ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ: ಆಯಾ ಜಿಲ್ಲಾ ಮುಖಂಡರ ನಿರ್ಧಾರ -ಸಿದ್ದರಾಮಯ್ಯ

7

ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ: ಆಯಾ ಜಿಲ್ಲಾ ಮುಖಂಡರ ನಿರ್ಧಾರ -ಸಿದ್ದರಾಮಯ್ಯ

Published:
Updated:

ನವದೆಹಲಿ: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಮೈತ್ರಿ ಮತ್ತು ಹೊಂದಾಣಿಕೆಯ ನಿರ್ಧಾರ ಕೈಗೊಳ್ಳುವ ಅಧಿಕಾರವವನ್ನು ಪಕ್ಷದ ಆಯಾ ಜಿಲ್ಲಾ ಮುಖಂಡರಿಗೇ ನೀಡಲಾಗಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ಸ್ಥಳೀಯ ಸಮಸ್ಯೆ, ಅಭಿವೃದ್ಧಿಯನ್ನು ಆಧರಿಸಿದ ವಿಷಯಗಳು ಚರ್ಚೆಗೊಳಗಾಗುತ್ತವೆ. ಆಯಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಪಕ್ಷದ ಜಿಲ್ಲಾ ಅಧ್ಯಕ್ಷರೇ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಶ್ರಮಿಸಲಿವೆ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎನ್‌.ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗಲೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆಗಲೂ ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಮೈತ್ರಿ ಮಾಡಿಕೊಳ್ಳದೇ ಇದ್ದರೂ ಸರ್ಕಾರದ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೆ ಸ್ಪರ್ಧಿಸುವುದಿಲ್ಲ
‘ಇತ್ತೀಚೆಗೆ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದೇ ನನ್ನ ಕೊನೆಯ ಚುನಾವಣೆ. ನಾನು ಮತ್ತೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

‘ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ರಾಷ್ಟ್ರ ರಾಜಕಾರಣಕ್ಕೆ ಬರಲಿದ್ದೇನೆ ಎಂಬುದು ಕೇವಲ ವದಂತಿ. 2013ರ ನಂತರ ನಾನು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಲು ಬಯಸಿದ್ದೆ. ಚುನಾವಣಾ ರಾಜಕೀಯದಿಂದ ನಿವೃತ್ತನಾದರೂ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ’ ಎಂದು ಅವರು ಹೇಳಿದರು.

‘75 ವರ್ಷ ಮೀರಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಮತದಾರರ ಸಮಸ್ಯೆಗಳ ನಿವಾರಣೆ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಂತರ ಓಡಾಟ ಅಗತ್ಯ. ಆ ವಯಸ್ಸಿನಲ್ಲಿ ನಡೆದಾಡಲೂ ಆಗದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಇದು ನನ್ನ ವೈಯಕ್ತಿಕ ವಿಚಾರ. ಎಚ್‌.ಡಿ. ದೇವೇಗೌಡ ಮತ್ತಿತರ ಹಿರಿಯರು ಈಗಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಅವರವರ ವೈಯಕ್ತಿಕ ವಿಚಾರ’ ಎಂದು ಸ್ಪಷ್ಟಪಡಿಸಿದರು.

 ಸಮಿತಿ ಸಭೆಯಲ್ಲೇ ಚರ್ಚೆ
‘ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ವಿಶ್ವವಿದ್ಯಾಲಯಗಳ ಸೆನೆಟ್‌ಗೆ ನೇಮಕ, ಆರಂಭಿಸಿದ್ದ ಜನಪರ ಕಾರ್ಯಕ್ರಮ ರದ್ದತಿಯ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ವಾತಂತ್ರ್ಯವಿದೆ. ಪಕ್ಷದಲ್ಲಿ ಈ ಕುರಿತು ಅಸಮಾಧಾನ ಇರುವುದು ಸಹಜ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಗೊಂದಲ ಬಗೆಹರಿಸಲಾಗುವುದು’ ಎಂದು ಅವರು ಹೇಳಿದರು.

‘ಹಿಂದೂಗಳ ಕಡೆಗಣನೆಯಿಂದ ಕಾಂಗ್ರೆಸ್ ಸೋಲು’

ಮಂಗಳೂರು: ‘ಹಿಂದೂಗಳನ್ನು ಕಡೆಗಣಿಸಿದ್ದೇ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲು ಕಾರಣ' ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ‌ ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಿತ್ತು. ಈಗ ಹೀನಾಯವಾಗಿ ಸೋತಿದೆ. ಕಳೆದ ಚುನಾವಣೆಯಲ್ಲಿ ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು. ಈ ಚುನಾವಣೆಯಲ್ಲಿ ಈ ಮತಗಳು ಎಲ್ಲಿ ಹೋದವು ಎಂಬುದನ್ನು ಕಾಂಗ್ರೆಸ್ ತಿಳಿಯಬೇಕು' ಎಂದರು.

ಶೋಭೆ ತರಲ್ಲ–ಖಾದರ್: ಹೇಳಿಕೆ ಕುರಿತು ಪ್ರತಿಕ್ರಯಿಸಿದ ಸಚಿವ ಯು.ಟಿ.ಖಾದರ್, ‘ಭೋಜೇಗೌಡರ ಹೇಳಿಕೆ ಆಶ್ಚರ್ಯ ತಂದಿದೆ. ಅವರು ಈ ಜಿಲ್ಲೆಯವರಲ್ಲ. ಜನಪ್ರತಿನಿಧಿಗಳು ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರಲ್ಲ. ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಕೆಲಸ ಮಾಡುವುದಿಲ್ಲ. ಸಂವಿಧಾನದ ಆಶಯದಂತೆ ನಮ್ಮ ಪಕ್ಷ ನಡೆಯುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !