ಗುರುವಾರ , ಡಿಸೆಂಬರ್ 12, 2019
17 °C

ಸ್ಥಳೀಯ ಸಂಸ್ಥೆಗಳ ಚುನಾವಣೆ: ರಾಜ್ಯದ ವಿವಿಧೆಡೆ ಮತದಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ 6 ನಗರಸಭೆ ಸೇರಿದಂತೆ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 418 ವಾರ್ಡ್‌ಗಳಿಗೆ ಮತದಾನ ನಡೆಯಲಿದ್ದು, ಮತದಾನ ನಡೆಯಲಿರುವ ಸ್ಥಳಗಳಲ್ಲಿ ರಜೆ ಘೋಷಿಸಲಾಗಿದೆ.

ಎಲ್ಲೆಲ್ಲಿ ಚುನಾವಣೆ

ನಗರಸಭೆ– ಕನಕಪುರ, ಕೋಲಾರ, ಮುಳಬಾಗಲು, ಕೆ.ಜಿ.ಎಫ್ (ರಾಬರ್ಟ್‌ಸನ್‌ಪೇಟೆ), ಗೌರಿಬಿದನೂರು, ಚಿಂತಾಮಣಿ. ಪುರಸಭೆ– ಮಾಗಡಿ, ಬೀರೂರು, ಕಂಪ್ಲಿ ಪುರಸಭೆ. ಪಟ್ಟಣ ಪಂಚಾಯಿತಿ–  ಜೋಗ– ಕಾರ್ಗಲ್, ಕುಂದಗೋಳ, ಕೂಡ್ಲಿಗಿ.


ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದರು.

ಮಂಗಳೂರಿನಲ್ಲಿ ಚುರುಕಿನ ಆರಂಭ

ಮಂಗಳೂರು ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಮಂಗಳವಾರ ಮುಂಜಾನೆ ಮತದಾನ ಆರಂಭವಾಯಿತು. ನಗರದ ಸೇಂಟ್ ಸಬಾಸ್ಟಿಯನ್ ಶಾಲೆಯಲ್ಲಿ 92 ವರ್ಷದ ಮಹಿಳೆ ಯಜಿನಿ ಕುಲಾಸೊ ತಮ್ಮ ಹಕ್ಕನ್ನು ಚಲಾಯಿಸಿದರು.

ಮಂಗಳೂರಿನ ಲೇಡಿಹಿಲ್ ಬಳಿ ಇರುವ ಸೇಂಟ್ ಅಲೋಶಿಯಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತಚಲಾಯಿಸಿದರು.

ಮಂಗಳೂರಿನ ಉರ್ವ ಮಾರಿಗುಡಿ ಬಳಿ ಇರುವ ಗಾಂಧಿನಗರ ಸರಕಾರಿ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ ಚಲಾಯಿಸಿದರು.


ಮಂಗಳೂರಿನ ಗಾಂಧಿನಗರ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ ಚಲಾಯಿಸಿದರು.


ಮಂಗಳೂರಿನ ಸೇಂಟ್ ಸಬೆಸ್ಟಿಯನ್ ಶಾಲೆಯಲ್ಲಿ 92 ವರ್ಷದ ಹಿರಿಯ ಮಹಿಳೆ ಯಜಿನಿ ಕುಲಾಸೊ ಮತದಾನ ಮಾಡಿದರು.

ಮಾಗಡಿಯಲ್ಲಿ ಮತಗಟ್ಟೆ ಪೂಜೆಗೆ ಯತ್ನ

ರಾಮನಗರ: ಜಿಲ್ಲೆಯ ಕನಕಪುರ ನಗರಸಭೆ ಹಾಗೂ‌ ಮಾಗಡಿ ಪುರಸಭೆಗೆ‌ ಮತದಾನ ಪ್ರಕ್ರಿಯೆಯು ಮಂಗಳವಾರ ಬೆಳಿಗ್ಗೆ ಏಳಕ್ಕೆ ಆರಂಭಗೊಂಡಿತು. ಕನಕಪುರದಲ್ಲಿನ 24 ಹಾಗೂ‌ ಮಾಗಡಿಯಲ್ಲಿನ 23 ವಾರ್ಡುಗಳಿಗೆ ಚುನಾವಣೆ ನಡೆದಿದೆ.

ಮಾಗಡಿಯ ಹೊಸಪೇಟೆ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಆರಂಭಗೊಳ್ಳುತ್ತಲೇ ವ್ಯಕ್ತಿಯೊಬ್ಬ ಬಾಳೆಹಣ್ಣು, ಗಂಧದ‌ ಕಡ್ಡಿ, ಕರ್ಪೂರ ಸಮೇತ ಮತಗಟ್ಟೆಗೆ ಬಂದಿದ್ದು, ಮತಯಂತ್ರಕ್ಕೆ ಪೂಜೆ ಸಲ್ಲಿಸಿದ ನಂತರವಷ್ಟೇ ಮತದಾನ ಆರಂಭಿಸಬೇಕು ಎಂದು ಪಟ್ಟು ಹಿಡಿದಿದ್ದ.‌ ಮತಗಟ್ಟೆ ಸಿಬ್ಬಂದಿ ಆತ‌ನನ್ನು ವಾಪಸ್ ಕಳುಹಿಸಲು ಪ್ರಯಾಸ ಪಟ್ಟರು.

ದಾವಣಗೆರೆ: ಹಸ್ತದ ಗುರುತಿನ ಸ್ಲಿಪ್‌ಗೆ ಬಿಜೆಪಿ ಆಕ್ಷೇಪ

ಮಹಾನಗರ ಪಾಲಿಕೆಯ 45 ವಾರ್ಡಗಳಿಗೆ ಮಂಗಳವಾರ ಬೆಳಿಗ್ಗೆ 7ರಿಂದ ಮತದಾನ ಆರಂಭಗೊಂಡಿತು. ನಗರದಲ್ಲಿ 377 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 208 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

'ಕೈ' ಸ್ಲಿಪ್‌ಗೆ ಆಕ್ಷೇಪ: 39ನೇ ವಾರ್ಡ್‌ ವ್ಯಾಪ್ತಿಯ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತದಾರರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸ್ತದ ಚಿತ್ರ ಇರುವ ಸ್ಲಿಪ್‌ ಕೊಟ್ಟು ಕಳುಹಿಸುತ್ತಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಗೀತಾ ದಿಳ್ಯಪ್ಪ ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ಮತದಾರಿಗೆ ಕೊಟ್ಟು ಕಳುಹಿಸಿತ್ತಿದ್ದ ಹಸ್ತದ ಚಿತ್ರ ಇರುವ ಸ್ಲಿಪ್‌ ವಶಪಡಿಸಿಕೊಂಡು ಮತಗಟ್ಟೆ ಅಧಿಕಾರಿಗೆ ದೂರು ನೀಡಿದರು. ಈ ರೀತಿಯ ಸ್ಲಿಪ್‌ ತರುವವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಬಾರದು, ಚುನಾವಣಾ ಆಯೋಗ ನೀಡುವ ಸ್ಲಿಪ್‌ ತರುವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಮತಗಟ್ಟೆ ಅಧಿಕಾರಿಯೂ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ದಾವಣಗೆರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಸ್ತದ ಚಿತ್ರ ಇರುವ ಸ್ಲಿಪ್‌ ಕೊಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೀತಾ ದಿಳ್ಯಪ್ಪ ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು

ದಾವಣಗೆರೆ ಪಾಲಿಕೆ ಚುನಾವಣೆ: ಶೇ 8 ಮತದಾನ

ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್‌ಗಳಿಗೆ ಮಂಗಳವಾರ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 8ರಷ್ಟು ಮತದಾನ ದಾಖಲಾಗಿದೆ. 377 ಮತಗಟ್ಟೆಗಳಲ್ಲಿ ಒಟ್ಟು 15,355 ಪುರುಷ ಮತದಾರರು ಹಾಗೂ 14,995 ಮಹಿಳಾ ಮತದಾರರು ತಮ್ಕ ಹಕ್ಕನ್ನು ಚಲಾಯಿಸಿದ್ದಾರೆ.


ಕಂಪ್ಲಿ ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದ ವೃದ್ಧೆ

ಕಂಪ್ಲಿ ಪುರಸಭೆಗೆ ಮತದಾನ ಪ್ರಕ್ರಿಯೆ ಆರಂಭ

ಹೊಸಪೇಟೆ: ಕಂಪ್ಲಿ ಪುರಸಭೆಗೆ ಮತದಾನ ಪ್ರಕ್ರಿಯೆ ಆರಂಭ. ಬೆಳಿಗ್ಗೆಯೇ ಮತಗಟ್ಟೆ ಕೇಂದ್ರಗಳ ಎದುರು ಉದ್ದನೆಯ ಸಾಲು ಕಂಡು ಬಂದಿದ್ದು, ಜನ ಉತ್ಸಾಹದಿಂದ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು