವಿಗಳ ಮನ್ನಾ ಮೊತ್ತ ₹1,894.45 ಕೋಟಿಯನ್ನು ರಾಜ್ಯ ಅಪೆಕ್ಸ್‌ ಬ್ಯಾಂಕು ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ₹ 800 ಕೋಟಿ ಮತ್ತು ₹ 1,800 ಕೋಟಿಯಂತೆ ಎರಡು ಕಂತುಗಳಲ್ಲಿ ಈವರೆಗೆ ₹ 2,600 ಕೋಟಿ ಬಿಡುಗಡೆ ಮಾಡಿದೆ.

ಏಪ್ರಿಲ್‌ವರೆಗಿನ ಅರ್ಹ ಫಲಾನುಭವಿಗಳ ಸಾಲ ಮನ್ನಾ ಮೊತ್ರವಾದ ₹ 880 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ. ಅಲ್ಲದೆ, ಏಪ್ರಿಲ್‌ ತಿಂಗಳ ಅಂತ್ಯದವರೆಗಿನ ಸಾಲಗಳಿಗೆ ₹ 1,000 ಕೋಟಿ, ಮೇ ತಿಂಗಳ ಅಂತ್ಯದವರೆಗಿನ ಮೊತ್ತವೂ ಸೇರಿದರೆ ₹ 2,041 ಕೋಟಿ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮೇ 25ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ. ಹೀಗಾಗಿ, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಾಲ ಮನ್ನಾಕ್ಕೆ ಅರ್ಹರಾದ ಫಲಾನುಭವಿಗಳನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಾಲ ಮನ್ನಾಕ್ಕೆ ಅರ್ಹರಾದವರಿಗೆ ನೀತಿಸಂಹಿತೆ ಮುಗಿದ ತಕ್ಷಣ ಹಣ ಬಿಡುಗಡೆ ಮಾಡಲು ಅನುಕೂಲವಾಗುವಂತೆ ಈ ಅನುದಾನವನ್ನು ಖಜಾನೆಯಲ್ಲಿ ಠೇವಣಿ ಇಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಹಕಾರ ಇಲಾಖೆ ಚಿಂತನೆ ನಡೆಸಿದೆ.

1,000 ಕೋಟಿ ಉಳಿಕೆ: ಸಾಲ ಮನ್ನಾ ಯೋಜನೆಗೆ ಸರ್ಕಾರ ವಿಧಿಸಿದ ಕೆಲವು ಷರತ್ತುಗಳ ವ್ಯಾಪ್ತಿಗೆ 1 ಲಕ್ಷಕ್ಕೆ ಹೆಚ್ಚು ರೈತರ ಬರುವುದಿಲ್ಲ. ಈ ಕಾರಣಕ್ಕೆ ಈಗಾಗಲೇ ಅಂದಾಜಿಸಲಾದ ಒಟ್ಟು ಸಾಲ ಮನ್ನಾ ಮೊತ್ತದಲ್ಲಿ ಸುಮಾರು 1,000 ಕೋಟಿ ಉಳಿಕೆ ಆಗಬಹುದು ಎಂದೂ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT