ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಅಮಿತ್‌ ಶಾ ಮೊದಲ ಭಾಷಣ ನಾಳೆ!

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಆಗಸ್ಟ್‌ನಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸೋಮವಾರ ಸದನದಲ್ಲಿ ಮೊದಲ ಬಾರಿಗೆ ಭಾಷಣ ಮಾಡಲಿದ್ದಾರೆ.

ಬಜೆಟ್‌ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿ ಅವರು ಮಾತನಾಡಲಿದ್ದಾರೆ.

ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಜನವರಿ 4ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತಿದ್ದುಪಡಿ ಮಸೂದೆ ಕುರಿತು ಅವರು ಮೊದಲ ಬಾರಿಗೆ ಮಾತನಾಡಬೇಕಿತ್ತು. ಆ ಸಂಬಂಧ ಅವರು ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿದ್ದರು.

ಆದರೆ, ಅಂದು ತ್ರಿವಳಿ ತಲಾಖ್ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ಜಿಎಸ್‌ಟಿ ಮಸೂದೆ ಚರ್ಚೆಗೆ ಬರಲಿಲ್ಲ.

ಅದು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಕಾರಣ ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಜಿಎಸ್‌ಟಿ ಹಾಗೂ ತೆರಿಗೆ ಕಾನೂನು ಕುರಿತು ಬಿಜೆಪಿ ನಿಲುವನ್ನು ಮಂಡಿಸುವ ಅವಕಾಶ ಶಾ ಕೈತಪ್ಪಿತ್ತು.

ಗುಜರಾತ್‌ ವಿಧಾನಸಭೆಯಲ್ಲಿ ಅನೇಕ ವರ್ಷ ಶಾಸಕರಾಗಿ, ಸಚಿವರಾಗಿ ಶಾ ಅನುಭವ ಪಡೆದಿದ್ದಾರೆ. ಆದರೆ, ಇದುವರೆಗೂ ಸಂಸತ್‌ನಲ್ಲಿ ಮಾತನಾಡಿಲ್ಲ.

ಕಳೆದ ವರ್ಷ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ರಾಜ್ಯಸಭೆಯಲ್ಲಿ ವಂದನಾ ನಿರ್ಣಯ ಮಂಡಿಸಿದ್ದರು.

ರಾಜ್ಯಸಭೆಯತ್ತ ಎಲ್ಲರ ಕಣ್ಣು!

ಸೋಮವಾರ ಮಧ್ಯಾಹ್ನ ವಂದನಾ ನಿರ್ಣಯ ಮಂಡಿಸಲಿರುವ ಶಾ, ತ್ರಿವಳಿ ತಲಾಖ್‌ ಮತ್ತು ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ಕುರಿತು ಚರ್ಚೆಗೆ ನಾಂದಿ ಹಾಡಲಿದ್ದಾರೆ. ಹೀಗಾಗಿ ಸದನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಂಭವ ಇದೆ.

ವಂದನಾ ನಿರ್ಣಯದ ಕುರಿತು ಚರ್ಚಿಸಲು ಸೋಮವಾರ ಮತ್ತು ಮಂಗಳವಾರ ಸೇರಿ ಒಟ್ಟು 12 ತಾಸು ನಿಗದಿ ಮಾಡಲಾಗಿದೆ. ಎರಡೂ ದಿನವೂ ರಾತ್ರಿ 8 ಗಂಟೆಯವರೆಗೆ ರಾಜ್ಯಸಭಾ ಕಲಾಪ ನಡೆಯಲಿದೆ.

ಮಂಗಳವಾರ ಸಂಜೆ ಇಲ್ಲವೇ ಬುಧವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಚರ್ಚೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಉತ್ತರ ನೀಡುವ ಸಾಧ್ಯತೆ ಇದೆ. ಫೆಬ್ರುವರಿ 7ರಂದು ಬಜೆಟ್‌ ಕುರಿತು ಚರ್ಚೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT