ಸಾಲ ಮನ್ನಾ: 809 ರೈತರ ಖಾತೆಗಳಿಂದ ₹ 4.47 ಲಕ್ಷ ವಾಪಸ್‌

ಬುಧವಾರ, ಜೂನ್ 26, 2019
23 °C
ಸಾಲ ಮನ್ನಾ ಹಣ ಜಮೆಯಲ್ಲಿ ‘ಅನರ್ಹರ’ ಗೊಂದಲ

ಸಾಲ ಮನ್ನಾ: 809 ರೈತರ ಖಾತೆಗಳಿಂದ ₹ 4.47 ಲಕ್ಷ ವಾಪಸ್‌

Published:
Updated:

ಯಾದಗಿರಿ: ಜಿಲ್ಲೆಯ ರೈತರ ಖಾತೆಗಳಿಗೆ ಜಮೆ ಮಾಡಿದ್ದ ಸಾಲ ಮನ್ನಾದ ಹಣವನ್ನು ಬ್ಯಾಂಕ್‌ನವರು ಕೆಲ ರೈತರ ಖಾತೆಗಳಿಂದ ವಾಪಸು ಪಡೆದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ‘ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಹಣ ವಾಪಸ್‌ ಪಡೆದು ತಮ್ಮನ್ನು ವಂಚಿಸಿದೆ’ ಎಂದು ರೈತರು ದೂರುತ್ತಿದ್ದಾರೆ.

‘ಜಿಲ್ಲೆಯ 69,965 ರೈತರು  ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಈ ಪೈಕಿ 39,620 ರೈತರ ₹2.40 ಕೋಟಿ ಸಾಲ ಮನ್ನಾ ಆಗಿದೆ. 809 ರೈತರ ಖಾತೆಗೆ ಜಮೆ ಮಾಡಿದ್ದ ₹4.47 ಲಕ್ಷ  ಸಾಲ ಮನ್ನಾ ಹಣವನ್ನು ವಾಪಸ್‌ ಪಡೆಯಲಾಗಿದೆ’ ಎಂದು ಜಿಲ್ಲಾ  ಲೀಡ್ ಬ್ಯಾಂಕ್ ವ್ಯವಸ್ಥಾಪಕ  ಗೋಪಾಲ ರಾವ್ ತಿಳಿಸಿದರು.

‘ಸಾಲ ಮನ್ನಾಕ್ಕೆ ಅರ್ಹ ರೈತರ ಪಟ್ಟಿ ಕಳುಹಿಸುವಾಗ ವ್ಯತ್ಯಾಸವಾಗಿತ್ತು. ಸುಸ್ತಿದಾರರು, ಸಾಲ ಮನ್ನಾಕ್ಕೆ ಅರ್ಹರಲ್ಲದ ರೈತರ ಹೆಸರುಗಳೂ ಈ ಪಟ್ಟಿಯಲ್ಲಿ ಇದ್ದವು. ಸಾಲ ಮನ್ನಾ ಹಣ ಅವರಿಗೂ ಜಮೆಯಾಗಿತ್ತು. ರಾಜ್ಯಮಟ್ಟದ ಬ್ಯಾಂಕರ್ಸ್ ಕಮಿಟಿ ಸೂಚನೆಯಂತೆ, ಸಾಲಮನ್ನಾಕ್ಕೆ ಅರ್ಹರಲ್ಲದ ಜಿಲ್ಲೆಯ 809 ರೈತರ ಖಾತೆಯಿಂದ ಹಣ ವಾಪಸ್ ಪಡೆಯಲಾಗಿದೆ’ ಎಂದು ಅವರು ಹೇಳಿದರು.

‘ರೈತರ ಖಾತೆಗೆ ಹಣ ಜಮೆ ಮಾಡಿ’

‘ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ 2,154 ರೈತರ ಖಾತೆಗಳಿಗೆ ಸಾಲ ಮನ್ನಾ ಹಣ ಪಾವತಿ ಮಾಡಿ ಈಗ ವಾಪಸ್‌ ಪಡೆದಿರುವುದು ರೈತ ವಿರೋಧಿ ಕ್ರಮ. ರೈತರ ಖಾತೆಗಳಿಗೆ ತಕ್ಷಣ ಸಾಲ ಮನ್ನಾ ಹಣ ಜಮೆ ಮಾಡಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್‌ ಅವರು ಕಲಬುರ್ಗಿ ಯಲ್ಲಿ ಒತ್ತಾಯಿಸಿದರು.

ಬ್ಯಾಂಕ್‌ಗಳ ತಪ್ಪನ್ನು ಮೋದಿಗೆ ಹೇಳಿ: ಎಚ್‌ಡಿಕೆ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿನಾಲು ಹೊಗಳುತ್ತೀರಲ್ಲ, ಸಾಲ ಮನ್ನಾದ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಲೋಪದ ಬಗ್ಗೆ ಹೋಗಿ ಮೋದಿಗೆ ತಿಳಿಸಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಮಾಧ್ಯಮಗಳ ಮೇಲೆ ಹರಿಹಾಯ್ದರು.

‘ಯಾದಗಿರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನವರು ತಪ್ಪಾಗಿದೆ ಎಂದು ಹೇಳಿದರೂ, ನಮ್ಮನ್ನು ದೂಷಿಸಿ ಸುಮ್ಮನೆ ಸುದ್ದಿ ಮಾಡುತ್ತಿದ್ದೀರಿ’ ಎಂದು ಕಿಡಿ ಕಾರಿದರು. ‘ರಾಜ್ಯ ಅಭಿವೃದ್ಧಿಯಾಗಬೇಕಾ ಅಥವಾ ಹಾಳಾಗಬೇಕಾ ನೀವೇ ನಿರ್ಧಾರ ಮಾಡಿ. ಅಸತ್ಯವನ್ನು ಪ್ರತಿ ದಿನ ತೋರಿಸಿ ಏನು ಸಾಧನೆ ಮಾಡುತ್ತೀರಾ. ಸರ್ಕಾರದ ವಿರುದ್ಧ ಸುಳ್ಳು ಹೇಳಿ ಏನು ಸಾಧಿಸುತ್ತೀರಾ’ ಎಂದೂ ಪ್ರಶ್ನಿಸಿದರು. ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೇ 14ರ ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !