ಲೋಕಸಭೆ ಚುನಾವಣೆಗೆ ಮೈತ್ರಿ ಅನಿವಾರ್ಯ

7
ಕಾಂಗ್ರೆಸ್‌ಗೆ ತೃಪ್ತಿ ನೀಡದ ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಜೆಡಿಎಸ್‌ ಜತೆ ಸಾಗಲು ಒಲ್ಲದ ಮನಸ್ಸು

ಲೋಕಸಭೆ ಚುನಾವಣೆಗೆ ಮೈತ್ರಿ ಅನಿವಾರ್ಯ

Published:
Updated:

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಮೈತ್ರಿ ಅನಿವಾರ್ಯ ಎಂಬ ಮುನ್ಸೂಚನೆಯನ್ನು 105 ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ನೀಡಿದೆ!

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿಗಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಪಡೆದರೂ, ಒಟ್ಟಾರೆ ಫಲಿತಾಂಶ ಕಾಂಗ್ರೆಸ್‌ಗೆ ತೃಪ್ತಿದಾಯಕವಾಗಿಲ್ಲ. 2013ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1300ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದಿದ್ದ ಕೈ ಪಕ್ಷ, ಈ ಬಾರಿ 982 ವಾರ್ಡ್‌ಗಳಿಗೆ ತೃಪ್ತಿಪಟ್ಟುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಬಿಜೆಪಿ 929 ವಾರ್ಡ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

ವಿಧಾನಸಭಾ ಚುನಾವಣೆಯಂತೆ ನಗರ ಸ್ಥಳೀಯ ಸಂಸ್ಥೆಯಲ್ಲೂ ಮತದಾರ ಯಾವುದೇ ಒಂದು ಪಕ್ಷಕ್ಕೂ ಸ್ಪಷ್ಟ ತೀರ್ಪು ನೀಡಿಲ್ಲ. ಹೀಗಾಗಿ ಮೂರೂ ರಾಜಕೀಯ ಪಕ್ಷಗಳಲ್ಲಿ ಆತಂಕ ಆರಂಭವಾಗಿದೆ. ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒಂದಾಗುತ್ತಿವೆ. ರಾಜ್ಯದಲ್ಲೂ ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಎಸ್‌ಪಿ ವರಿಷ್ಠರು ಪರಸ್ಪರ ಕೈ ಜೋಡಿಸಲು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ, ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗಿನ ಸಂಬಂಧ ಮುಂದುವರಿಸಲು ಮನಸ್ಸಿಲ್ಲ. ಈ ಮೈತ್ರಿಯಿಂದ ಜೆಡಿಎಸ್‌ಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಶಕ್ತಿ ಕಳೆದುಕೊಳ್ಳುವ ಸ್ಥಿತಿ ಉಂಟಾಗಬಹುದು ಎಂದು ಕಾಂಗ್ರೆಸ್‌ ನಾಯಕರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಲೋಕಸಭೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದಾಗಲೇ ಕಾಂಗ್ರೆಸ್‌ಗೆ ಅನುಕೂಲ ಆಗಿದ್ದು ಹೆಚ್ಚು. ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜೆಡಿಎಸ್‌ ಮತದಾರರು ನಮಗೆ ಮತ ಹಾಕುತ್ತಾರೆ ಎಂಬ ಖಾತರಿ ಏನು’ ಎಂದೂ ಅವರು ಪ್ರಶ್ನಿಸಿದರು.

‘ಮೇಲ್ನೋಟಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಮೈತ್ರಿ ಅನಿವಾರ್ಯ ಎಂದು ಕಂಡುಬಂದರೂ, ವಾಸ್ತವ ಸ್ಥಿತಿ ಬೇರೆಯೇ ಇದೆ. ಜೆಡಿಎಸ್ ಕೇಳಬಹುದಾದ ಕೆಲವು ಸ್ಥಾನಗಳನ್ನು ಬಿಟ್ಟುಕೊಟ್ಟರೆ, ಕಾಂಗ್ರೆಸ್‌ ಪಾಲಿಗೆ ಆತ್ಮಹತ್ಯೆಯ ನಡೆಯಾಗುತ್ತದೆ’ ಎಂದರು. 

ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮುನ್ನಡೆ: ಮೂರು ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ 33.52, ಬಿಜೆಪಿ ಶೇ 31.07 ಮತ್ತು ಜೆಡಿಎಸ್‌ ಶೇ 16.53 ಮತಗಳನ್ನು ಪಡೆದಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮತ ಪ್ರಮಾಣವನ್ನು ಒಟ್ಟಗೂಡಿಸಿದರೆ ಶೇ 50.05 ಮತ ಆಗುತ್ತದೆ.

ಲೋಕಸಭೆ ಚುನಾವಣೆಯಲ್ಲೂ ಇದೇ ಪ್ರಮಾಣದಲ್ಲಿ ಮತ ಚಲಾವಣೆಯಾದರೆ 18ರಿಂದ 20 ಸ್ಥಾನಗಳನ್ನು ಗೆಲ್ಲಬಹುದು ಎನ್ನುವುದು ಕಾಂಗ್ರೆಸ್‌– ಜೆಡಿಎಸ್ ನಾಯಕರ ಲೆಕ್ಕಾಚಾರ.

ಬಿಜೆಪಿ ನಾಯಕರು ಈ ವಾದವನ್ನು ಒಪ್ಪುವುದಿಲ್ಲ. ರಾಜ್ಯದಲ್ಲಿ ಪ್ರತಿ ಬಾರಿ ಲೋಕಸಭೆ ಚುನಾವಣೆಗೆ ಜನರ ಒಲವು– ನಿಲುವು ಬೇರೆಯೇ ಆಗಿರುತ್ತದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಪಕ್ಷಕ್ಕೆ ಅನುಕೂಲವಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ವಿಶ್ವಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !