ಬೆಂಗಳೂರು: ರಾಜ್ಯದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎಂಟು ತಿಂಗಳುಗಳು ಕಳೆದಿದ್ದು, ಇನ್ನೂ ಸಹ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಇದರಿಂದಾಗಿ ಸ್ಥಳೀಯಾಡಳಿತದಲ್ಲಿ ಆಡಳಿತಾಧಿಕಾರಿಗಳೇ ದರ್ಬಾರು ನಡೆಸುತ್ತಿದ್ದಾರೆ.
ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ 109 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್ 31ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಫಲಿತಾಂಶ ಪ್ರಕಟಿಸಲಾಗಿತ್ತು.
‘ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸೆ.3ರಂದು ಮೀಸಲು ನಿಗದಿ ಮಾಡಿ ಹೊರಡಿಸಿದ್ದ ಪಟ್ಟಿಯಲ್ಲಿ ರೊಟೇಷನ್ ಪಾಲಿಸಿಲ್ಲ. ಹಾಗಾಗಿ ಬಹುತೇಕ ಕಡೆ ಮೀಸಲು ಪುನರಾವರ್ತನೆ ಆಗಿದೆ. ಆದ್ದರಿಂದ ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹಲವು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ ಈ ವರ್ಷದ ಜನವರಿಯಲ್ಲಿ ಮಧ್ಯಂತರ ತಡೆ ನೀಡಿದೆ. ಈ ತಡೆ ಇನ್ನೂ ತೆರವು ಆಗಿಲ್ಲ. ಇದರಿಂದಾಗಿ ಸ್ಥಳೀಯ ಆಡಳಿತಕ್ಕೆ ಗ್ರಹಣ ಹಿಡಿದಂತೆ ಆಗಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.
‘ಮೀಸಲು ನಿಗದಿ ಪ್ರಕರಣ ನ್ಯಾಯಾಲಯದಲ್ಲಿದೆ. ಈ ತಡೆಯಾಜ್ಞೆಯನ್ನು ತೆರವು ಮಾಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.